ಬೆಂಗಳೂರು: ಪಿಎಸ್ಐ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ತನಿಖೆಗಾಗಿ ಎಸ್ಐಟಿ ರಚನೆ, ವಿಧಾನಸೌಧದ ಆವರಣದಲ್ಲಿ ಭುವನೇಶ್ವರಿ ಪ್ರತಿಮೆ ಸ್ಥಾಪನೆ ಹಾಗೂ ರಾಜಧಾನಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಬಗೆಹರಿಸಲು ಭವಿಷ್ಯದ ದೃಷ್ಟಿಯಿಂದ ಮೆಟ್ರೋ ಮೂರನೇ ಹಂತಕ್ಕೆ ಗುರುವಾರ ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ.
ವಿಧಾನಸೌಧದ ಕ್ಯಾಬಿನೆಟ್ ಸಭಾಂಗಣದಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಸತತ ಮೂರು ಗಂಟೆಗಳ ಕಾಲ ನಡೆದ ಸಚಿವ ಸಂಪುಟ ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು. ವಿಧಾನಸೌಧದ ಆವರಣದಲ್ಲಿ 23 ಕೋಟಿ ರೂ. ವೆಚ್ಚದಲ್ಲಿ ಭುವನೇಶ್ವರಿ ಪ್ರತಿಮೆ ಸ್ಥಾಪನೆಗೆ ತೀರ್ಮಾನ ಮಾಡಲಾಗಿದೆ. ಕೆಂಗಲ್ ಹನುಮಂತಯ್ಯ ಪ್ರತಿಮೆ ರಸ್ತೆಯ ಎಡಭಾಗದಲ್ಲಿ ಪ್ರತಿಮೆ ಸ್ಥಾಪನೆಯಾಗಲಿದ್ದು, ಇದಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಂಪೇಗೌಡ ಪ್ರತಿಮೆಗೆ 40ರಿಂದ 60 ಕೋಟಿ ರೂ. ಖರ್ಚಾಗಿತ್ತು. ಇಲ್ಲೂ ಸಹ ಪಾರ್ಕ್, ಲೋಹ, ಕಲ್ಲು ಮತ್ತಿತರ ಸಲಕರಣೆಗಳಿಗೆ ಹಣ ಬೇಕಾಗುತ್ತದೆ ಎಂದರು.
ಮೆಟ್ರೋ 3 ನೇ ಹಂತ:ಬೆಂಗಳೂರಿನಲ್ಲಿ ಸಂಚಾರದ್ದೇ ದೊಡ್ಡ ಸಮಸ್ಯೆಯಾಗಿದೆ. ಇದನ್ನು ಬಗೆಹರಿಸುವುದಕ್ಕೆ ಮೆಟ್ರೋದಿಂದ ಮಾತ್ರ ಸಾಧ್ಯ. ಹಾಗಾಗಿ, ಭವಿಷ್ಯದ ಅವಶ್ಯಕತೆ ಗಮನದಲ್ಲಿಟ್ಟುಕೊಂಡು ಎರಡು ಮಾರ್ಗಗಳನ್ನು ಕೈಗೆತ್ತಿಕೊಳ್ಳಲು ಮೆಟ್ರೋ 3ನೇ ಹಂತಕ್ಕೆ ಸಂಪುಟ ಒಪ್ಪಿಗೆ ನೀಡಿದೆ. ಜೆ.ಪಿ.ನಗರ, ಸಿಲ್ಕ್ ಬೋರ್ಡ್ನಿಂದ ಕೆಲಸ ನಡೆಯುತ್ತಿದೆ. ಸಿಲ್ಕ್ ಬೋರ್ಡ್ನಿಂದ ಹೆಬ್ಬಾಳ ಪ್ಲೈಓವರ್ ವರೆಗೆ ಬಂದಿದೆ. ಸುಮಾರು 32.15 ಕಿ.ಲೋ. ಮೀಟರ್ವರೆಗೆ ನಡೆಯಲಿದೆ. ಮೂರನೇ ಹಂತದ ಮೆಟ್ರೋ 15,611 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಕೈಗೆತ್ತಿಕೊಳ್ಳಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಸಚಿವರು ತಿಳಿಸಿದರು.
ಎಸ್ಐಟಿ ತನಿಖೆ:ಪಿಎಸ್ಐ ನೇಮಕಾತಿ ಹಗರಣ ಸಂಬಂಧ ನಿವೃತ್ತ ನ್ಯಾ.ಬಿ.ವೀರಪ್ಪ ನೇತೃತ್ವದ ಸಮಿತಿ ರಚಿಸಲಾಗಿದೆ. ಈ ಸಂಬಂಧ ವೀರಪ್ಪ ನೇತೃತ್ವದ ಸಮಿತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಸರ್ಕಾರಿ ಅಧಿಕಾರಿಗಳು, ಖಾಸಗಿ ಹಾಗೂ ಮಧ್ಯವರ್ತಿಗಳು ಸೇರಿ 113 ಮಂದಿ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ವರದಿ ನೀಡಲಾಗಿದೆ. ಇನ್ನೂ ಕೆಲವರು ಸಮನ್ಸ್ ನೀಡಿದರೂ ಮಾಹಿತಿ ಕೊಟ್ಟಿಲ್ಲ. ಸಾರ್ವಜನಿಕ ವಲಯದಲ್ಲಿ ಹೇಳಿಕೆಗಳನ್ನು ನೀಡಿದ್ದಾರೆ. ಆದರೆ, ಆಯೋಗದ ಮುಂದೆ ಹೇಳಿಕೆ ಕೊಟ್ಟಿಲ್ಲ. ಇನ್ನೂ ಕೆಲವು ವಿಚಾರಗಳ ಬಗ್ಗೆ ಬಗ್ಗೆ ತನಿಖೆ ನಡೆಸಲು ವೀರಪ್ಪನವರು ಸಲಹೆ ನೀಡಿದ್ದಾರೆ. ಹಾಗಾಗಿ, ಹೆಚ್ಚುವರಿ ತನಿಖೆಗಾಗಿ ಎಸ್ಐಟಿ ರಚಿಸಲು ಸಂಪುಟ ಒಪ್ಪಿಗೆ ನೀಡಿದೆ ಎಂದು ಹೇಳಿದರು.