ಮೈಸೂರು :ಸಿದ್ದರಾಮಯ್ಯ ಯಾವುದೇ ಕಾರಣಕ್ಕೂ ಪೂರ್ಣಾವಧಿ ಸಿಎಂ ಆಗಲ್ಲ. ಯಾವುದೇ ಕ್ಷಣದಲ್ಲಾದರೂ ರಾಜೀನಾಮೆ ನೀಡಬಹುದು. ಆದರೂ ಯಾವುದೇ ಕಾರಣಕ್ಕೂ ಡಿ.ಕೆ ಶಿವಕುಮಾರ್ ಸಿಎಂ ಆಗಬಾರದು ಎಂದು ಸಿದ್ದರಾಮಯ್ಯ ತಮ್ಮ ರಾಜಕೀಯ ದಾಳ ಉರುಳಿಸುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.
ಇಂದು ಸುತ್ತೂರು ಮಠಕ್ಕೆ ಭೇಟಿ ನೀಡಿದ ನಂತರ ಅವರು ಮಾಧ್ಯಮದರೊಂದಿಗೆ ಮಾತನಾಡಿ, ಡಿ.ಕೆ.ಶಿವಕುಮಾರ್ ಸಿಎಂ ಆಗಬಾರದು ಎಂದು ತಮ್ಮ ಆಪ್ತರ ಮೂಲಕ ಡಿನ್ನರ್ ಮೀಟಿಂಗ್ ಮಾಡಿ ಡಿ.ಕೆ.ಶಿವಕುಮಾರ್ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಸಿದ್ದರಾಮಯ್ಯ ರಾಜಕೀಯ ಚಾಣಕ್ಯ. ಆದ್ದರಿಂದಲೇ ತಮ್ಮ ಅವಧಿ ಮುಗಿಯುತ್ತಿದ್ದಂತೆ ಕುತಂತ್ರಗಳ ಮೂಲಕ ಡಿಕೆಶಿ ವಿರುದ್ಧ ದಾಳ ಉರುಳಿಸುತ್ತಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬರಲು ನನ್ನದು ಸಿಂಹಪಾಲು ಎಂದು ಡಿ. ಕೆ ಶಿವಕುಮಾರ್ ಸಿಎಂ ಆಗಲು ಕನಸು ಕಾಣುತ್ತಿದ್ದಾರೆ ಎಂದರು.
ಜಾತಿ ಗಣತಿ ವರದಿ ಅವೈಜ್ಞಾನಿಕ : ಸಿದ್ದರಾಮಯ್ಯ ಜಾತಿ ಗಣತಿ ವರದಿಯನ್ನ ಪಗಡೆಯಾಟ ಅಂದುಕೊಂಡು, ರಾಜಕೀಯ ದಾಳವನ್ನಾಗಿ ಮಾಡಿಕೊಂಡಿದ್ದಾರೆ. ತಮ್ಮ ಕುರ್ಚಿ ಅಲುಗಾಡುವಾಗ ಸಿದ್ದರಾಮಯ್ಯನವರಿಗೆ ಜಾತಿಗಣತಿ ವರದಿ ನೆನಪಿಗೆ ಬರುತ್ತದೆ. ಈಗಿರುವ ಜಾತಿ ಗಣತಿ ವರದಿ ಅವೈಜ್ಞಾನಿಕವಾಗಿದ್ದು, ಇದನ್ನ ಲಿಂಗಾಯಿತ ಹಾಗೂ ಒಕ್ಕಲಿಗ ಸಮುದಾಯ ವಿರೋಧಿಸುತ್ತಿದೆ. ಬೇರೆ ಜಾತಿಯವರಿಗೆ ನ್ಯಾಯ ಕೊಡಲು ನಮ್ಮ ಬೆಂಬಲ ಇದೆ. ಆದರೆ ಜಾತಿಗಣತಿ ಹೆಸರಲ್ಲಿ ರಾಜಕೀಯ ಮಾಡಬಾರದು. ಈಗಾಗಲೇ ಜಾತಿ ಗಣತಿ ವರದಿ ಸೋರಿಕೆಯಾಗಿದೆ, ಸರಿಯಾಗಿಲ್ಲ ಎಂದು ಹೇಳಿದರು.