ಬೆಂಗಳೂರು: ರಾಜ್ಯ ರಾಜಧಾನಿಯ ಮೂರು (ನಗರ) ಹಾಗೂ ಗ್ರಾಮಾಂತರದ ಒಂದು ಕ್ಷೇತ್ರ ಸೇರಿ ಬೆಂಗಳೂರಿನ ನಾಲ್ಕೂ ಕ್ಷೇತ್ರಗಳನ್ನು ಗೆಲ್ಲುವಲ್ಲಿ ಬಿಜೆಪಿ ಯಶಸ್ವಿಯಾಗಿದೆ. ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ನೀಡಿದ್ದ ಬೆಂಗಳೂರು ಮತದಾರರು ಲೋಕಸಭೆಯಲ್ಲೂ ಬಿಜೆಪಿ ಕೈ ಹಿಡಿದಿದ್ದಾರೆ. ಆದರೆ, ಕಳೆದ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಗೆದ್ದಿದ್ದ ಏಕೈಕ ಕ್ಷೇತ್ರವಾಗಿದ್ದ ಬೆಂಗಳೂರು ಗ್ರಾಮಾಂತರದ ಜನರ ಹೃದಯ ಗೆಲ್ಲುವಲ್ಲಿ ಹೃದ್ರೋಗ ತಜ್ಞ ಡಾ.ಮಂಜುನಾಥ್ ಸಫಲರಾಗಿದ್ದು, ಗ್ರಾಮಾಂತರ ಕ್ಷೇತ್ರವನ್ನು ಬಿಜೆಪಿ ಮುಡಿಗೇರಿಸಿಕೊಂಡಿದೆ.
ದಕ್ಷಿಣದಲ್ಲಿ ಮತ್ತೆ ತೇಜಸ್ವಿ ಸೂರ್ಯ ಕಮಾಲ್:ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ತೇಜಸ್ವಿ ಸೂರ್ಯ ಎರಡನೇ ಬಾರಿಗೆ ಆಯ್ಕೆಯಾಗಿದ್ದು, ಬಿಜೆಪಿ ಸತತವಾಗಿ 9ನೇ ಬಾರಿಗೆ ಕ್ಷೇತ್ರವನ್ನು ಗೆದ್ದಿದೆ. 1991ರಿಂದ ಈ ಕ್ಷೇತ್ರ ಬಿಜೆಪಿ ತೆಕ್ಕೆಯಲ್ಲಿಯೇ ಇದ್ದು, ಬಿಜೆಪಿ ಭದ್ರಕೋಟೆಯಾಗಿದೆ. ಅನಂತ್ ಕುಮಾರ್ ಕಟ್ಟಿದ್ದ ಭದ್ರಕೋಟೆಯನ್ನು ತೇಜಸ್ವಿ ಸೂರ್ಯ ಉಳಿಸಿಕೊಂಡು ಮತ್ತಷ್ಟು ಭದ್ರಪಡಿಸಿದ್ದಾರೆ. ಕ್ಷೇತ್ರವನ್ನು ಶತಾಯ ಗತಾಯ ಗೆಲ್ಲಲ್ಲೇಬೇಕು ಎನ್ನುವ ಕಾಂಗ್ರೆಸ್ ತಂತ್ರ ಕಡೆಗೂ ಫಲಿಸಲೇ ಇಲ್ಲ. ಪ್ರತೀ ಚುನಾವಣೆಯಲ್ಲಿಯೂ ಅಭ್ಯರ್ಥಿ ಬದಲಾವಣೆ ಮಾಡಿದರೂ ಈ ಪ್ರಯೋಗ ವರ್ಕೌಟ್ ಆಗಲಿಲ್ಲ.
ಭದ್ರಕೋಟೆ ಸುಭದ್ರ:ಬೆಂಗಳೂರು ಕೇಂದ್ರದಲ್ಲಿ ಸತತ ನಾಲ್ಕನೇ ಬಾರಿ ಬಿಜೆಪಿಯ ಪಿ.ಸಿ ಮೋಹನ್ ಗೆದ್ದು ಬಿಜೆಪಿಯ ಭದ್ರಕೋಟೆಯನ್ನು ಮತ್ತಷ್ಟು ಸುಭದ್ರಗೊಳಿಸಿದ್ದಾರೆ. 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಿಂದ ಅಸ್ತಿತ್ವಕ್ಕೆ ಬಂದ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರಕ್ಕೆ 2009ರಲ್ಲಿ ಮೊದಲ ಬಾರಿಗೆ ಚುನಾವಣೆ ನಡೆದಿದ್ದು, ಬಿಜೆಪಿಯಿಂದ ಪಿ.ಸಿ ಮೋಹನ್ ಮೊದಲ ಚುನಾವಣೆಯಲ್ಲಿಯೇ ಗೆದ್ದರು. ನಂತರ ಹಿಂದೆ ತಿರುಗಿ ನೋಡಲೇ ಇಲ್ಲ. 2014, 2019, 2024 ರಲ್ಲಿ ಸತತವಾಗಿ ಗೆದ್ದು ಕ್ಷೇತ್ರವನ್ನು ಬಿಜೆಪಿ ಭದ್ರಕೋಟೆಯನ್ನಾಗಿ ಮಾಡಿದ್ದಾರೆ.
