ಬೆಂಗಳೂರು:"ನಾನೇಕೆ 150 ಕೋಟಿ ಆಫರ್ ಮಾಡಬೇಕು. ಕಾಂಗ್ರೆಸ್ ಅನ್ನು ಬಚಾವ್ ಮಾಡಲು ನಾನೇಕೆ ಹೋಗಲಿ" ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಶ್ನಿಸಿದ್ದಾರೆ.
ಮಲ್ಲೇಶ್ವರಂನ ಬಿಜೆಪಿ ಕಚೇರಿಯಲ್ಲಿಂದು ಮಾತನಾಡಿದ ಅವರು, ಅನ್ವರ್ ಮಾಣಿಪ್ಪಾಡಿಗೆ ವಕ್ಫ್ ಬಗ್ಗೆ ಬಾಯಿ ಮುಚ್ಚಲು 150 ಕೋಟಿ ಆಫರ್ ಕೊಟ್ಟಿರುವ ಕಾಂಗ್ರೆಸ್ ಆರೋಪ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, "ಮಾಜಿ ಮುಖ್ಯಮಂತ್ರಿಗಳ ಮಗನಾಗಿ ನಾನ್ಯಾಕೆ ಅನ್ವರ್ ಮಾಣಿಪ್ಪಾಡಿ ಮನೆಗೆ ಹೋಗಲಿ?. ಕಾಂಗ್ರೆಸ್ನವರು ಇಷ್ಟ ಬಂದಂತೆ ಆರೋಪ ಮಾಡಲಿ. ಕಾಂಗ್ರೆಸ್ನವರಿಗೆ ಏನಾಗಿದೆಯೋ ಗೊತ್ತಿಲ್ಲ. ಅದು ಕಾಂಗ್ರೆಸ್ನವರನ್ನು ರಕ್ಷಣೆ ಮಾಡೋಕೆ ನಾನ್ಯಾಕೆ ಹೋಗಲಿ?. ಪ್ರಿಯಾಂಕ್ ಖರ್ಗೆ ಸೇರಿ ಎಲ್ಲರೂ ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ನಾನು ಯಾಕೆ 150 ಕೋಟಿ ರೂ. ಆಫರ್ ಮಾಡಬೇಕು. ಕಾಂಗ್ರೆಸ್ನ್ನು ಏಕೆ ಬಚಾವ್ ಮಾಡೋಕೆ ಹೋಗಲಿ. ಇದರಲ್ಲಿ ತರ್ಕ ಇದೆಯಾ?. ಇದು ಮೂರ್ಖತನದ ಪರಮಾವಧಿ" ಎಂದು ವಾಗ್ದಾಳಿ ನಡೆಸಿದರು.
ಬಣ ರಾಜಕೀಯದ ಬಗ್ಗೆ ಮಾತನಾಡಿ, "ದಾವಣಗೆರೆಯಲ್ಲಿ ವಿಜಯೇಂದ್ರ ಶಕ್ತಿ ಪ್ರದರ್ಶನ ಅಂತಾ ಮಾಧ್ಯಮಗಳಲ್ಲಿ ನೋಡಿದೆ. ಆದರೆ ನಮ್ಮ ಬಿಜೆಪಿಯಲ್ಲಿ ಯಾವುದೇ ಬಣ ಇಲ್ಲ. ಯಾವುದೇ ಸಮಾವೇಶವಾಗಲಿ, ಗೊಂದಲಗಳಾಗಲಿ ನಮ್ಮಲ್ಲಿ ಇಲ್ಲ. ಲಜ್ಜೆಗೆಟ್ಟ ಕಾಂಗ್ರೆಸ್ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಸಮಯ ವ್ಯರ್ಥ ಮಾಡುತ್ತಿದೆ. ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸೋದಕ್ಕೆ ತಯಾರಿಲ್ಲ. ಉತ್ತರ ಕರ್ನಾಟಕ ಸಮಸ್ಯೆ, ಬಾಣಂತಿಯರ ಸಾವಿನ ಬಗ್ಗೆ ಮಾತಾಡೋಕೆ ತಯಾರಿಲ್ಲ. ಒಂದೆಡೆ ಮುಡಾ ಹಗರಣ ತನಿಖೆ ನಡೀತಿದೆ. ಆದ್ದರಿಂದ ಮುಖ್ಯಮಂತ್ರಿಗಳು ವಿಚಲಿತರಾಗಿ ನಡೆದುಕೊಳ್ಳುತ್ತಿದ್ದಾರೆ. ಈಗ ಕೋವಿಡ್ ಬಗ್ಗೆ ಚರ್ಚಿಸುವ ಅಗತ್ಯ ಏನಿತ್ತು" ಎಂದು ಕಿಡಿ ಕಾರಿದರು.
ಮಧ್ಯಂತರ ವರದಿ ತಗೊಂಡು ಚರ್ಚೆ ಮಾಡೋ ಮೂಲಕ ಸದನದ ದಿಕ್ಕು ತಪ್ಪಿಸುತ್ತಿದೆ. ಸರ್ಕಾರಕ್ಕೆ ಜನರ ಮೇಲೆ ಗಮನ ಇಲ್ಲ. ಪಂಚಮಸಾಲಿಗಳ ಮೇಲೆ, ಹಿಂದೂಗಳ ಮೇಲೆ ಲಾಠಿ ಪ್ರಹಾರ ಆಗಿದೆ. ಕನಿಷ್ಟ ಕ್ಷಮೆ ಕೇಳೋ ಕೆಲಸವನ್ನು CM ಆಗಲಿ, ಗೃಹಸಚಿವರಾಗಲಿ ಮಾಡಿಲ್ಲ. ಅಧಿಕಾರದ ದುರಂಹಕಾರದ ಪರಮಾವಧಿಯಲ್ಲಿ ಕೆಲಸ ಮಾಡುತ್ತಿದೆ. ಸರ್ಕಾರ ತನ್ನ ಜವಬ್ದಾರಿ ಮರೆತು ತನ್ನಿಷ್ಟದಂತೆ ಮಾಡುತ್ತಿದೆ" ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ:ಬಿಜೆಪಿಯಲ್ಲಿ ಬಣ ರಾಜಕೀಯಕ್ಕೆ ಅವಕಾಶವಿಲ್ಲ, ಬಣದ ಹೆಸರಲ್ಲಿ ಸಭೆಗಳ ಆಯೋಜನೆ ಒಪ್ಪಲಾಗದು: ವಿಜಯೇಂದ್ರ