ಆಡಳಿತ ಹಾಗೂ ಪ್ರತಿಪಕ್ಷ ಶಾಸಕರ ನಡುವೆ ಮಾತಿನ ಚಕಮಕಿ (ETV Bharat) ಬೆಂಗಳೂರು :ಬಿಜೆಪಿ ಶಾಸಕರು ಸಿದ್ದರಾಮಯ್ಯ ಅವರ ವಿರುದ್ಧ 100 ಪರ್ಸೆಂಟ್ ಸಿಎಂ ಎಂದು ಗಂಭೀರ ಆರೋಪ ಮಾಡಿದರು, ಇದರಿಂದ ಕೆರಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ ' ನಿಮ್ಮ ಹಗರಣಗಳನ್ನು ಹೊರ ತೆಗೆಯುತ್ತೇನೆ ' ಎಂದು ಎಚ್ಚರಿಕೆ ನೀಡುವ ಮೂಲಕ ವಿಧಾನಸಭೆಯಲ್ಲಿ ಮಾತಿನ ಜಟಾಪಟಿ ನಡೆದ ಪ್ರಸಂಗ ನಡೆಯಿತು.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಹಗರಣ ಕುರಿತು ನಿಯಮ 69ರ ಅಡಿ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ಮಾತನಾಡುತ್ತಾ, ಸರ್ಕಾರ ದಲಿತರ ಹಣವನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿದರು. ಆಗ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ದಲಿತ ಪದ ಬಳಕೆ ಮಾಡುವಂತಿಲ್ಲ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರು ಎಂದು ಹೇಳಿ ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕ ಆರ್. ಅಶೋಕ್, ಡಾ. ಸಿ.ಎನ್ ಅಶ್ವತ್ಥ್ನಾರಾಯಣ್, ಸುರೇಶ್ ಕುಮಾರ್ ಮತ್ತಿತರರು ಎದ್ದು ನಿಂತು ಅಹಿಂದ ಬಳಕೆ ಮಾಡಿದ್ದು ನೀವೇ ಅಲ್ಲವೇ ? ಎಂದು ತಿರುಗೇಟು ನೀಡಿದರು.
ಬಿಜೆಪಿಯವರು ಪದೇ ಪದೆ ಸಾವಿರಕ್ಕೂ ಹೆಚ್ಚು ಸಲ ಇದೇ ಪದ ಬಳಕೆ ಮಾಡುತ್ತಿರುವುದನ್ನು ನೋಡಿದರೆ ಇವರಿಗೆ ದಲಿತರ ಬಗ್ಗೆ ಕಾಳಜಿ ಇಲ್ಲ. ಇವರ ನಡವಳಿಕೆ ಸಾಮಾಜಿಕ ನ್ಯಾಯದ ವಿರುದ್ಧವಾಗಿದೆ ಎಂದು ಸಿಎಂ ಟಾಂಗ್ ಕೊಟ್ಟರು. ಆಗ ಅಶ್ವತ್ಥ್ನಾರಾಯಣ್ ಅವರು, ಕಾಂಗ್ರೆಸ್ ಸಾಮಾಜಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಟಾಂಗ್ ನೀಡಿದರು.
ಪ್ರತ್ಯುತ್ತರ ನೀಡಿದ ಮುಖ್ಯಮಂತ್ರಿಯವರು, ನಿಮ್ಮ ಹಗರಣಗಳು ಏನೇನಿವೆ ಎಂದು ತೆಗೆಯಬೇಕಾ ? ಎಲ್ಲವನ್ನೂ ತೆಗೆಯುತ್ತೇನೆ ಎಂದು ಗುಡುಗಿದರು. ಅದಕ್ಕೆ ಅಶ್ವತ್ಥ್ ನಾರಾಯಣ್ ಏರು ಧ್ವನಿಯಲ್ಲಿ ಪೇ ಸಿಎಂ, ಶೇ.100ರಷ್ಟು ಸಿಎಂ. ಏನು ಬೆದರಿಕೆ ಹಾಕುತ್ತೀರಾ. ತೆಗೆಯಿರಿ ಎಂದು ತಿರುಗಿ ಬಿದ್ದರು. ಇತರ ಸದಸ್ಯರು ಸಾಥ್ ನೀಡಿದರು. ಮಾತಿನ ಭರದಲ್ಲಿ ಭ್ರಷ್ಟಾತಿಭ್ರಷ್ಟ ಸಿಎಂ ಎಂದು ಅಶ್ವತ್ಥ್ ನಾರಾಯಣ್ ಆರೋಪಿಸಿದರು.
