ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿ ಮೊದಲ ಬಾರಿಗೆ ಸಿಂಗಳೀಕಗಳ ಸಂತಾನೋತ್ಪತ್ತಿ ಯಶಸ್ವಿ: ಸಿಂಹಬಾಲದ ಕೋತಿ ಮರಿ ಜನನ - Lion tailed macaque - LION TAILED MACAQUE

ಮೈಸೂರಿನ ಕೂರ್ಗಳ್ಳಿಯ ವನ್ಯಜೀವಿ ಪುನರ್ವಸತಿ ಕೇಂದ್ರದಲ್ಲಿ ಸಿಂಗಳೀಕ ಮರಿ ಜನಿಸಿದ್ದು, ಕರ್ನಾಟಕದಲ್ಲಿ ಇದೇ ಮೊದಲ ಬಾರಿಗೆ ಸಿಂಹಬಾಲದ ಕೋತಿಯ ಸಂತಾನೋತ್ಪತ್ತಿ ಯಶಸ್ವಿಯಾಗಿದೆ.

ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯ
ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯ (ETV Bharat)

By ETV Bharat Karnataka Team

Published : Sep 14, 2024, 1:00 PM IST

ಮೈಸೂರು:ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಸಿಂಗಳೀಕಗಳ ಸಂತಾನೋತ್ಪತ್ತಿ ಯಶಸ್ವಿಯಾಗಿದೆ. ಮೈಸೂರಿನ ಕೂರ್ಗಳ್ಳಿಯ ವನ್ಯಜೀವಿ ಪುನರ್ವಸತಿ ಕೇಂದ್ರದಲ್ಲಿ ಅಳಿವಿನಂಚಿನ ಸಿಂಗಳೀಕ (ಸಿಂಹಬಾಲದ ಕೋತಿ) ಮರಿ ಜನಿಸಿದೆ. ಎರಡು ತಿಂಗಳ ಹಿಂದೆ ಮರಿ ಹುಟ್ಟಿದ್ದು, ಇವುಗಳ ಸಂಖ್ಯೆ ನಾಲ್ಕೇರಿದೆ.

ಕೇಂದ್ರೀಯ ಮೃಗಾಲಯ ಪ್ರಾಧಿಕಾರದ ತಳಿ ಅಭಿವೃದ್ಧಿ ಯೋಜನೆಯಡಿ 2015 ರಿಂದ ಸಿಂಗಳೀಕಗಳ ತಳಿ ಸಂರಕ್ಷಣೆ, ಅಭಿವೃದ್ಧಿಗೆ ನಿರಂತರ ಪ್ರಯತ್ನ ನಡೆದಿತ್ತು. ಸಿಂಗಳೀಕ ಮರಿ ಜನನವಾಗಿರುವುದರಿಂದ, ಅಳವಿಂಚಿನಲ್ಲಿರುವ ಪ್ರಾಣಿಗಳ ತಳಿ ಸಂರಕ್ಷಣೆಗೆ ಶಕ್ತಿ ನೀಡಿದಂತಾಗಿದೆ. ಎರಡು ಗಂಡು ಹಾಗೂ ಒಂದು ಸಿಂಗಳೀಕ ಇತ್ತು, ಮರಿ ಜನಿಸಿದ ನಂತರ ನಾಲ್ಕಕ್ಕೇ ಏರಿದೆ.

ಜೀವವೈವಿಧ್ಯದ ಸಮತೋಲನ ಕಾಯ್ದುಕೊಳ್ಳಲು ಅಳಿವಿನಂಚಿನ ಪ್ರಾಣಿಗಳ ಸಂರಕ್ಷಣೆಗಾಗಿ ಮೃಗಾಲಯಗಳಲ್ಲಿ ತಳಿ ಅಭಿವೃದ್ಧಿ ಕಾರ್ಯಕ್ರಮ ರೂಪಿಸಿ ಕಾಡಿಗೆ ಬಿಡುವ ಯೋಜನೆ ಇದಾಗಿದ್ದು, ಕೇಂದ್ರಿಯ ಮೃಗಾಲಯ ಪ್ರಾಧಿಕಾರ ಯಾವ ತಳಿ ಅಭಿವೃದ್ಧಿ ಪಡಿಸಬೇಕೆಂದು ಮೃಗಾಲಯಗಳಿಗೆ ನಿರ್ದೇಶನ ನೀಡುತ್ತದೆ. ಅದರಂತೆ ತಳಿಗಳನ್ನು ಮೃಗಾಲಯಗಳು ಅಭಿವೃದ್ಧಿ ಪಡಿಸುತ್ತವೆ. ತಳಿ ಅಭಿವೃದ್ಧಿ ಕೇಂದ್ರಗಳು ಮೈಸೂರು, ಚೆನ್ನೈ ಸೇರಿದಂತೆ ದೇಶದ ನಾನಾ ಕಡೆ ಇವೆ.

