ಬೆಂಗಳೂರು: ಕೋಲಾರ ಟಿಕೆಟ್ ವಿಚಾರದಲ್ಲಿ ರಾಜೀನಾಮೆಗೆ ಮುಂದಾಗಿದ್ದ ಇಬ್ಬರು ವಿಧಾನ ಪರಿಷತ್ ಸದಸ್ಯರು ಹಾಗೂ ಮೂವರು ಶಾಸಕರನ್ನು ಮನವೊಲಿಸುವಲ್ಲಿ ಸಚಿವ ಬೈರತಿ ಸುರೇಶ್ ಸಫಲರಾಗಿದ್ದಾರೆ. ಅವರು ರಾಜೀನಾಮೆ ನೀಡಲು ಸಭಾಪತಿ ಕೊಠಡಿಗೆ ತೆರಳಿದ್ದ ಇಬ್ಬರು ಪರಿಷತ್ ಸದಸ್ಯರನ್ನು ರಾಜೀನಾಮೆ ನೀಡದಂತೆ ತಡೆದಿದ್ದಾರೆ. ಕೋಲಾರ ಟಿಕೆಟ್ಅನ್ನು ಸಚಿವ ಮುನಿಯಪ್ಪ ಕುಟುಂಬಕ್ಕೆ ನೀಡುವುದನ್ನು ಖಂಡಿಸಿ ಕೋಲಾರ ಭಾಗದ ಶಾಸಕರು ರಾಜೀನಾಮೆಗೆ ಮುಂದಾಗಿದ್ದು, ಅದರಂತೆ ವಿಧಾನ ಪರಿಷತ್ ಸದಸ್ಯರಾದ ನಜೀರ್ ಅಹ್ಮದ್ ಹಾಗೂ ಅನಿಲ್ ತಮ್ಮ ಸದಸ್ಯತ್ವಕ್ಕೆ ರಾಜೀನಾಮೆ ನೀಡಲು ಸಭಾಪತಿ ಬಸರವರಾಜ್ ಹೊರಟ್ಟಿ ಅವರನ್ನು ಭೇಟಿ ಮಾಡಿದ್ದರು.
ಈ ವೇಳೆ ಸಿಎಂ, ಡಿಸಿಎಂ ನಿರ್ದೇಶನದಂತೆ ಪಕ್ಷದ ಸಂದೇಶ ಹೊತ್ತು ತಂದ ಸಚಿವ ಬೈರತಿ ಸುರೇಶ್ ನಜೀರ್ ಹಾಗೂ ಅನಿಲ್ ಅವರು ರಾಜೀನಾಮೆ ನೀಡದಂತೆ ಮನವೊಲಿಕೆ ಮಾಡುವಲ್ಲಿ ಸಫಲರಾಗಿದ್ದಾರೆ. ಕೈ ಬರಹದಲ್ಲಿ ರಾಜೀನಾಮೆ ಪತ್ರ ಬರೆದಿದ್ದ ಸದಸ್ಯರು ರಾಜೀನಾಮೆ ನೀಡದೇ ಮತ್ತಷ್ಟು ಸಮಯಾವಕಾಶ ಬೇಕು ಎನ್ನುವ ಸ್ಪಷ್ಟೀಕರಣ ನೀಡಿ ಇಂದಿನ ಮಟ್ಟಿಗೆ ತಮ್ಮ ನಿರ್ಧಾರವನ್ನು ಬದಲಿಸಿದ್ದಾರೆ. ಇದಕ್ಕೂ ಮುನ್ನ ವಿಧಾನ ಪರಿಷತ್ ಸದಸ್ಯರಾದ ನಜೀರ್‌ಅಹ್ಮದ್ ಹಾಗೂ ಅನಿಲ್‌ಕುಮಾರ್ ಅವರು ತಮ್ಮ ರಾಜೀನಾಮೆ ಪತ್ರದೊಂದಿಗೆ ಸಭಾಪತಿ ಕೊಡಿಗೆ ಬಂದಿದ್ದು, ರಾಜೀನಾಮೆ ಪತ್ರಗಳನ್ನೂ ಮಾಧ್ಯಮದವರಿಗೆ ಪ್ರದರ್ಶಿಸಿದ್ದು ಕಂಡು ಬಂದಿತು.
ಈ ಕುರಿತು ಸಭಾಪತಿ ಬಸವರಾಜ್ ಹೊರಟ್ಟಿ ಮಾತನಾಡಿ, ಇಂದು ತೇಜಸ್ವಿನಿಗೌಡ ಹೊರತುಪಡಿಸಿ ಮತ್ತೆ ಯಾರೂ ರಾಜೀನಾಮೆ ಕೊಟ್ಟಿಲ್ಲ. ಕಾಂಗ್ರೆಸ್ ನ ಇಬ್ಬರು ಸದಸ್ಯರು ರಾಜೀನಾಮೆ ನೀಡುವುದಾಗಿ ಸಮಯ ಪಡೆದಿದ್ದರು, ಆದರೆ ಈಗ ರಾಜೀನಾಮೆ ಕೊಟ್ಟಿಲ್ಲ. ರಾಜೀನಾಮೆ ಕೊಡುವುದಾಗಿ ಬೆಳಗ್ಗೆ 11ಕ್ಕೆ ಕರೆ ಮಾಡಿದ್ದರು. ಅವರಿಗೆ 12.30 ರಿಂದ 1.00 ಗಂಟೆಯವರೆಗೆ ಸಮಯ ನೀಡಿದ್ದೆ. ಸಮಯಕ್ಕೆ ಬಂದರು ಬಿಳಿ ಹಾಳೆಯಲ್ಲಿ ರಾಜೀನಾಮೆ ಪತ್ರ ತಂದಿದ್ದರು, ಅದನ್ನು ಸ್ವೀಕರಿಸಲಿಲ್ಲ. ಲೆಟರ್ಹೆಡ್ ನಲ್ಲಿ ಬರೆದುಕೊಡಿ ಎಂದೆ, ನಂತರ ಲೆಟರ್ಹೆಡ್ ತರಿಸಿಕೊಂಡು ರಾಜೀನಾಮೆ ಪತ್ರ ಬರೆದರು. ಆದರೆ, ನನಗೆ ಕೊಡಲಿಲ್ಲ. ಈಗ ಇನ್ನೂ ಸ್ವಲ್ಪ ಸಮಯ ಬೇಕು ಎನ್ನುತ್ತಿದ್ದಾರೆ, ಅವರು ರಾಜೀನಾಮೆ ಕೊಡದಿದ್ದಲ್ಲಿ ನಾವು ಒತ್ತಾಯ ಮಾಡಲಾಗಲ್ಲ. ಅವರು ಕೊಟ್ಟರೆ ಸ್ವೀಕಾರ ಮಾಡುತ್ತೇನೆ, ಇಲ್ಲದಿದ್ದರೆ ಇಲ್ಲ ಎಂದರು.