ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ದಾವಣಗೆರೆ:ಅನುದಾನದ ಪಾಲು ಕೇಳಲು ದೆಹಲಿಯಲ್ಲಿ ಪ್ರತಿಭಟನೆ ನಡೆಸಿ ಪ್ರತಿಭಟನೆ ಮಾಡಿ ರಾಜ್ಯದ ಮಾನ, ಮರ್ಯಾದೆ ಕಳೆದರು ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಬಿಜೆಪಿ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಅವರು ಜೈ ಶ್ರೀರಾಮ್ ಎಂದು ಭಾಷಣ ಆರಂಭಿಸಿದರು. ಲೋಕಸಭಾ ಚುನಾವಣೆ ಸವಾಲು ಎದುರಿಸಲು ಇಲ್ಲಿ ಸೇರಿದ್ದೇವೆ. ಎಂ.ಪಿ.ಸಿದ್ದೇಶ್ವರ್ ಅವರು ದೆಹಲಿಯಲ್ಲಿರುವ ಕಾರಣ ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ ಎಂದರು.
ದೇಶದಲ್ಲಿ ಮತ್ತೊಮ್ಮೆ ಮೋದಿ ಸರ್ಕಾರ ಬರಲಿದೆ ಎಂಬ ಮಾತು ಕೇಳಿಬರುತ್ತಿದೆ. 2004-14ರ ತನಕ ಯುಪಿಎ ಸರ್ಕಾರದ ದುರಾಡಳಿತ ದೇಶದಲ್ಲಿತ್ತು. 2014ರ ಬಳಿಕ ಮೋದಿಯವರಿಂದ ನೂತನ ಆಡಳಿತ ಆರಂಭವಾಗಿ ಸಾಕಷ್ಟು ಅಭಿವೃದ್ಧಿಯಾಗಿದೆ. ರಾಜ್ಯ ಕಾಂಗ್ರೆಸ್‌ನವರು ಚುನಾವಣೆಯಲ್ಲಿ ಗ್ಯಾರಂಟಿಗಳಿಂದ ಗೆಲುವು ಸಾಧಿಸಿದರು ಎಂದು ಟೀಕಿಸಿದರು.
ಸಿದ್ದರಾಮಯ್ಯ ನೇತೃತ್ವದ ಭ್ರಷ್ಟ ಸರ್ಕಾರ: ರಾಜ್ಯಕ್ಕೆ ನೀಡಿರುವ ಅನುದಾನದ ಅಂಕಿಅಂಶವನ್ನು ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ನೀಡಿದ್ದಾರೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಭ್ರಷ್ಟಾ ಸರ್ಕಾರ. ರಾಜ್ಯಕ್ಕೆ ಅನುದಾನ ನೀಡಿಲ್ಲ ಎಂದು ಸುಳ್ಳು ಹೇಳಿ ಪತ್ರಿಕೆಗಳಿಗೆ ಜಾಹೀರಾತು ನೀಡಿದ್ದಾರೆ. ಕೇಂದ್ರ ಸರ್ಕಾರ 6000 ಕೋಟಿ ರೂ ವಿಪತ್ತು ಅನುದಾನ ಕೊಟ್ಟಿದೆ. ಸುಳ್ಳು ಹೇಳುವುದು, ಸಮರ್ಥನೆ ಮಾಡುವುದು ಸಿದ್ದರಾಮಯ್ಯನವರ ಜಾಯಮಾನ ಎಂದು ತಿಳಿಸಿದರು.
ಎಲ್ಲರೂ ಒಗ್ಗಟ್ಟಾಗಿ ಒಂದಾಗಿ ಕೆಲಸ ಮಾಡಿ: ಹಾಲಿ ಸಂಸದ ಜಿ.ಎಂ.ಸಿದ್ದೇಶ್ವರ್ ಅವರನ್ನು ವೇದಿಕೆಯಲ್ಲಿ ಯಡಿಯೂರಪ್ಪ ಹೊಗಳಿದರು. ಸಿದ್ದೇಶ್ವರ್ ಕೂಡ ಸಂಸದರಾಗಿ ಜಿಲ್ಲೆಯಲ್ಲಿ ಒಳ್ಳೆ ಕೆಲಸ ಮಾಡಿದ್ದಾರೆ. ನೀವೆಲ್ರೂ ಒಗ್ಗಟ್ಟಾಗಿ ಒಂದಾಗಿ ಕೆಲಸ ಮಾಡಬೇಕು. ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನು ಗೆಲ್ಲಿಸಿ ಕಳಿಸಬೇಕು ಎಂದು ದಾವಣಗೆರೆ ಜಿಲ್ಲಾ ಬಿಜೆಪಿಗರಿಗೆ ಸಂದೇಶ ರವಾನಿಸಿದರು.
ಇದನ್ನೂ ಓದಿ:ರಾಜ್ಯ ಸರ್ಕಾರದ ಪಾಲು 3.6ಕ್ಕೆ ಇಳಿಯಲು ಸಿದ್ದರಾಮಯ್ಯ ನೇತೃತ್ವದ ಸರ್ಕಾರವೇ ಕಾರಣ: ಬಿ ಎಸ್ ಯಡಿಯೂರಪ್ಪ