ಕರ್ನಾಟಕ

karnataka

By ETV Bharat Karnataka Team

Published : 4 hours ago

ETV Bharat / state

ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿ ಆಗ್ರಹ - BJP INSISTS CM RESIGNATION

ಮುಡಾ ಪ್ರಕರಣದಲ್ಲಿ ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿ ಆಗ್ರಹಿಸಿದೆ. ಸಿದ್ದರಾಮಯ್ಯ ನೈತಿಕ ಹೊಣೆ ಹೊತ್ತು ಸಿಎಂ ಸ್ಥಾನದಿಂದ ಕೆಳಗಿಳಿಯಬೇಕೆಂದು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿ ಆಗ್ರಹ
ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಬಿಜೆಪಿ ಆಗ್ರಹ (ETV Bharat)

ಬೆಂಗಳೂರು:ಮುಡಾ ಹಗರಣ ಆರೋಪ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್​​ಗೆ ಅನುಮತಿ ನೀಡಿದ್ದನ್ನು ಹೈಕೋರ್ಟ್ ಎತ್ತಿಹಿಡಿದು ಸಿಎಂ ಅರ್ಜಿ ವಜಾಗೊಳಿಸಿರುವ ಹಿನ್ನೆಲೆಯಲ್ಲಿ ನೈತಿಕ ಹೊಣೆ ಹೊತ್ತು ಕೂಡಲೇ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಆಗ್ರಹಿಸಿದ್ದಾರೆ.

ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಕಳೆದ ಕೆಲ ತಿಂಗಳಿಂದ ಬಿಜೆಪಿ ಪಕ್ಷವು ಭ್ರಷ್ಟ ಕಾಂಗ್ರೆಸ್ ವಿರುದ್ಧ ನಿರಂತರ ಹೋರಾಟ ಮಾಡಿಕೊಂಡು ಬಂದಿದೆ. ವಾಲ್ಮೀಕಿ ನಿಗಮದ ಹಗರಣ ಬಗ್ಗೆಯೂ ಹೋರಾಟ ಮಾಡಿಕೊಂಡು ಬಂದೆವು. ನಂತರ ಮುಡಾ ಹಗರಣ ಕೈಗೆತ್ತಿಕೊಂಡೆವು. ಸ್ವತಃ ಸಿಎಂ ಕುಟುಂಬವೇ ನೇರವಾಗಿ ಹಗರಣದಲ್ಲಿ ಭಾಗಿಯಾಗಿತ್ತು. ಬೆಂಗಳೂರಿನಿಂದ, ಮೈಸೂರುವರೆಗೂ ಬಿಜೆಪಿ ಜೆಡಿಎಸ್‌ ಜೊತೆ ಸೇರಿ ಯಶಸ್ವಿಯಾಗಿ ಪಾದಯಾತ್ರೆ ಮಾಡಿದೆವು. ಕಾನೂನಿನಲ್ಲಿ ಎಲ್ಲರೂ ಒಂದೇ ಅಂತ ತೀರ್ಪು ನೀಡಿದೆ. ತೀರ್ಪು ಬಂದಿರೋ ಹಿನ್ನೆಲೆಯಲ್ಲಿ ಮತ್ತೆ ಮತ್ತೆ ರಾಜ್ಯಪಾಲರ ಮೇಲೆ ಆರೋಪ ಮಾಡುವುದನ್ನು ಬಿಟ್ಟು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಹೈಕೋರ್ಟ್ ತೀರ್ಪನ್ನ ಗೌರವಿಸಬೇಕು. ಸಿಎಂ ಕುಟುಂಬವೇ ನೇರವಾಗಿ ಭಾಗಿಯಾಗಿರೋ ಆರೋಪ ಬಂದಿದೆ ಹಾಗಾಗಿ ಸಿಎಂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (ETV Bharat)

