ಕರ್ನಾಟಕ

karnataka

ETV Bharat / state

ದಸರಾ ಬಳಿಕ ಸಿದ್ದರಾಮಯ್ಯ ರಾಜೀನಾಮೆ ನೀಡುತ್ತಾರೆಂಬ ಮಾಹಿತಿ ಇದೆ: ಬಿ. ವೈ. ವಿಜಯೇಂದ್ರ - B Y Vijayendra - B Y VIJAYENDRA

ಮುಡಾ ವಿಚಾರದಲ್ಲಿ ನಮ್ಮ ಪಕ್ಷ ಪಾದಯಾತ್ರೆ ಮಾಡಿತು. ಅದರ ಪರಿಣಾಮ ಪ್ರತಿನಿತ್ಯ ನಾನೇ ಮುಖ್ಯಮಂತ್ರಿ ಎಂದು ಹೇಳಿಕೊಳ್ಳುವ ಕೆಟ್ಟ ಪರಿಸ್ಥಿತಿ ಸಿದ್ದರಾಮಯ್ಯನವರಿಗೆ ಬಂದಿದೆ ಎಂದು ಬಿಜೆಪಿ ರಾಜ್ಯಾ‍ಧ್ಯಕ್ಷ ಬಿ. ವೈ. ವಿಜಯೇಂದ್ರ ಹೇಳಿದರು.

ಬಿಜೆಪಿ ರಾಜ್ಯಾ‍ಧ್ಯಕ್ಷ ಬಿ.ವೈ. ವಿಜಯೇಂದ್ರ
ಬಿಜೆಪಿ ರಾಜ್ಯಾ‍ಧ್ಯಕ್ಷ ಬಿ.ವೈ. ವಿಜಯೇಂದ್ರ (ETV Bharat)

By ETV Bharat Karnataka Team

Published : Oct 6, 2024, 9:58 PM IST

Updated : Oct 6, 2024, 10:45 PM IST

ಮೈಸೂರು: ನನಗಿರುವ ಮಾಹಿತಿ ಪ್ರಕಾರ ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟೇ ಕೊಡುತ್ತಾರೆ. ಈ ಬಗ್ಗೆ ಕಾಂಗ್ರೆಸ್‌ ಹೈಕಮಾಂಡ್​ನಲ್ಲಿ ಗಂಭೀರ ಚರ್ಚೆ ನಡೆದಿರುವುದು ಸಿದ್ದರಾಮಯ್ಯನವರಿಗೂ ಗೊತ್ತಿದೆ ಎಂದು ಬಿಜೆಪಿ ರಾಜ್ಯಾ‍ಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದರು.

ನಗರದಲ್ಲಿ ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಡಾ ವಿಚಾರದಲ್ಲಿ ನಮ್ಮ ಪಕ್ಷ ಪಾದಯಾತ್ರೆ ಮಾಡಿತು. ಅದರ ಪರಿಣಾಮ ಪ್ರತಿನಿತ್ಯ ನಾನೇ ಮುಖ್ಯಮಂತ್ರಿ ಎಂದು ಹೇಳುವ ಕೆಟ್ಟ ಪರಿಸ್ಥಿತಿ ಸಿದ್ದರಾಮಯ್ಯನವರಿಗೆ ಬಂದಿದೆ. ಮತ್ತೊಂದು ಕಡೆ ಸಚಿವರು ಜಿಲ್ಲಾ ಪ್ರವಾಸ ಮಾಡುತ್ತಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಮಾತೇ ಇಲ್ಲ. ಈ ಮಧ್ಯೆ ಸತೀಶ್‌ ಜಾರಕಿಹೊಳಿಯನ್ನು ಸಿದ್ದರಾಮಯ್ಯನವರೇ ದೆಹಲಿಗೆ ಕಳುಹಿಸಿದ್ದರು. ಎಲ್ಲಾ ಬೆಳವಣಿಗೆಗಳನ್ನು ನೋಡಿದರೆ ಸಿದ್ದರಾಮಯ್ಯ ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ಯಾವ ಸಂದರ್ಭದಲ್ಲಿ ಬೇಕಾದರೂ ರಾಜೀನಾಮೆ ಕೊಡಬಹುದು ಎಂದರು.

ಬಿ. ವೈ. ವಿಜಯೇಂದ್ರ (ETV Bharat)

ನಮ್ಮ ಉದ್ದೇಶ ಸಿದ್ದರಾಮಯ್ಯನವರನ್ನು ಮಾತ್ರ ಕೆಳಗಿಳಿಸುವುದಲ್ಲ. ಇಡೀ ಭ್ರಷ್ಟ ಕಾಂಗ್ರೆಸ್‌ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸುವುದಾಗಿದೆ. ಈಗಾಗಲೇ ದಸರಾ ಬಳಿಕ ಮುಖ್ಯಮಂತ್ರಿಗಳು ರಾಜೀನಾಮೆ ಕೊಡುತ್ತಾರೆ ಎಂಬ ಮಾಹಿತಿ ಬರುತ್ತಿದೆ. ಕಾಂಗ್ರೆಸ್​ನಲ್ಲಿ ಏಳೆಂಟು ಜನ ಮುಖ್ಯಮಂತ್ರಿ ಆಕಾಂಕ್ಷಿಗಳಿದ್ದಾರೆ. ಯಾರು ಮುಖ್ಯಮಂತ್ರಿಯಾಗಬೇಕು ಎಂಬುದನ್ನು ಕಾಂಗ್ರೆಸ್‌ ಪಕ್ಷ ತೀರ್ಮಾನ ಮಾಡುತ್ತದೆ ಎಂದು ಹೇಳಿದರು.

