ಬೆಳಗಾವಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಖಂಡಿಸಿ ಬೆಳಗಾವಿಯಲ್ಲಿ ಎತ್ತುಗಳಿಗೆ ದ್ವಿಚಕ್ರ ವಾಹನ ಕಟ್ಟಿ ಬಿಜೆಪಿ ಕಾರ್ಯಕರ್ತರು ವಿಭಿನ್ನವಾಗಿ ಪ್ರತಿಭಟನೆ ನಡೆಸಿ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸೋಮವಾರ ನಗರದ ಚನ್ನಮ್ಮ ವೃತ್ತದಲ್ಲಿ ಜಮಾಯಿಸಿದ ನೂರಾರು ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರ, ಸಿಎಂ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿಸಿದರು. ಎತ್ತುಗಳ ನೊಗಕ್ಕೆ ದ್ವಿಚಕ್ರ ವಾಹನ ಕಟ್ಟಿ ಅದರ ಮೇಲೆ ಕುಳಿತು ಶಾಸಕ ಅಭಯ್ ಪಾಟೀಲ್, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಸಂಚರಿಸುವ ಮೂಲಕ ಗಮನ ಸೆಳೆದರು.
ಇದೇ ವೇಳೆ ಮಾತನಾಡಿದ ಈರಣ್ಣ ಕಡಾಡಿ, "ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಜನರ ಜೀವನದ ಮೇಲೆ ಬರೆ ಎಳೆದು, ಜನರ ಜೇಬಿಗೆ ಕತ್ತರಿ ಹಾಕುತ್ತಿದೆ. ಪೆಟ್ರೋಲ್ ಶೇ.26-30, ಡೀಸೆಲ್ ಶೇ.14-18.5ರವರೆಗೆ ತೆರಿಗೆ ಹೆಚ್ಚಿಸಲಾಗಿದೆ. ಪ್ರತಿ ಲೀಟರ್ಗೆ ಮೂರೂವರೇ ರೂ. ದರ ಹೆಚ್ಚಿಸಿದ್ದಾರೆ. ಕೇಂದ್ರ ಸರ್ಕಾರ ದರ ಕಡಿಮೆ ಮಾಡುವಂತೆ ರಾಜ್ಯ ಸರ್ಕಾರ ಹೇಳುತ್ತಿದೆ. 2021 ನವೆಂಬರ್ 4ರಂದು ಪ್ರಧಾನಿ ಮೋದಿ ಅವರು ಪೆಟ್ರೋಲ್ಗೆ 5 ರೂ., ಡೀಸೆಲ್ಗೆ 10 ರೂ. ದರ ಕಡಿಮೆ ಮಾಡಿದರು. ಆಗ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬೊಮ್ಮಾಯಿ ಸರ್ಕಾರ ಕೂಡ 7 ರೂ. ಕಡಿಮೆ ಮಾಡಿತ್ತು. ಆದರೆ, ಸಿದ್ದರಾಮಯ್ಯ ಸರ್ಕಾರ ಮಾರಾಟ ತೆರಿಗೆ ಹೆಚ್ಚು ಮಾಡಿದೆ" ಎಂದು ಆರೋಪಿಸಿದರು.
"ಅಲ್ಲದೇ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಶೇ.25-30ರವರೆಗೆ ವಿದ್ಯುತ್ ದರ ಏರಿಸಿದೆ. ರೈತರ ಪಂಪ್ಸೆಟ್ಗಳಿಗೆ ಟಿಸಿ ಕೂರಿಸಲು ಒಂದೂವರೆಯಿಂದ ಮೂರು ಲಕ್ಷ ರೂ. ವರೆಗೆ ದರ ಹೆಚ್ಚಿಸಿದ್ದಾರೆ. ಅದೇ ರೀತಿ ನಿವೇಶನ ಮತ್ತು ಕಟ್ಟಡ ಮಾರ್ಗಸೂಚಿ ದರವನ್ನು 2023ರ ಅಕ್ಟೋಬರ್ ತಿಂಗಳಿನಿಂದ ಶೇ.20ರಿಂದ 50ರವರೆಗೆ ಏರಿಸಿದ್ದಾರೆ. ರೈತರ ವಾಟನಿ ಪತ್ರ 250ರಿಂದ 1 ಸಾವಿರಕ್ಕೆ ಹೆಚ್ಚಿಸಲಾಗಿದೆ. ಅಗ್ರಿಮೆಂಟ್ ಬಾಂಡ್, ಬ್ಯಾಂಕ್ ಗ್ಯಾರಂಟಿ ಶುಲ್ಕವನ್ನು 200ರಿಂದ 500 ರೂಪಾಯಿಗೆ ಏರಿಸಿದ್ದಾರೆ. ಅಡಮಾನ ಪತ್ರ 10 ಲಕ್ಷ ರೂ. ವರೆಗೆ 0.1 ಪರ್ಸೆಂಟ್ ಇದ್ದಿದ್ದನ್ನು 0.5 ಹೆಚ್ಚಿಸಿರುವುದು ಸೇರಿ ಹಾಲಿನ ದರ 3 ರೂ., ಬಿತ್ತನೆ ಬೀಜ ಗೊಬ್ಬರಗಳ ಬೆಲೆಯನ್ನೂ ಶೇ.30ರಷ್ಟು ಹೆಚ್ಚಿಸಿ ರೈತರು ಮತ್ತು ಜನಸಾಮಾನ್ಯರನ್ನು ಮತ್ತಷ್ಟು ಕಷ್ಟಕ್ಕೆ ದೂಡಿದ್ದಾರೆ" ಎಂದು ಈರಣ್ಣ ಕಡಾಡಿ ಆಕ್ರೋಶ ವ್ಯಕ್ತಪಡಿಸಿದರು.