ಕಾಂಗ್ರೆಸ್‌ನ ನಾಯಕರು ರಾಜ್ಯಪಾಲರ ಮೇಲೆ ಆರೋಪ ಮಾಡಿ, ಗೂಬೆ ಕೂರಿಸುವ ಕೆಲಸ ಮಾಡಿದ್ದರು. ರಾಜ್ಯಪಾಲರು ಕೊಟ್ಟಿರೋ ಪ್ರಾಸಿಕ್ಯೂಷನ್‌ ವಿರೋಧ ಮಾಡಿದ್ದರು. ಇದರ ವಿರುದ್ಧ ಹೋರಾಟ ಮಾಡಿದ್ದರು. ಸುಧೀರ್ಘ ವಾದ ಪ್ರತಿವಾದದ ಬಳಿಕ ಹೈಕೋರ್ಟ್ ಇಂದು ತೀರ್ಪನ್ನು ನೀಡಿದೆ. ಇದರಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರೋದು ಕ್ರಮಬದ್ಧವಾಗಿ ಇದೆ ಅಂತ ರಾಜ್ಯಪಾಲರ ತೀರ್ಮಾನವನ್ನು ಎತ್ತಿ ಹಿಡಿದಿದೆ ಎಂದರು.

ಅನೇಕ ಹೋರಾಟಗಾರರು ಖಾಸಗಿ ದೂರು ನೀಡಿದ್ದರು. ಸ್ವತಃ ಸಿಎಂ ಕುಟುಂಬ ಭಾಗಿಯಾಗಿದೆ ಅಂತ ಆರೋಪ ಕೇಳಿ ಬಂದ ಸಂದರ್ಭದಲ್ಲಿ ರಾಜ್ಯಪಾಲರು ತಮ್ಮ ವಿವೇಚನೆ ಬಳಸಿ ಎಲ್ಲಾ ವರದಿ ಸಂಗ್ರಹಿಸಿ, ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದರು. ಇದನ್ನೇ ಹೈಕೋರ್ಟ್ ಸಮರ್ಥಿಸಿದೆ. ಹಾಗಾಗಿ ಸಿಎಂ ಸಿದ್ದರಾಮಯ್ಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಬಿಜೆಪಿ ಮುಂದಿನ ಹೋರಾಟ ವಿಚಾರದ ಕುರಿತು ಪ್ರತಿಕ್ರಿಯೆ ನೀಡಿದ ವಿಜಯೇಂದ್ರ, ಇನ್ನು ಇವತ್ತು ತೀರ್ಪು ಬಂದಿದೆ. ರಾಜ್ಯಪಾಲರು ಪ್ರಾಸಿಕ್ಯೂಷನ್​​ಗೆ ನೀಡಿದ ಅನುಮತಿಯನ್ನು ಹೈಕೋರ್ಟ್ ಎತ್ತಿಹಿಡಿದಿದೆ. ಸ್ವಲ್ಪ ಸಮಯ ಕೊಡೋಣ ನಾವೆಲ್ಲರೂ ಕುಳಿತು ಚರ್ಚೆ ಮಾಡುತ್ತೇವೆ. ರಾಜ್ಯದ ಅಭಿವೃದ್ಧಿ ದೃಷ್ಟಿಯಿಂದ, ಭ್ರಷ್ಟಾಚಾರ ಕಳಂಕ ಹೊತ್ತ ಸಿಎಂ ತಕ್ಷಣವೇ ರಾಜೀನಾಮೆ ಕೊಡಬೇಕು ಎಂದರು.