ಯಾವ ಅರಣ್ಯದಲ್ಲಿ ತಳಿಗಳ ಸಂಖ್ಯೆ ಕಡಿಮೆಯಾಗಿರುತ್ತದೆಯೋ ಅಲ್ಲಿಗೆ ಅವುಗಳನ್ನು ಮರು ಪರಿಚಯಿಸುವುದೇ ತಳಿ ಅಭಿವೃದ್ಧಿ ಯೋಜನೆಯ ಮುಖ್ಯ ಗುರಿಯಾಗಿದ್ದು, ದೇಶದಲ್ಲಿ ಸುಮಾರು 2 ಸಾವಿರ ಸಿಂಗಳೀಕಗಳಿವೆ. ಹೀಗಾಗಿ, ಹುಲಿಗಳ ಸಂರಕ್ಷಣೆಯಷ್ಟೇ ಮಹತ್ವದ ಕಾರ್ಯ ಇದಾಗಿದೆ.
ಸಿಂಗಳೀಕವಲ್ಲದೇ ತೋಳ, ಕಾಡೆಮ್ಮೆ, ಸೀಳುನಾಯಿಗಳ ತಳಿಗಳ ಅಭಿವೃದ್ಧಿ ಕಾರ್ಯವೂ ಕಳೆದ 9 ವರ್ಷದಿಂದ ನಡೆಯುತ್ತಿದೆ. ನೀಲಗಿರಿ ಲಂಗೂರ್, ಮಲಬಾರ್ ಅಳಿಲು, ಬೂದು ಕಾಡುಕೋಳಿ ಪ್ರಭೇದಗಳು ಯೋಜನೆಯ ವ್ಯಾಪ್ತಿಯಲ್ಲಿವೆ ಎಂದು ಎಂದು ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಡಿ. ಮಹೇಶ್ ಕುಮಾರ್ ವಿವರಿಸಿದರು.

ಸಿಂಗಳೀಕ ವಿನಾಶದಂಚಿನಲ್ಲಿದ್ದು, ಅಂತಾರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟವು (ಐಯುಸಿಎನ್) ಅದನ್ನು ಕೆಂಪು ಪಟ್ಟಿಯಲ್ಲಿ ಸೇರಿಸಿದೆ. ಈ ಪ್ರಭೇದವು ಪ್ರಪಂಚದಲ್ಲಿ ಪಶ್ಚಿಮ ಘಟ್ಟಗಳಲ್ಲಿ ಮಾತ್ರ ಕಾಣಸಿಗುತ್ತದೆ. ಕನ್ಯಾಕುಮಾರಿ ಅಗಸ್ತ್ಯ ಮಲೈನಿಂದ, ರಾಜ್ಯದ ಉತ್ತರ ಕನ್ನಡ ಜಿಲ್ಲೆಯ ಶರಾವತಿ, ಅಘನಾಶಿನಿ ನದಿ ಕಣಿವೆವರೆಗೆ ಸಿಂಗಳೀಕಗಳ ಆವಾಸಸ್ಥಾನವಿದೆ.

ರಾಜ್ಯದ ಶರಾವತಿ ವನ್ಯಜೀವಿ ಅಭಯಾರಣ್ಯ ಸೇರಿದಂತೆ ಶಿರಸಿ, ಹೊನ್ನಾವರ ಭಾಗದಲ್ಲಿ ಅರಣ್ಯ ನಾಶ, ಒತ್ತುವರಿ, ಮರಗಳ ಕಳ್ಳಸಾಗಣೆ, ಜಲವಿದ್ಯುತ್ ಯೋಜನೆಗಳಿಂದ ಆವಾಸಸ್ಥಾನ ಕಿರಿದಾಗುತ್ತಿದೆ. ಹೀಗಾಗಿ ಅವುಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗುತ್ತಿದೆ.

ಇದನ್ನೂ ಓದಿ:ವಿಜಯಪುರ: ಅಪರೂಪದ ಪುನುಗು ಬೆಕ್ಕು ಪತ್ತೆ; ಚಿಕಿತ್ಸೆ ಕೊಡಿಸಿ ರಕ್ಷಿಸಿದ ಜನ - Civet Rescued

ABOUT THE AUTHOR

...view details