ಇದರಿಂದ ಮತ್ತಷ್ಟು ಸಿಟ್ಟಾದ ಸಿಎಂ ಸಿದ್ದರಾಮಯ್ಯ, ಏನೆಂದು ಮಾತನಾಡುತ್ತಿದ್ದೀರಾ. ನಿಮಗಿಂತಲೂ ಜೋರಾಗಿ ಕೂಗಲು ನನಗೂ ಬರುತ್ತದೆ. ಶೇ. 40 ರಷ್ಟು ಕಮಿಷನ್ ಪಡೆದ ನಿಮ್ಮಿಂದ ನಾವು ಭ್ರಷ್ಟಾಚಾರದ ಬಗ್ಗೆ ಪಾಠ ಕಲಿಯಬೇಕಾ ? ಇವರ ಭ್ರಷ್ಟಾಚಾರ ಬಯಲಾಗಿದೆ. ಇವರಿಗೆ ನಾಚಿಕೆಯಾಗಬೇಕು, ಮಾನ ಮರ್ಯಾದೆ ಇಲ್ಲದೇ ನಡೆದುಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷದ ಶಾಸಕರ ನಡುವೆ ಏರಿದ ಧ್ವನಿಯಲ್ಲಿ ಮಾತಿನ ಚಕಮಕಿ ನಡೆಯಿತು. ಈ ವೇಳೆ ಸಚಿವ ದಿನೇಶ್ ಗುಂಡುರಾವ್, ಮಾಜಿ ಉಪಮುಖ್ಯಮಂತ್ರಿಯಾಗಿದ್ದ ಅಶ್ವತ್ಥ್ನಾರಾಯಣ ಅವರಿಗೆ ಹೇಗೆ ಮಾತನಾಡಬೇಕು ಎಂದು ಗೊತ್ತಿಲ್ಲವೇ? ಎಂದು ಪ್ರಶ್ನಿಸಿದರು.
ಸಿಎಂ ಸಿದ್ದರಾಮಯ್ಯ ಎದ್ದು, ಜೈಲಿಗೆ ಹೋಗಿ ಬಂದವರು ಇವರು. ಭ್ರಷ್ಟಾಚಾರದಿಂದ ಅಧಿಕಾರಕ್ಕೆ ಬಂದವರು. ಕೆಪಿಎಸ್‍ಸಿ ನೇಮಕಾತಿಯಲ್ಲಿ ಏನಾಗಿದೆ ಎಲ್ಲರಿಗೂ ಗೊತ್ತಿದೆ. ಭೋವಿ ಅಭಿವೃದ್ಧಿ ನಿಗಮ, ದೇವರಾಜ ಅರಸು ಟ್ರಕ್ ಟರ್ಮಿನಲ್‍ನಲ್ಲಿ ನಡೆದಿರುವುದರ ಬಗ್ಗೆ ಬಿಜೆಪಿಯವರು ಬಾಯಿ ಬಿಡುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ಈ ಸರ್ಕಾರಕ್ಕೆ ಲೂಟಿ ಹೊಡೆಯುವುದೇ ಕೆಲಸವಾಗಿದೆ ಎಂದು ಅಶ್ವತ್ಥ್ನಾರಾಯಣ್ ಆರೋಪಿಸಿದರು. ಈ ಹಂತದಲ್ಲಿ ಅಶ್ವತ್ಥ್ ನಾರಾಯಣ್, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ದಿನೇಶ್ ಗುಂಡುರಾವ್ ನಡುವೆ ಮಾತಿನ ಚಕಮಕಿ ನಡೆಯಿತು. ಪರಸ್ಪರ ನಾಚಿಕೆಯಾಗುವುದಿಲ್ಲವೇ? ಎಂದು ಟೀಕಿಸಿದರು.
ಬಿಜೆಪಿಯ ಕೆಲ ಶಾಸಕರು ಹದ್ದು ಮೀರಿದ ವರ್ತನೆ ಪ್ರದರ್ಶಿಸುತ್ತಿದ್ದಾರೆ. ಅವರನ್ನು ಸದನದಿಂದ ಅಮಾನತು ಮಾಡಿ ಎಂದು ಕೃಷ್ಣಬೈರೇಗೌಡ ಸೇರಿದಂತೆ ಕಾಂಗ್ರೆಸ್ ಸದಸ್ಯರು ಒತ್ತಾಯಿಸಿದರು.
ಇದನ್ನೂ ಓದಿ :ವಿಧಾನಸೌಧ ಮುತ್ತಿಗೆ ಯತ್ನ, ಫ್ರೀಡಂ ಪಾರ್ಕ್ನಲ್ಲೇ ವಿಜಯೇಂದ್ರ ಸೇರಿ ಬಿಜೆಪಿ ನಾಯಕರು ಪೊಲೀಸ್ ವಶಕ್ಕೆ - Protest Against State Govt