2009ರಲ್ಲಿ ಹೆಚ್.ಟಿ ಸಾಂಗ್ಲಿಯಾನ, 2014, 2019ರಲ್ಲಿ ರಿಜ್ವಾನ್ ಅರ್ಷದ್ ಹಾಗೂ 2024ರಲ್ಲಿ ಮನ್ಸೂರ್ ಅಲಿ ಖಾನ್ಗೆ ಟಿಕೆಟ್ ನೀಡಿದರೂ ಕಾಂಗ್ರೆಸ್ಗೆ ಗೆಲುವು ಸಿಕ್ಕಿಲ್ಲ. ಈ ಬಾರಿ ಸಾಕಷ್ಟು ಪ್ರಯತ್ನ ಪಟ್ಟರೂ ಕ್ಷೇತ್ರ ಗೆಲ್ಲುವ ಕಾಂಗ್ರೆಸ್ ಕನಸು ನುಚ್ಚು ನೂರಾಗಿದ್ದು, ಬಿಜೆಪಿ ಗೆದ್ದು ಬೀಗಿದೆ.
ಉತ್ತರದಲ್ಲಿ ಸತತ ಐದನೇ ಗೆಲುವು:ಇನ್ನು ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಬಿಜೆಪಿ ಸತತ ಐದನೇ ಬಾರಿಗೆ ಗೆಲುವು ಸಾಧಿಸಿದೆ. ಕಾಂಗ್ರೆಸ್ನ ಭದ್ರಕೋಟೆಯಾಗಿದ್ದ ಬೆಂಗಳೂರು ಉತ್ತರದಲ್ಲಿ ಕೆಲ ಬಾರಿ ಜನತಾ ಪರಿವಾರ ಗೆದ್ದಿದ್ದು, ಬಿಟ್ಟರೆ ಮೂರನೇ ಸ್ಥಾನಕ್ಕೆ ತೃಪ್ತಿ ಪಡಬೇಕಿದ್ದ ಕ್ಷೇತ್ರದಲ್ಲಿ 2004ರಲ್ಲಿ ಹೆಚ್.ಟಿ ಸಾಂಗ್ಲಿಯಾನ ಮೂಲಕ ಬಿಜೆಪಿಗೆ ಮೊದಲ ಗೆಲುವು ಸಿಕ್ಕಿತು. ನಂತರ 2009ರಲ್ಲಿ ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಬಂದಿದ್ದ ಡಿಬಿ ಚಂದ್ರೇಗೌಡ ಗೆದ್ದರೆ 2014 ಮತ್ತು 2019 ರಲ್ಲಿ ಮಾಜಿ ಸಿಎಂ ಡಿವಿ ಸದಾನಂದಗೌಡ ಗೆದ್ದಿದ್ದರು. 2024ರಲ್ಲಿ ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಿದ್ದು, ಕ್ಷೇತ್ರದ ಮತದಾರರು ಬಿಜೆಪಿ ಮೇಲಿನ ಒಲವು ಕಡಿಮೆ ಮಾಡಿಲ್ಲ. ಸತತವಾಗಿ ಐದನೇ ಬಾರಿ ಬಿಜೆಪಿಗೆ ಗೆಲುವಿನ ಉಡುಗೊರೆ ನೀಡಿ ಬೆಂಗಳೂರು ಉತ್ತರವನ್ನು ಬಿಜೆಪಿ ಭದ್ರಕೋಟೆಯನ್ನಾಗಿ ಮಾಡಿದ್ದಾರೆ.
