ಕರ್ನಾಟಕ

karnataka

ETV Bharat / state

ಗುಣಮುಖನಾಗಿದ್ದೇನೆ, ಹಿತೈಷಿಗಳಿಗೆ ಧನ್ಯವಾದ: ಸುರೇಶ್ ಕುಮಾರ್ - MLA Suresh Kumar - MLA SURESH KUMAR

ಚಿಕೂನ್ ಗುನ್ಯಾದಿಂದ ಬಳಲುತ್ತಿದ್ದ ಬಿಜೆಪಿ ಶಾಸಕ ಎಸ್.ಸುರೇಶ್ ಕುಮಾರ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಈ ಕುರಿತು ಮಾಹಿತಿ ನೀಡಿ, ಆರೋಗ್ಯ ಸುಧಾರಣೆಗೆ ಪ್ರಾರ್ಥಿಸಿದ ಹಿತೈಷಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ.

ಸುರೇಶ್ ಕುಮಾರ್
ಬಿಜೆಪಿ ಶಾಸಕ ಎಸ್‌.ಸುರೇಶ್ ಕುಮಾರ್ (ETV Bharat)

By ETV Bharat Karnataka Team

Published : Sep 5, 2024, 7:02 AM IST

ಬೆಂಗಳೂರು:ಮ್ಯೂಟೆಂಟ್ ಚಿಕೂನ್ ಗುನ್ಯಾದಿಂದ ಗುಣಮುಖರಾಗಿರುವ ಮಾಜಿ ಸಚಿವ ಎಸ್.ಸುರೇಶ್ ಕುಮಾರ್ ಅವರು ತಮ್ಮ ಆರೋಗ್ಯದ ಕುರಿತು ಸಾಮಾಜಿಕ ಜಾಲತಾಣದ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ಜೊತೆಗೆ, ಹಿತೈಷಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.

'ನಿನ್ನೆ ರಾತ್ರಿಯಿಂದ ನನ್ನ ಆರೋಗ್ಯದ ಕುರಿತು ಮಾಧ್ಯಮಗಳಲ್ಲಿ ಬಂದ ಕೆಲವು ಸುದ್ಧಿಯ ಹಿನ್ನೆಲೆಯಲ್ಲಿ ಬಹಳಷ್ಟು ಜನ ಆತಂಕ ವ್ಯಕ್ತಪಡಿಸಿ ನನ್ನ ಆರೋಗ್ಯ ಸುಧಾರಿಸಲೆಂದು ಹಾರೈಸಿದ್ದಾರೆ. ಅವರೆಲ್ಲರಿಗೂ ನನ್ನ ಕೃತಜ್ಞತೆಗಳು' ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

'ನನ್ನ ಆರೋಗ್ಯ ಕಳೆದ ಆಗಸ್ಟ್ 20ರಿಂದ ತೀವ್ರ ಸಮಸ್ಯೆಗೆ ಒಳಗಾಗಿತ್ತು. ಆಗಸ್ಟ್ 15ರವರೆಗೆ ನಮ್ಮ ಕ್ಷೇತ್ರದಲ್ಲಿ ಸುಮಾರು 3 ಕಡೆ ಜನಸ್ಪಂದನ, ಆಗಸ್ಟ್ 14ರಂದು ಮಧ್ಯರಾತ್ರಿ ರಾಷ್ಟ್ರಧ್ವಜ ಹಾರಿಸುವ ಭರ್ಜರಿ ಕಾರ್ಯಕ್ರಮ, ನಮ್ಮ ಕ್ಷೇತ್ರದ ಪ್ರೌಢಶಾಲಾ ಮಕ್ಕಳಿಗಾಗಿ ಆಯೋಜಿಸಿದ ಅತ್ಯಂತ ಯಶಸ್ವಿ ಆಶು ಭಾಷಣ ಸ್ಪರ್ಧೆ, ಆಗಸ್ಟ್ 15ರಂದು ಬೆಳಗ್ಗೆಯಿಂದ ಸಂಜೆಯವರೆಗೂ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮಗಳು, ಆಗಸ್ಟ್ 16ರಂದು ಕ್ಷೇತ್ರದ ರಾಮ ಮಂದಿರ ವಾರ್ಡಿನಲ್ಲಿ ಕೈಗೊಂಡ ಜನ ಸ್ಪಂದನ ಕಾರ್ಯಕ್ರಮ.... ಹೀಗೆ ಸಂಪೂರ್ಣವಾಗಿ ಕ್ಷೇತ್ರದ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೆ. ಆಗಸ್ಟ್ 16, ವರಮಹಾಲಕ್ಷ್ಮಿ ಹಬ್ಬದಂದು ರಾಮಮಂದಿರ 4ನೇ ಬ್ಲಾಕ್ ಎಬಿಸಿ ಪಾರ್ಕ್​ನಲ್ಲಿ ಬೆಳಗ್ಗೆ ಜನಸ್ಪಂದನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಂದು ಸಂಜೆ ಐದು ಗಂಟೆಯ ವೇಳೆಗೆ ನನ್ನ ಆರೋಗ್ಯ ಸ್ವಲ್ಪ ಹದಗೆಟ್ಟಿತ್ತು. ಸಂಜೆ ವೇಳೆಗೆ ಎರಡೂ ಕಾಲುಗಳು ತುಂಬಾ ನೋಯಲು ಪ್ರಾರಂಭಿಸಿದವು. ಮಾರನೆಯ ದಿನ ಇಡೀ ದೇಹದಲ್ಲಿ ಒಂದಿಂಚು ನೋವಿಲ್ಲದ ಜಾಗವಿರಲಿಲ್ಲ. ಅದರ ಮಾರನೆಯ ದಿನ ನನ್ನ ರಕ್ತ ಪರೀಕ್ಷೆ ಮಾಡಲಾಯಿತು. ಅದರಲ್ಲೂ ಯಾವುದೇ ಚಿನ್ಹೆ ಗೊತ್ತಾಗಲಿಲ್ಲ. ಸೋಮವಾರ ಆ.28 ರಂದು ನೋವು ತಡೆಯಲಾರದೆ ಎದುರಿಸಲಾಗದೆ ಆಸ್ಪತ್ರೆಗೆ ಸೇರಲೇಬೇಕಾಯಿತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬುಧವಾರ ಅಂದರೆ 23 ಆಗಸ್ಟ್‌ರಂದು ನನ್ನ ಡಿಸ್ಚಾರ್ಜ್ ಮಾಡಲಾಯಿತು.'

