ಮಂಡ್ಯ:ರಾಜ್ಯದಲ್ಲಿ ಮೈತ್ರಿ ಪಕ್ಷದ ಪರವಾಗಿ ಉತ್ತಮ ವಾತಾವರಣವಿದೆ. ಮೋದಿ ಮತ್ತು ದೇವೇಗೌಡರ ಜಂಟಿ ಪ್ರಚಾರದ ಬಳಿಕ ಬಿಜೆಪಿ-ಜೆಡಿಎಸ್‌ಗೆ ಮತಗಳು ಹೆಚ್ಚಳವಾಗಿವೆ ಎಂದು ಮಾಜಿ ಸಚಿವ ಸಿ.ಟಿ.ರವಿ ಹೇಳಿದರು. ಇದೇ ವೇಳೆ, ಕರ್ನಾಟಕದ ಜನರಿಗೆ ರಾಜ್ಯ ಸರ್ಕಾರದಿಂದ ಚಟ್ಟ ಭಾಗ್ಯ ಮಾತ್ರ ಸಿಗಲಿದೆ ಎಂದು ವ್ಯಂಗ್ಯವಾಡಿದರು.
ಕಾಂಗ್ರೆಸ್ ಅಪಪ್ರಚಾರವನ್ನು ಚುನಾವಣೆಯ ಅಸ್ತ್ರ ಮಾಡಿಕೊಂಡಿದೆ. ಬಿಜೆಪಿ ನೀತಿ ಆಧಾರದಲ್ಲಿ ಮತ ಕೇಳಿದ್ರೆ, ಕಾಂಗ್ರೆಸ್ ಜಾತಿ ಆಧಾರದಲ್ಲಿ ಮತ ಕೇಳುತ್ತಿದೆ. ಸುಳ್ಳು ಮತ್ತು ಅಪ್ರಚಾರ ಕಾಂಗ್ರೆಸ್‌ನವರ ವಿಷಯ. ದೇಶ ಮೊದಲು, ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಜಗತ್ತಿನಲ್ಲಿ ಭಾರತ ನಂ.1 ಸ್ಥಾನಕ್ಕೇರಿಸುವುದು, ಬಡವರಿಗೆ ಶಕ್ತಿ ತುಂಬಿ ಸ್ವಾಭಿಮಾನಿ, ಸ್ವಾವಲಂಬಿ ಮಾಡುವುದು, ಅಂಬೇಡ್ಕರ್ ಸಂವಿಧಾನಕ್ಕೆ ಶಕ್ತಿ ಕೊಟ್ಟು ಅದರ ಆಶಯವನ್ನು ಜನರಿಗೆ ತಲುಪಿಸುವುದು ನಮ್ಮ ನೀತಿ. ಆದರೆ, ಚುನಾವಣೆ ಗೆಲ್ಲುವ ಕುತಂತ್ರಕ್ಕಷ್ಟೇ ಕಾಂಗ್ರೆಸ್ ಸೀಮಿತ ಎಂದು ಟೀಕಿಸಿದರು.
ಕಾಂಗ್ರೆಸ್ ಓಲೈಕೆ ರಾಜನೀತಿಯ ಪರಿಣಾಮ ತಾಲಿಬಾನ್ ಮಾದರಿ ಆಡಳಿತ ನೆನಪಿಗೆ ಬರುತ್ತಿದೆ. ಮೋದಿ ಅಭಿವೃದ್ಧಿ ಟ್ರಯಲ್ ಮಾಡೆಲ್ ಮುಂದಿಟ್ಟು ಇದು ಟ್ರೇಲರ್ ಮಾತ್ರ ಎಂದಿದ್ದಾರೆ. ಕಾಂಗ್ರೆಸ್ ತಾಲಿಬಾನ್ ಆಡಳಿತದ ಟ್ರೇಲರ್ ಬಿಡುತ್ತಿದೆ. ಕಾಂಗ್ರೆಸ್‌ಗೆ ಜನರ ಹಿತ, ಕರ್ನಾಟಕದ ನೆಮ್ಮದಿಗಿಂತ ಓಟ್ ಬ್ಯಾಂಕ್ ಮುಖ್ಯ ಎಂದರು.