ಜಿ.ಟಿ. ದೇವೇಗೌಡ ಹೇಳಿಕೆ ಜೆಡಿಎಸ್​ನ ಆಂತರಿಕ ವಿಚಾರ: ನಾವು ಪಾದಯಾತ್ರೆಯನ್ನು ಜಿ.ಟಿ. ದೇವೇಗೌಡ ಅವರನ್ನು ಕೇಳಿ ಮಾಡಿಲ್ಲ, ನಾವು ಒಂದು ರಾಜಕೀಯ ಪಕ್ಷವಾಗಿ ಜವಾಬ್ದಾರಿಯುತ ವಿರೋಧ ಪಕ್ಷವಾಗಿ ನಮ್ಮ ಕರ್ತವ್ಯವನ್ನು ಮಾಡಿದ್ದೇವೆ. ಮುಡಾ ಹಗರಣ ಕೇವಲ ಮುಖ್ಯಮಂತ್ರಿ ಕುಟುಂಬದ 14 ಸೈಟ್​ಗಳ ಹಗರಣವಲ್ಲ. ಮುಡಾದಲ್ಲಿ ಸಾವಿರಾರು ಕೋಟಿ ರೂಪಾಯಿಯ ಹಗರಣವಾಗಿದೆ. ಅದನ್ನು ಮುಂದಿನ ದಿನಗಳಲ್ಲಿ ಬಹಿರಂಗಪಡಿಸುತ್ತೇವೆ. ಜಿ.ಟಿ. ದೇವೇಗೌಡರ ವಿಚಾರ ಜೆಡಿಎಸ್​ನ ಆಂತರಿಕ ವಿಚಾರ. ಅದನ್ನು ಹೆಚ್.ಡಿ. ಕುಮಾರಸ್ವಾಮಿ ಸರಿಪಡಿಸುತ್ತಾರೆ ಎಂದರು.

ಮುಡಾದಲ್ಲಿ ಯಾವುದೇ ಹಗರಣ ಆಗಿಲ್ಲ ಎಂದು ಹೇಳುತ್ತಲೇ ತನಿಖೆಗೆ ದೇಸಾಯಿ ಸಮಿತಿ ನೇಮಿಸಿದರು. ಬಳಿಕ 14 ನಿವೇಶನಗಳನ್ನು ವಾಪಸ್‌ ನೀಡಿದ್ದಾರೆ. ಇದೇ ವಿಚಾರ ಸಿದ್ದರಾಮಯ್ಯನವರ ಕುರ್ಚಿಗೂ ಸಂಚಕಾರ ತಂದಿದ್ದು, ಹೇಳಿಕೆ ನೀಡುವ ಬದಲು ಪ್ರಾಮಾಣಿಕತೆಯಿಂದ ರಾಜೀನಾಮೆ ನೀಡಿ ಎಂದು ಆಗ್ರಹಿಸಿದರು.

ಚನ್ನಪಟ್ಟಣ ಉಪ ಚುನಾವಣೆ ಬಗ್ಗೆ ಟಿಕೆಟ್‌ ಹೈಕಮಾಂಡ್‌ ನಿರ್ಧಾರ: ಕುಮಾರಸ್ವಾಮಿ ದೆಹಲಿಯಲ್ಲಿ ಈ ಬಗ್ಗೆ ಚರ್ಚೆ ನಡೆಸಿದ್ದಾರೆ. ಯಾರಿಗೆ ಟಿಕೆಟ್‌ ನೀಡುತ್ತಾರೆ ಎಂಬುದು ನನಗೂ ಗೊತ್ತಿಲ್ಲ. ಪಕ್ಷದ ವರಿಷ್ಠರ ಜತೆ ಮಾತನಾಡುತ್ತೇನೆ. ಚನ್ನಪಟ್ಟಣದ ಟಿಕೆಟ್‌ ಅನ್ನು ಸಿ.ಪಿ.ಯೋಗೇಶ್ವರ್‌ ಕೇಳುವುದರಲ್ಲಿ ತಪ್ಪಿಲ್ಲ. ಅವರಿಗೆ ಚನ್ನಪಟ್ಟಣದಲ್ಲಿ ಅವರದ್ದೇ ಆದ ಶಕ್ತಿಯಿದೆ. ಇದನ್ನು ಪಕ್ಷದ ಹೈಕಮಾಂಡ್‌ ತೀರ್ಮಾನ ಮಾಡುತ್ತದೆ ಎಂದು ತಿಳಿಸಿದರು.

ಇದನ್ನೂ ಓದಿ:ರಂಗೇರಿದ ಚನ್ನಪಟ್ಟಣ ಉಪಚುನಾವಣಾ ಕಣ ; ಅಖಾಡಕ್ಕಿಳಿದ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ - Union Minister H D Kumaraswamy

Last Updated : Oct 6, 2024, 10:45 PM IST

ABOUT THE AUTHOR

...view details