'ಆದರೆ ಮಾರನೆಯ ದಿನ ದೇಹದಲ್ಲಿ ವಿಪರೀತ ಅಸ್ತವ್ಯಸ್ತ ಉಂಟಾಯಿತು. ಆಗ ವೈದ್ಯರು ತಪಾಸಣೆ ಮಾಡಿದ ಮೇಲೆ ನನಗೆ ಚಿಕನ್ ಗುನ್ಯಾ ಸಮಸ್ಯೆ ಗಂಭೀರ ಸ್ವರೂಪ ತಾಳಿದ್ದ ಬಗ್ಗೆ ಗೊತ್ತಾಯಿತು. ಅಲ್ಲಿಂದ ಪ್ರಾರಂಭವಾದ ನನ್ನ ಚಿಕೂನ್ ಗುನ್ಯಾ ವಿರುದ್ಧದ ಹೋರಾಟ ಬುಧವಾರ ಬೆಳಗ್ಗೆ ಒಂದು ಹಂತ ತಲುಪಿ, ಎಲ್ಲಾ ವೈದ್ಯರ ಉತ್ತಮ ಆರೈಕೆ, ಅಗತ್ಯ ಚಿಕಿತ್ಸೆ ಮೂಲಕ, ಆಸ್ಪತ್ರೆಯ ನರ್ಸ್​​ಗಳ ಕಾಳಜಿಯಿಂದ ಕೂಡಿದ ಸೇವೆಯ ಪರಿಣಾಮವಾಗಿ ಬುಧವಾರ ನಾನು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದೇನೆ' ಎಂದು ತಿಳಿಸಿದ್ದಾರೆ.

'ತಮಗೆಲ್ಲ ಗೊತ್ತು ಚಿಕೂನ್ ಗುನ್ಯಾ ನಂತರದ ಪರಿಣಾಮ ಸುಧಾರಿಸಲು ಕನಿಷ್ಠ 3 ವಾರಗಳು ಬೇಕು. ವೈದ್ಯರ ಸಲಹೆಯ ಮೇರೆಗೆ ನಾನು ಸುಧಾರಣೆಗಾಗಿ ನನ್ನ ಸಂಬಂಧಿಕರ ಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದೇನೆ. ಗುಣಮುಖವಾಗುವ ಹಾದಿಯಲ್ಲಿ ನನಗೆ ಮತ್ತೊಮ್ಮೆ ತಮ್ಮೆಲ್ಲರ ಆಶೀರ್ವಾದ ಹಾರೈಕೆ ಅಗತ್ಯವಿದೆ. ಅನೇಕ ಗೆಳೆಯರು ಕುಕ್ಕೆ ಸುಬ್ರಹ್ಮಣ್ಯದಿಂದ ಹಿಡಿದು ಅಂಗಾಳ ಪರಮೇಶ್ವರಿ ದೇವಿಯವರೆಗೂ ವಿವಿಧ ಪೂಜೆ ಸಲ್ಲಿಸಿ ನನ್ನ ಆರೋಗ್ಯ ಸುಧಾರಿಸಲೆಂದು ಹಾರೈಸಿರುವುದು ನನ್ನ ಮನ ತುಂಬಿಬಂದಿದೆ' ಎಂದು ಸುರೇಶ್ ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ:ಶಾಸಕ ಸುರೇಶ್​ ಕುಮಾರ್‌ಗೆ ಚಿಕೂನ್‌ಗುನ್ಯಾ, ಐಸಿಯುನಲ್ಲಿ ಚಿಕಿತ್ಸೆ - BJP MLA Suresh Kumar

ABOUT THE AUTHOR

...view details