ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಪ್ರತಿಕ್ರಿಯೆ ಬೆಂಗಳೂರು: ಕೋಟಿ ಕೋಟಿ ರಾಮಭಕ್ತರ ಆಸೆ ಇವತ್ತು ಈಡೇರಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ತಿಳಿಸಿದರು. ಮಹಾಲಕ್ಷ್ಮೀ ಲೇಔಟ್‌ನ ರಾಣಿ ಅಬ್ಬಕ್ಕ ಮೈದಾನದಲ್ಲಿ ಅಯೋಧ್ಯೆ ಶ್ರೀರಾಮ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮದ ಪ್ರಯುಕ್ತ ನಡೆದ ಶ್ರೀರಾಮತಾರಕ ಮಹಾಯಾಗ ಮತ್ತು ಕಲಶಾಭಿಷೇಕದಲ್ಲಿ ಪಾಲ್ಗೊಂಡು ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಅಯೋಧ್ಯೆ ಮತ್ತು ಕನ್ನಡಿಗರಿಗೆ ಅವಿನಾಭಾವ ಸಂಬಂಧವಿದೆ. ಪ್ರತಿಯೊಬ್ಬ ಕನ್ನಡಿಗರೂ ಹೆಮ್ಮೆ ಪಡುವ ದಿನ ಇದಾಗಿದೆ ಎಂದು ಹೇಳಿದರು.
ಶ್ರೀರಾಮತಾರಕ ಮಹಾಯಾಗ ಕಾರ್ಯಕ್ರಮ ದೇಶದ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಅಯೋಧ್ಯೆಯಲ್ಲಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ನೆರವೇರಿದೆ. ಇದು ಅತ್ಯಂತ ಹೆಮ್ಮೆಯ ಮತ್ತು ಸಂತೋಷದ ವಿಚಾರ. ಪ್ರತಿಯೊಬ್ಬ ಹಿಂದೂಗಳನ್ನು ಒಂದುಗೂಡಿಸುವ ಪವಿತ್ರ ಘಳಿಗೆ ಇಂದಿನದು. ಅಯೋಧ್ಯೆ, ಪ್ರಭು ಶ್ರೀರಾಮಚಂದ್ರನ ಜನ್ಮಸ್ಥಳ. ಪ್ರಭು ಶ್ರೀರಾಮಚಂದ್ರನ ಪರಮ ಭಕ್ತ ಹನುಮನ ಜನ್ಮಸ್ಥಳ ಕಿಷ್ಕಿಂಧೆ ಕರ್ನಾಟಕದಲ್ಲಿದೆ. ಬಲರಾಮನ ವಿಗ್ರಹಕ್ಕೆ ಶಿಲೆ ಕೂಡ ಕರ್ನಾಟಕದಿಂದ ಲಭಿಸಿದೆ. ಅದರ ಶಿಲ್ಪಿಗಳು ಕನ್ನಡನಾಡಿನವರು. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆದಿರುವುದು ನಮ್ಮೆಲ್ಲರ ಸೌಭಾಗ್ಯ ಎಂದರು.
ಪೂಜಾ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಚಿವ ಗೋಪಾಲಯ್ಯ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ರಾಜ್ಯ ಉಪಾಧ್ಯಕ್ಷೆ ಶ್ರೀಮತಿ ಮಾಳವಿಕಾ ಅವಿನಾಶ್, ಮಹಿಳಾ ಮೋರ್ಚಾ ರಾಜ್ಯಾಧ್ಯಕ್ಷೆ ಮಂಜುಳಾ, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್.ಹರೀಶ್, ಮಾಜಿ ಶಾಸಕ ನೆ.ಲ. ನರೇಂದ್ರಬಾಬು ಭಾಗವಹಿಸಿದ್ದರು.