ವಾಲ್ಮೀಕಿ ನಿಗಮದ ಹಗರಣ ಆದಾಗ ಭ್ರಷ್ಟಾಚಾರ ಆಗಿಲ್ಲ ಅಂದಿದ್ದರು. ಬಳಿಕ ಸದನದಲ್ಲಿ ಸಿಎಂ ಅವರೇ ಹಗರಣ ಆಗಿರೋದಾಗಿ ಒಪ್ಪಿಕೊಂಡಿದ್ದಾರೆ. ಮುಡಾ ವಿಚಾರದಲ್ಲಿ ಕೂಡ ನಮ್ಮ ಕುಟುಂಬದ ಪಾತ್ರ ಇಲ್ಲ ಅಂದಿದ್ದರು. ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಾಗ ಅವರ ಮೇಲೆ ಆರೋಪ‌ ಮಾಡಿದ್ದರು. ರಾಜ್ಯಪಾಲರು ಕೊಟ್ಟ ತನಿಖೆ ಮಾಡುವ ಪ್ರಕರಣ ಸರಿ ಇದೆ ಎಂದು ಹೈಕೋರ್ಟ್ ತೀರ್ಮಾನ ನೀಡಿದೆ. ಹಿಂದೆ ಯಡಿಯೂರಪ್ಪ ಅವರು ರಾಜೀನಾಮೆ ಕೊಟ್ಟಿದ್ದರು. ಈಗ ಸಿದ್ದರಾಮಯ್ಯ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದರು.

ರಾಜ್ಯಪಾಲರು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರಾಸಿಕ್ಯೂಷನ್​​ಗೆ ನೀಡಿದ್ದ ಅನುಮತಿ ಕಾನೂನುಬದ್ಧವಾಗಿದೆ ಎಂದು ಇಂದು ಹೈಕೋರ್ಟ್ ತೀರ್ಪು ನೀಡಿದೆ. ಇದು ಸತ್ಯಕ್ಕೆ ಸಂದ ಜಯವಾಗಿದೆ. ಅನಗತ್ಯವಾಗಿ ರಾಜ್ಯಪಾಲರನ್ನ ನಿಂದಿಸುವುದು ಬಿಟ್ಟು, ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದ್ದಾರೆ.

ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಪ್ರಾಸಿಕ್ಯೂಷನ್​ಗೆ ರಾಜ್ಯಪಾಲರು ನೀಡಿದ್ದ ಅನುಮತಿಯನ್ನ ಎತ್ತಿ ಹಿಡಿದ ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರಿಗೆ ರಾಜೀನಾಮೆ ಕೊಡುವುದೊಂದೇ ದಾರಿ ಎಂದು ವಿಶ್ಲೇಷಿಸಿದರು. ಭ್ರಷ್ಟಾಚಾರದ ವಿರುದ್ಧ ಬಿಜೆಪಿ ನಡೆಸಿದ ಹೋರಾಟಕ್ಕೆ ಜಯ ಲಭಿಸಿದೆ. ‘ಸತ್ಯಮೇವ ಜಯತೇ’ ಎಂದು ನುಡಿದರು.

ಮಾನ್ಯ ರಾಜ್ಯಪಾಲರು ಪ್ರಾಸಿಕ್ಯೂಶನ್‍ಗೆ ಅನುಮತಿ ಕೊಟ್ಟಿದ್ದೇ ಸಂವಿಧಾನಬಾಹಿರ, ಅಪರಾಧ ಎಂದು ಆರೋಪಿಸಿದ ಕಾಂಗ್ರೆಸ್ಸಿಗರು, ಸಾರ್ವಜನಿಕವಾಗಿ ಕ್ಷಮೆ ಯಾಚನೆ ಮಾಡಬೇಕು. ಒಂದು ಸಾಂವಿಧಾನಿಕ ಹುದ್ದೆಯನ್ನು ಅಗೌರವಿಸಿದ ಕಾರಣಕ್ಕೋಸ್ಕರ ಸಾರ್ವಜನಿಕ ಕ್ಷಮೆ ಯಾಚನೆ ಮಾಡಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ:ಮುಡಾ ಹಗರಣ: ರಾಜ್ಯಪಾಲರ ಕ್ರಮ ಎತ್ತಿಹಿಡಿದ ಹೈಕೋರ್ಟ್, ಸಿಎಂಗೆ ಹಿನ್ನಡೆ - MUDA SCAM

ABOUT THE AUTHOR

...view details