ಕರ್ನಾಟಕ

karnataka

ETV Bharat / state

ಉಪ ಚುನಾವಣೆ ಫಲಿತಾಂಶ ರಾಜ್ಯ ಸರ್ಕಾರಕ್ಕೆ ಜನಾದೇಶವಲ್ಲ: ಬಸವರಾಜ ಬೊಮ್ಮಾಯಿ - BASAVARAJ BOMMAI ON BYPOLL RESULTS

ನಾವು ಅಧಿಕಾರದಲ್ಲಿದ್ದಾಗ 17 ಉಪ ಚುನಾವಣೆಗಳಲ್ಲಿ 13 ಗೆದ್ದಿದ್ದೇವೆ. ಕಾಂಗ್ರೆಸ್​ನವರು ಇದು ಸರ್ಕಾರದ ಪರ, ಜನರ ತೀರ್ಪು ಅಂತ ತಿಳಿದುಕೊಳ್ಳುವ ಅಗತ್ಯವೇನೂ ಇಲ್ಲ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

Basavaraj Bommai On By election 2024 results
ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ (ETV Bharat)

By ETV Bharat Karnataka Team

Published : Nov 26, 2024, 5:06 PM IST

ಬೆಂಗಳೂರು:ಮೂರು ಕ್ಷೇತ್ರಗಳ ಉಪ ಚುನಾವಣೆಯ ಫಲಿತಾಂಶ ರಾಜ್ಯ ಸರ್ಕಾರಕ್ಕೆ ನೀಡಿರುವ ಜನಾದೇಶವಲ್ಲ. ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಆಗುತ್ತಿಲ್ಲ ಎಂದು ಆಡಳಿತ ಪಕ್ಷದ ಶಾಸಕರೇ ಭ್ರಮನಿರಸನಗೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಬಿಜೆಪಿ ಕಚೇರಿಯಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾಮಾನ್ಯವಾಗಿ ಉಪ ಚುನಾವಣೆ ಸರ್ಕಾರದ ಪರವಾಗಿರುತ್ತವೆ. ನಾವು ಅಧಿಕಾರದಲ್ಲಿದ್ದಾಗ 17 ಉಪ ಚುನಾವಣೆಗಳಲ್ಲಿ 13 ಉಪ ಚುನಾವಣೆ ಗೆದ್ದಿದ್ದೇವೆ. ಕಾಂಗ್ರೆಸ್​ನವರು ಇದು ಸರ್ಕಾರದ ಪರ, ಜನರ ತೀರ್ಪು ಅಂತ ತಿಳಿದುಕೊಳ್ಳುವ ಅಗತ್ಯವಿಲ್ಲ. ಆಡಳಿತ ಪಕ್ಷದ ಶಾಸಕರೇ ಅಭಿವೃದ್ಧಿ ಆಗಿಲ್ಲ ಅಂತ ಭ್ರಮ ನಿರಸನಗೊಂಡಿದ್ದಾರೆ. ಈ ಚುನವಣೆ ಫಲಿತಾಂಶ ಉಪ ಚುನಾವಣೆ ನಡೆದ ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿರುತ್ತದೆ ಎಂದು ಹೇಳಿದರು.

