ಮಂಗಳೂರು: ಇಂದು ಪ್ರೇಮಿಗಳ ದಿನಾಚರಣೆ. ಆದರೆ ಮಂಗಳೂರಿನಲ್ಲಿ ವಿಶಿಷ್ಟ ರೀತಿಯಲ್ಲಿ ಪುಸ್ತಕ ಪ್ರೇಮಿಗಳ ದಿನವನ್ನಾಗಿ ಆಚರಿಸಲಾಗಿದೆ.
ಪುಸ್ತಕ ಓದುವ ಹವ್ಯಾಸ ವೃದ್ಧಿಸಬೇಕು, ಮುಂದಿನ ಪೀಳಿಗೆಗೆ ಪುಸ್ತಕದ ಮಹತ್ವದ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ರಂಗ ಸಂಗಾತಿ ಸಾಂಸ್ಕೃತಿಕ ಪ್ರತಿಷ್ಠಾನವು ಪುಸ್ತಕ ಪ್ರೇಮಿಗಳ ದಿನಾಚರಣೆಯನ್ನು ಆಯೋಜಿಸಿದೆ. ಈ ಕಾರ್ಯಕ್ರಮದಲ್ಲಿ ಅರ್ಧಗಂಟೆಗೆ ಒಂದರಂತೆ 10 ಕೃತಿಗಳು ಬಿಡುಗಡೆಗೊಂಡವು.
ಡಾ.ವಿಶ್ವನಾಥ ಬದಿಕಾನರ 'ಕನ್ನಡ ಜಾನಪದ ಅಧ್ಯಯನದ ಮೊದಲ ಘಟ್ಟ', ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿಯವರ 'ಸೃಷ್ಟಿ ಸಿರಿಯಲಿ ಪುಷ್ಪವೃಷ್ಟಿ', ಕಾತ್ಯಾಯಿನಿ ಕುಂಜಿಬೆಟ್ಟುರವರ 'ಕಾತೀಶ್ವರ ವಚನಗಳು', ಪ್ರೊ.ಅಕ್ಷಯ ಆರ್.ಶೆಟ್ಟಿಯವರ 'ಅವಳೆಂದರೆ ಬರಿ ಹೆಣ್ಣೆ' ಪ್ರಕಾಶ್ ವಿ.ಎನ್.ರವರ ‘ನಮ್ಮವನು ಶ್ರೀರಾಮಚಂದ್ರ', ಅಕ್ಷತಾರಾಜ್ ಪೆರ್ಲರ 'ನೆಲ ಉರುಳು', ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟುರವರ 'ನೆಪವು ಸಿಕ್ಕಿದೆ ಬದುಕಿಗೆ', ಕರುಣಾಕರ ಬಳ್ಳೂರು ಅವರ 'ಬೆಳಕು', ಡಾ.ಎಸ್.ಎಂ.ಶಿವಪ್ರಕಾಶ್ ಅವರ 'ಟೆಕ್ನಾಲಜಿ ವರ್ಸಸ್ ಎಕಾಲಜಿ', ರಘು ಇಡ್ಕಿದುರವರ 'ಪೊನ್ನಂದಣ' ಕೃತಿಗಳು ಲೋಕಾರ್ಪಣೆಗೊಂಡಿತು.
ವ್ಯಾಲಂಟೈನ್ಸ್ ಡೇಗೆ ಪುಸ್ತಕ ಪ್ರೇಮಿಗಳ ದಿನ (ETV Bharat) ಕಾರ್ಯಕ್ರಮವನ್ನು ಸಂಸದ ಬ್ರಿಜೇಶ್ ಚೌಟ, ಆಳ್ವಾಸ್ ಶಿಕ್ಷಣ ಸಂಸ್ಥೆಯ ಮೋಹನ್ ಆಳ್ವ, ತುಳು ವಿದ್ವಾಂಸ ಡಾ.ಗಣೇಶ್ ಅಮೀನ್ ಸಂಕಮಾರ್ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಚಹಾದಂಗಡಿಯಲ್ಲಿ ಪುಸ್ತಕ ಪ್ರೇಮ ಬೆಳೆಸುತ್ತಿರುವ ಸುರೇಂದ್ರ ಕೋಟ್ಯಾನ್ ಹಾಗೂ ಚಿತ್ರ ಕಲಾವಿದ ಜಾನ್ ಚಂದ್ರನ್ ಅವರನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ಹಾಗೂ ಮುಕ್ತ ವಿಭಾಗದಲ್ಲಿ 'ಪುಸ್ತಕ ಪ್ರೇಮ' ವಿಷಯದಲ್ಲಿ ಚಿತ್ರ ರಚನೆ ಸ್ಪರ್ಧೆ ನಡೆಯಿತು. ಒಟ್ಟಿನಲ್ಲಿ ದಿನವಿಡೀ ಪುಸ್ತಕದ ವಿಚಾರದಲ್ಲಿಯೇ ನಡೆದ ಈ ಕಾರ್ಯಕ್ರಮ ಪುಸ್ತಕ ಪ್ರೇಮಿಗಳಿಗೆ ಹಬ್ಬವಾಯಿತು.
ಈ ಬಗ್ಗೆ ಸಾಹಿತಿ, ರಂಗಸಂಗಾತಿ ಟ್ರಸ್ಟಿ ಶಶಿರಾಜ್ ಕಾವೂರು ಮಾತನಾಡಿ, "ನಾವು ಕಳೆದ ವರ್ಷ ಎರಡು ಪುಸ್ತಕಗಳನ್ನು ಈ ದಿನದಂದು ಬಿಡುಗಡೆ ಮಾಡಿ ಪುಸ್ತಕ ಪ್ರೇಮಿಗಳ ದಿನಾಚರಣೆಯಾಗಿ ಆಚರಿಸಿದ್ದೆವು. ಈ ಬಾರಿ ತುಳು ಕನ್ನಡದ ಪ್ರಸಿದ್ಧ 10 ಸಾಹಿತಿಗಳ ಪುಸ್ತಕಗಳನ್ನು ಬಿಡುಗಡೆ ಮಾಡಲಾಗಿದೆ. ಮಕ್ಕಳಲ್ಲಿ ಪುಸ್ತಕ ಪ್ರೇಮ ಮೂಡಿಸಬೇಕೆಂದು ಇದೇ ಸಂದರ್ಭದಲ್ಲಿ ಮಕ್ಕಳಿಗೆ ಚಿತ್ರ ಬಿಡಿಸುವ ಸ್ಪರ್ಧೆ ನಡೆಸಿದ್ದೇವೆ" ಎಂದು ತಿಳಿಸಿದರು.
ಇದನ್ನೂ ಓದಿ:'ವ್ಯಾಲೆಂಟೈನ್ಸ್ ಡೇ' ಅಲ್ಲ, ಪುಸ್ತಕ ಪ್ರೇಮಿಗಳ ದಿನ: ಮಂಗಳೂರಿನಲ್ಲಿ ರಂಗ ಸಂಗಾತಿಯ ವಿಶಿಷ್ಟ ಕಲ್ಪನೆ