ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ಅಶ್ವತ್ಥನಾರಾಯಣ ಸುದ್ದಿಗೋಷ್ಟಿ ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಬಂಧಿತ ಆರೋಪಿಗಳು 2002ರಲ್ಲಿ ನಡೆದ ಬಾಂಬ್ ಸ್ಫೋಟ ಪ್ರಕರಣದ ವಾಂಟೆಡ್ ಲಿಸ್ಟ್ನಲ್ಲಿದ್ದ ಶಂಕಿತ ಉಗ್ರರಾಗಿದ್ದು, ಈ ಆರೋಪಿಗಳ ಬಗ್ಗೆ ಬೇಜವಾಬ್ದಾರಿಯಿಂದ ಹೇಳಿಕೆ ನೀಡಿದ್ದ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ರಾಜ್ಯದ ಜನತೆಯ ಕ್ಷಮೆ ಕೇಳಬೇಕು ಎಂದು ಬಿಜೆಪಿ ವಕ್ತಾರ ಅಶ್ವತ್ಥನಾರಾಯಣ ಆಗ್ರಹಿಸಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರದಲ್ಲಿ ಇಂದು ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ರಾಮೇಶ್ವರಂ ಕೆಫೆ ಸ್ಫೋಟ ಬೆಂಗಳೂರಿಗೆ ಕಳಂಕ ತಂದ ಪ್ರಕರಣ. ಸ್ಫೋಟದ ಹಿಂದೆ ವ್ಯವಹಾರದ ವಿಚಾರ ಇದೆ ಅಂತಾ ಕಾಂಗ್ರೆಸ್ ನಾಯಕರು ಪ್ರಕರಣದ ದಾರಿ ತಪ್ಪಿಸಲು ನೋಡಿದರು. ಮಂಗಳೂರು ಬಾಂಬ್ ಬ್ಲಾಸ್ಟ್ ವೇಳೆಯೂ 'ದೆ ಆರ್ ಮೈ ಬ್ರದರ್ಸ್' ಅಂದಿದ್ದರು ಎಂದು ಅಶ್ವತ್ಥನಾರಾಯಣ ಕಿಡಿಕಾರಿದರು.
ಕೆಫೆ ಸ್ಫೋಟ ಗಂಭೀರ ಪ್ರಕರಣವಾಗಿದ್ದು, ಎನ್ಐಎ ತನಿಖೆ ನಡೆಸುತ್ತಿದೆ. ಈಗ ಇಬ್ಬರು ಆರೋಪಿಗಳ ಬಂಧನವಾಗಿದೆ. ಬಂಧಿತರು ಪಶ್ಚಿಮ ಬಂಗಾಳ, ತಮಿಳುನಾಡಿನಲ್ಲಿ ರಕ್ಷಣೆ ಪಡೆದಿದ್ದರು. ಆರೋಪಿಗಳು 2002ರ ಬಾಂಬ್ ಸ್ಫೋಟದಲ್ಲಿ ವಾಂಟೆಡ್ ಲಿಸ್ಟ್ನಲ್ಲಿದ್ದವರು. ಶಂಕಿತ ಉಗ್ರರನ್ನು ನಿರಪರಾಧಿಗಳು ಅಂತ ಹೇಳುವುದು ಡಿ.ಕೆ.ಶಿವಕುಮಾರ್ ಚಾಳಿ. ಈ ಬಗ್ಗೆ ಡಿ.ಕೆ.ಶಿವಕುಮಾರ್ ಸ್ಪಷ್ಟನೆ ಕೊಡಬೇಕು. ಬೇಜವಾಬ್ದಾರಿ ಹೇಳಿಕೆ ನೀಡಿದ ಡಾ.ಜಿ.ಪರಮೇಶ್ವರ್ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರೂ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
ಮಾಗಡಿ, ಕುಣಿಗಲ್‌ನಲ್ಲಿ ನಮ್ಮ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ. ಕಾಂಗ್ರೆಸ್ನವರಿಗೆ ಸೋಲುವ ಭೀತಿ ಎದುರಾಗಿದೆ. ಹಾಗಾಗಿ ಈ ರೀತಿಯ ಚಟುವಟಿಕೆಗಳ ಮೂಲಕ ಭಯದ ವಾತಾವರಣ ಸೃಷ್ಟಿಸಲು ಮುಂದಾಗಿದ್ದಾರೆ. ಈಗಾಗಲೇ ಈ ಸಂಬಂಧ ದೂರು ನೀಡಿದ್ದೇವೆ. ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದೆ ಎಂದು ತಿಳಿಸಿದರು.
ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾಗುತ್ತಿರುವುದರಿಂದ ಡಿ.ಕೆ.ಶಿವಕುಮಾರ್, ಡಿ.ಕೆ.ಸುರೇಶ್ ಇಬ್ಬರಿಗೂ ಮುಜುಗರ ಆಗುತ್ತಿದೆ. ಬಿಜೆಪಿ ಮಾಡಿದರೆ ಆಪರೇಷನ್ ಕಮಲ ಅಂತಾರೆ. ಅವರು ಮಾಡಿದರೆ ಏನೂ ಅಲ್ಲ. ಆದರೆ ಅಲ್ಲಿ ಅವರು ಅಂದುಕೊಂಡಂತೆ ಏನೂ ನಡೆಯುತ್ತಿಲ್ಲ. ಕಳೆದ ಬಾರಿ ಜೆಡಿಎಸ್ ಅಲೆಯಿಂದ ಗೆದ್ದಿದ್ದರು. ಈಗ ಜೆಡಿಎಸ್ ಅವರ ಜತೆ ಇಲ್ಲ. ಬೆಂಗಳೂರು ಗ್ರಾಮಾಂತರದಿಂದಲೇ ನಮ್ಮ ಮೊದಲ ಗೆಲುವು ಶುರುವಾಗಲಿದೆ ಎಂದರು.
ಸಂವಿಧಾನ ಭಾರತೀಯರ ಅಸ್ಮಿತೆ, ಮೂಲ ಆಶಯಕ್ಕೆ ಬದಲಾವಣೆ ತರಲ್ಲ- ಪ್ರತಾಪಸಿಂಹ ನಾಯಕ್:ಬಾಬಾಸಾಹೇಬ ಡಾ.ಅಂಬೇಡ್ಕರ್ ಅವರ ಸಂವಿಧಾನಕ್ಕೆ ಗೌರವ ನೀಡಿ ಬಿಜೆಪಿ ಕೆಲಸ ಮಾಡುತ್ತಿದೆ. ಯಾವುದೇ ಕಾರಣಕ್ಕೂ ಸಂವಿಧಾನದ ಮೂಲ ಆಶಯಕ್ಕೆ ಬಿಜೆಪಿ ಬದಲಾವಣೆ ತರುವುದಿಲ್ಲ ಎಂದು ಹಿರಿಯ ನಾಗರಿಕರ ಪ್ರಕೋಷ್ಠದ ರಾಜ್ಯ ಸಂಚಾಲಕ ಪ್ರತಾಪಸಿಂಹ ನಾಯಕ್ ತಿಳಿಸಿದರು.
ಮಲ್ಲೇಶ್ವರದಲ್ಲಿರುವ ಚುನಾವಣಾ ಮಾಧ್ಯಮ ಕೇಂದ್ರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂವಿಧಾನ ಬದಲಾವಣೆ ಬಗ್ಗೆ ಕೆಲ ಬಿಜೆಪಿ ನಾಯಕರ ಹೇಳಿಕೆ ವಿಚಾರ ಗಮನಿಸಿದ್ದೇನೆ, ಇಲ್ಲಿ ತಪ್ಪಾಗಿ ಅರ್ಥೈಸುವ ಅಗತ್ಯವಿಲ್ಲ. ಅಂಬೇಡ್ಕರ್ ಅವರ ಸಂವಿಧಾನದ ಆಧಾರದ ಮೇಲೆಯೇ ಆಡಳಿತ ನಡೆಯಬೇಕು. ಇದು ಭಾರತೀಯರ ಅಸ್ಮಿತೆ. ಅನೇಕತೆಯಲ್ಲಿ ಏಕತೆಯಿದೆ. ಹಾಗಾಗಿ ಸಂವಿಧಾನದ ಮೂಲ ಆಶಯದಲ್ಲಿ ಯಾವುದೇ ಬದಲಾವಣೆ ತರುವುದಿಲ್ಲ ಎಂದರು.