ಗ್ರಾಮಾಂತರದಲ್ಲಿ ಡಾಕ್ಟರ್ ಕಮಾಲ್:ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ 2008ರಲ್ಲಿ ಕ್ಷೇತ್ರ ಮರು ವಿಂಗಡಣೆಯಿಂದ ಅಸ್ತಿತ್ವಕ್ಕೆ ಬಂದಿದ್ದು, 2009ರ ಮೊದಲ ಚುನಾವಣೆಯಲ್ಲಿ ಜೆಡಿಎಸ್ನಿಂದ ಹೆಚ್.ಡಿ ಕುಮಾರಸ್ವಾಮಿ ಮೊದಲ ಗೆಲುವು ದಾಖಲಿಸಿದ್ದರು. ಆದರೆ 2013ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ಲೋಕಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರಿಂದ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಡಿಕೆ ಶಿವಕುಮಾರ್ ಸಹೋದರ ಡಿಕೆ ಸುರೇಶ್ ಗೆಲುವು ಸಾಧಿಸಿ ಕ್ಷೇತ್ರವನ್ನು ಜೆಡಿಎಸ್ನಿಂದ ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಂಡರು. ನಂತರ 2014 ಮತ್ತು 2019ರಲ್ಲಿ ಗೆದ್ದು ಹ್ಯಾಟ್ರಿಕ್ ಜಯ ಸಾಧಿಸಿ ಬೆಂಗಳೂರು ಗ್ರಾಮಾಂತರವನ್ನು ಕಾಂಗ್ರೆಸ್ ಭದ್ರಕೋಟೆಯನ್ನಾಗಿ ಮಾಡಿದರು. ಆದರೆ, 2024ರ ಚುನಾವಣೆಯಲ್ಲಿ ಭದ್ರಕೋಟೆಯನ್ನು ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್ ಮಂಜುನಾಥ್ ಛಿದ್ರಗೊಳಿಸಿದ್ದು, ಬಿಜೆಪಿಗೆ ಮೊದಲ ಗೆಲುವು ತಂದುಕೊಟ್ಟಿದ್ದಾರೆ.
ಜಯದೇವ ಹೃದ್ರೋಗ ಸಂಸ್ಥೆಯಲ್ಲಿ ನಿರ್ದೇಶಕರಾಗಿ ಸೇವೆ ಮಾಡಿ ದೇಶಾದ್ಯಂತ ಹೆಸರುವಾಸಿಯಾಗಿರುವ ಡಾ.ಸಿ.ಎನ್ ಮಂಜುನಾಥ್ ಸೇವೆಯಿಂದ ನಿವೃತ್ತರಾದ ನಂತರ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧೆ ಮಾಡಿದರು. ಸಾವಿರಾರು ಜನರಿಗೆ ಹೃದಯ ಚಿಕಿತ್ಸೆ ನೀಡಿದ್ದ ಮಂಜುನಾಥ್ ಬೆಂಗಳೂರು ಗ್ರಾಮಾಂತರ ಮತದಾರರ ಹೃದಯ ಗೆಲ್ಲುವಲ್ಲಿ ಸಫಲರಾಗಿದ್ದು, ಬಿಜೆಪಿ ಈವರೆಗೂ ಗೆಲ್ಲಲಾಗದ ಕ್ಷೇತ್ರವನ್ನು ಗೆದ್ದು ಬಿಜೆಪಿಗೆ ಉಡುಗೊರೆ ನೀಡಿದ್ದಾರೆ.
ಇದನ್ನೂ ಓದಿ:ರಾಜವಂಶಸ್ಥನಿಗೆ ಒಲಿದ ಪ್ರಜಾಪ್ರಭುತ್ವದ ಅಧಿಕಾರ: ಮೈಸೂರು ಕ್ಷೇತ್ರದಲ್ಲಿ ಯದುವೀರ್ ಒಡೆಯರ್ಗೆ ಗೆಲುವು - Yaduveer Wadiyar
2004ರಿಂದ ಬೆಂಗಳೂರಿನ ಮೂರು ಕ್ಷೇತ್ರ ಗೆಲ್ಲುವಲ್ಲಿ ವಿಫಲವಾಗಿದ್ದ ಕಾಂಗ್ರೆಸ್ ಬೆಂಗಳೂರು ಗ್ರಾಮಾಂತರವನ್ನು ಗಟ್ಟಿಯಾಗಿಸಿಕೊಂಡಿತ್ತು. 2019ರಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಕಾಂಗ್ರೆಸ್ ಕೈ ಹಿಡಿದಿತ್ತು. ಆದರೆ, ಈ ಬಾರಿ ಆ ಕ್ಷೇತ್ರ ಕೂಡ ಕಾಂಗ್ರೆಸ್ ಕೈ ತಪ್ಪಿದ್ದು, ಬೆಂಗಳೂರಿನ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಸಾಧನೆ ಶೂನ್ಯವಾಗಿದೆ. ಆಡಳಿತಾರೂಢ ಪಕ್ಷ ರಾಜ್ಯ ರಾಜಧಾನಿಯಲ್ಲಿ ಖಾತೆಯನ್ನೇ ತೆರೆಯಲಾಗಿಲ್ಲ.