ಟೆಂಡರ್ ಕರೆದರೂ ಕೆಲಸ ಮಾಡಲು ಕಾಂಟ್ರ್ಯಾಕ್ಟರ್ ಬರುತ್ತಿಲ್ಲ:ಇನ್ನು ಗ್ಯಾರಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವ ಬಗ್ಗೆ ಆಡಳಿತ ಪಕ್ಷದ ಶಾಸಕರೇ ತಮ್ಮ ಪಕ್ಷದ ವೇದಿಕೆಯಲ್ಲಿ ಹೇಳಿದ್ದಾರೆ. ರಾಜ್ಯ ಸರ್ಕಾರ ಯಾವುದೇ ಹಣಕಾಸಿನ ಸಿದ್ದತೆ ಮಾಡಿಕೊಳ್ಳದೇ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಲಕ್ಷ ಕೋಟಿಗಿಂತಲೂ ಹೆಚ್ಚು ಸಾಲ ಮಾಡಿದ್ದಾರೆ. ರಾಜ್ಯ ಸರ್ಕಾರದಲ್ಲಿ ಹಣಕಾಸು ನಿರ್ವಹಣೆ ಕಷ್ಟವಾಗಿದೆ. 15ನೇ ಹಣಕಾಸು ಆಯೋಗದ ಶಿಫಾರಸಿನಂತೆ ಸುಮಾರು ಎರಡು ಸಾವಿರ ಕೋಟಿಗಿಂತಲೂ ಹೆಚ್ಚು ಹಣ ಗ್ರಾಮ ಪಂಚಾಯಿತಿಗಳು ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆಗಳಿಗೆ ರಾಜ್ಯ ಸರ್ಕಾರ ಬಿಡುಗಡೆ ಮಾಡಬೇಕಿದೆ. ಅಂಗನವಾಡಿ ಕಾರ್ಯಕರ್ತೆಯರು, ಗುತ್ತಿಗೆ ನೌಕರರಿಗೆ ಸಂಬಳ ಆಗುತ್ತಿಲ್ಲ. ಹಣ ಬಿಡುಗಡೆಯಾಗುತ್ತಿಲ್ಲ ಎನ್ನುವ ಕಾರಣಕ್ಕೆ ಟೆಂಡರ್ ಕರೆದರೂ ಕೆಲಸ ಮಾಡಲು ಕಾಂಟ್ರ್ಯಾಕ್ಟರ್ ಬರುತ್ತಿಲ್ಲ ಎಂದರು.

ಬಿಜೆಪಿಯ ಒಂದು ತಂಡ ಉತ್ಸಾಹದಿಂದ ಕೆಲಸ ಮಾಡುತ್ತಿದೆ:ಬಿಜೆಪಿಯಲ್ಲಿ ಭಿನ್ನಮತ ಹೆಚ್ಚಾಗಿದಿಯಾ ಎನ್ನುವ ಪ್ರಶ್ನೆಗೆ ಭಿನ್ನಮತವಿಲ್ಲ. ಎಲ್ಲರೂ ಬಿಜೆಪಿ ಪರವಿದ್ದಾರೆ. ಕೆಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳಿವೆ. ಒಂದು ತಿಂಗಳಲ್ಲಿ ಎಲ್ಲವೂ ಸರಿಯಾಗುವ ವಿಶ್ವಾಸವಿದೆ. ಬಿಜೆಪಿಯ ಒಂದು ತಂಡ ಉತ್ಸಾಹದಿಂದ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.

ರಾಜ್ಯದಲ್ಲಿ ಅಕ್ರಮವಾಗಿ ಗನ್ ಮಾರಾಟ ಮಾಡುತ್ತಿರುವ ಜಾಲದ ಕುರಿತು ಕೇಳಿದ ಪ್ರಶ್ನೆಗೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟು ಹೋಗಿದೆ. ಪೊಲೀಸ್​ ಸ್ಟೇಷನ್​​​​ಗಳು, ಕಲೆಕ್ಷನ್ ಸೆಂಟರ್​ಗಳಾಗಿವೆ. ಭಯೊತ್ಪಾದನೆಗೆ ಬೆಂಬಲ ಕೊಡುವವರನ್ನು ರಕ್ಷಿಸುತ್ತಾರೆ. ಬಾಂಗ್ಲಾ ನಿರಾಶ್ರಿತರು ನುಸುಳುತ್ತಿದ್ದಾರೆ‌. ಇದೇ ರೀತಿ ಮುಂದುವರೆದರೆ ಪರಿಸ್ಥಿತಿ ಕಷ್ಟವಾಗಲಿದೆ ಎಂದು ಹೇಳಿದರು.

ಇದನ್ನೂ ಓದಿ: ಮೂರು ಉಪ ಚುನಾವಣೆಗಳಲ್ಲಿ ನಿರೀಕ್ಷೆ ಮೀರಿ‌ ನಮಗೆ ಹಿನ್ನಡೆಯಾಗಿದೆ: ಬಿ ಎಸ್ ಯಡಿಯೂರಪ್ಪ

ABOUT THE AUTHOR

...view details