ಮಾಜಿ ಸಚಿವ ಸೋಮಣ್ಣ ಜೊತೆ ಆರ್ ಅಶೋಕ್ ಹಬ್ಬದ ವಾತಾವರಣ ಸಹಿಸದ ಕಾಂಗ್ರೆಸ್ ಸರ್ಕಾರ ರಜೆ ಕೊಡಲು ನಿರಾಕರಿಸಿದೆ - ಆರ್ ಅಶೋಕ್: ಮತ್ತೊಂದೆಡೆ, ತ್ರೇತಾ ಯುಗದಲ್ಲಿ ರಾವಣನಿಗೆ, ದ್ವಾಪರ ಯುಗದಲ್ಲಿ ದುರ್ಯೋಧನನಿಗೆ ಆದ ಗತಿಯೇ ಕಲಿಯುಗದ ರಾಮ ದ್ವೇಷಿಗಳಿಗೂ ಆಗಲಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಇಡೀ ಭಾರತ ದೇಶ ರಾಮಮಯವಾಗಿದೆ, ಜನರೆಲ್ಲರೂ ಸ್ವಯಂಪ್ರೇರಿತರಾಗಿ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಈ ಹಬ್ಬದ ವಾತಾವರಣವನ್ನು ಸಹಿಸದ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ರಜೆ ಕೊಡಲು ನಿರಾಕರಿಸಿದೆ. ಕೈಹಿಡಿದ ಮಡದಿ ಮಂಡೋದರಿ, ಒಡ ಹುಟ್ಟಿದ ತಮ್ಮ ವಿಭಿಷಣ ರಾಮ ದ್ವೇಷ ಬೇಡ ಎಂದು ಎಷ್ಟೇ ಹೇಳಿದರೂ ಕೇಳದ ರಾವಣನ ಗತಿ ಕಡೆಗೆ ಏನಾಯಿತು? ಅಧರ್ಮದ ಹಾದಿ ಹಿಡಿದು, ಸ್ವಂತ ದಾಯಾದಿಗಳ ಮೇಲೆಯೇ ಯುದ್ಧ ಸಾರಿ, ಶ್ರೀಕೃಷ್ಣನನ್ನು ಎದುರು ಹಾಕಿಕೊಂಡ ದುರ್ಯೋಧನನ ಕಥೆ ಕಡೆಗೆ ಏನಾಯ್ತು? ತ್ರೇತಾ ಯುಗದಲ್ಲಿ ರಾವಣನಿಗೆ, ದ್ವಾಪರ ಯುಗದಲ್ಲಿ ದುರ್ಯೋಧನನಿಗೆ ಆದ ಗತಿಯೇ ಕಲಿಯುಗದ ರಾಮ ದ್ವೇಷಿಗಳಿಗೂ ಆಗಲಿದೆ ಎಂದು ಕಿಡಿಕಾರಿದ್ದಾರೆ.
ಮಾಜಿ ಸಿಎಂ ಡಿವಿಎಸ್ರಿಂದ ವಿಶೇಷ ಪೂಜೆ: ಆರ್.ಎಂ.ವಿ ಎರಡನೇ ಹಂತದಲ್ಲಿರುವ ಮಾರುತಿ ಮಂದಿರದಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ ವಿಶೇಷ ಪೂಜೆ ಸಲ್ಲಿಸಿ ರಾಮಜಪ ಮಾಡಿದರು. ರಾಮಭಕ್ತರ ಜೊತೆ ಸಂಭ್ರಮದಲ್ಲಿ ಪಾಲ್ಗೊಂಡರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಮಾಜಿ ಸಿಎಂ ಸದಾನಂದ ಗೌಡ, ಅಯೋಧ್ಯೆಯಲ್ಲಿ ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠಾಪನೆ ಆಗಿದೆ. ಕೋಟ್ಯಂತರ ದೇವಸ್ಥಾನದಲ್ಲಿ, ಕೋಟ್ಯಂತರ ಜನರು ಶ್ರೀ ರಾಮನ ಪೂಜೆಯಲ್ಲಿ ಭಾಗಿಯಾಗಿದ್ದಾರೆ ಎಂದರು.
ಇದನ್ನೂ ಓದಿ:ನಾನು ನಾಸ್ತಿಕನಲ್ಲ, ಆಸ್ತಿಕ; ನಮ್ಮೂರಲ್ಲೂ ರಾಮನ ಗುಡಿ ಕಟ್ಟಿಸಿದ್ದೇನೆ: ಸಿಎಂ ಸಿದ್ದರಾಮಯ್ಯ