ಮಂಗಳೂರು:ಬೆಳ್ತಂಗಡಿಯಲ್ಲಿ ದಿನವಿಡೀ ನಡೆದ ಹೈಡ್ರಾಮಾ ಬಳಿಕ ಬಿಜೆಪಿ ಶಾಸಕ ಹರೀಶ್ ಪೂಂಜ ಅವರು ಬುಧವಾರ ರಾತ್ರಿ 9.30ರ ಸುಮಾರಿಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಬಂದು ವಿಚಾರಣೆಗೆ ಹಾಜರಾದರು. ಶಾಸಕರ ವಿಚಾರಣೆ ನಡೆಸಿದ ಪೊಲೀಸರು, ಬಳಿಕ ಸ್ಟೇಷನ್ ಜಾಮೀನಿನಡಿ ಬಿಡುಗಡೆ ಮಾಡಿದ್ದಾರೆ.
ಶಾಸಕರ ಮನೆ ಮುಂದೆ ದಿನವಿಡೀ ಪೊಲೀಸರು ಕಾದರೂ ಕಾರ್ಯಕರ್ತರು ಪೂಂಜ ಅವರನ್ನು ವಶಕ್ಕೆ ಪಡೆಯಲು ಅವಕಾಶ ನೀಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಪೊಲೀಸರು ತಕ್ಷಣ ಠಾಣೆಗೆ ಹಾಜರಾಗುವಂತೆ ಶಾಸಕರಿಗೆ ನೋಟಿಸ್ ನೀಡಿ ಹಿಂದಿರುಗಿದ್ದರು. ಬಳಿಕ ರಾತ್ರಿ 9.30ರ ಸುಮಾರಿಗೆ ಶಾಸಕ ಹರೀಶ್ ಪೂಂಜ ಪೊಲೀಸ್ ಠಾಣೆಗೆ ಹಾಜರಾಗಿದ್ದರು.
ಶಾಸಕ ಹರೀಶ್ ಪೂಂಜ ವಿರುದ್ಧ ಬೆಳ್ತಂಗಡಿ ಠಾಣೆಯಲ್ಲಿ ದಾಖಲಾಗಿದ್ದ 2 ಪ್ರಕರಣಗಳಿಗೆ ಸಂಬಂಧಿಸಿದಂತೆ ವಿಚಾರಣೆಗಾಗಿ ಠಾಣೆಗೆ ಕರೆತರಲು ಬೆಳ್ತಂಗಡಿ ಠಾಣೆ ಪೊಲೀಸರು ಅವರ ಮನೆಗೆ ತೆರಳಿದ್ದರು. ಈ ವೇಳೆ ಸ್ಥಳದಲ್ಲಿದ್ದ ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲ್ ಅವರು, ತಾನೇ ಖುದ್ದಾಗಿ ಹರೀಶ್ ಪೂಂಜರನ್ನು ವಿಚಾರಣೆಗೆ ಠಾಣೆಗೆ ಕಳುಹಿಸುವುದಾಗಿ ವಿನಂತಿಸಿಕೊಂಡಿದ್ದರು. ಹಾಗೂ ಅದರಂತೆ ಸಂಸದರು ಆರೋಪಿತರಾದ ಹರೀಶ್ ಪೂಂಜರನ್ನು ಪೊಲೀಸ್ ಠಾಣೆಗೆ ಕಳುಹಿಸಿದ್ದಾರೆ. ಬಳಿಕ ಠಾಣೆಯಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಹರೀಶ್ ಪೂಂಜ ಅವರ ವಿಚಾರಣೆ ನಡೆಸಲಾಗಿದೆ. ಬೆಳ್ತಂಗಡಿ ಠಾಣೆ 58/2024, ಕಲಂ:143, 147, 341, 504, 506 ಜೊತೆಗೆ 149 ಐಪಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಹರೀಶ್ ಪೂಂಜರನ್ನು ವಿಚಾರಣೆ ನಡೆಸಿ, ಸ್ಟೇಷನ್ ಜಾಮೀನಿನಡಿ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ಮಾಧ್ಯಮದವರಿಗೆ ಮಾಹಿತಿ ನೀಡಿದ್ದಾರೆ.
ದಿನವಿಡೀ ಹೈಡ್ರಾಮಾ:ಬುಧವಾರ ಬೆಳಗ್ಗೆಯಿಂದ ಹರೀಶ್ ಪೂಂಜರನ್ನು ಪೊಲೀಸರು ವಶಕ್ಕೆ ಪಡೆಯುವ ಪ್ರಯತ್ನಕ್ಕೆ ಬಿಜೆಪಿ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದರು. ಬೆಳಗ್ಗಿನಿಂದ ಇಡೀ ದಿನ ಬಂಧನಕ್ಕೆ ಹೈಡ್ರಾಮಾವೇ ನಡೆಯಿತು. ಗರ್ಡಾಡಿಯ ಪೂಂಜ ಅವರ ಮನೆಯಲ್ಲಿ ನೂರಾರು ಕಾರ್ಯಕರ್ತರು ಜಮಾಯಿಸಿದ್ದರು. ಕೆಲಹೊತ್ತಲ್ಲೇ ಅವರ ಮನೆಗೆ ವಕೀಲರು, ಬಿಜೆಪಿ ನಾಯಕರು ಧಾವಿಸಿ ಹರೀಶ್ ಪೂಂಜರ ಬೆಂಬಲಕ್ಕೆ ನಿಂತರು. ಈ ಬಗ್ಗೆ ಬೆಳ್ತಂಗಡಿ ಠಾಣೆ ಇನ್ಸ್ಪೆಕ್ಟರ್, ಡಿವೈಎಸ್ಪಿ, ಬಿಜೆಪಿ ನಾಯಕರು ಹಾಗೂ ವಕೀಲರು ಪೊಲೀಸರೊಂದಿಗೆ ನಿರಂತರ ಮಾತುಕತೆ ನಡೆಸಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಇನ್ನಷ್ಟು ಕಾರ್ಯಕರ್ತರು ಜಮಾಯಿಸಿ, ಬಂಧನ ಮಾಡದಂತೆ ಘೋಷಣೆ ಕೂಗಿದರು.
ಪ್ರತಿಭಟನೆ ಎಚ್ಚರಿಕೆ:ಈ ವೇಳೆ ಸ್ಥಳಕ್ಕೆ ಬಂದ ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಹರೀಶ್ ಪೂಂಜರನ್ನು ಬಂಧನ ಮಾಡಿದರೆ ಜಿಲ್ಲಾ ಬಂದ್‌ಗೆ ಕರೆ ನೀಡುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ''ಅನ್ಯಾಯ ಹಾಗೂ ನಿರಪರಾಧಿಯ ಬಂಧನದ ವಿರುದ್ಧದ ಹೋರಾಟದಲ್ಲಿ ಶಾಸಕರು ಭಾಗಿಯಾಗುವುದು ಸಾಮಾನ್ಯ. ಇದಕ್ಕಾಗಿ ಶಾಸಕರ ಮೇಲೆ ಕೇಸ್ ದಾಖಲಿಸುವ ಹೀನ ಕೃತ್ಯವನ್ನು ಸಿದ್ದರಾಮಯ್ಯ ಸರ್ಕಾರ ಪೊಲೀಸರ ಮೂಲಕ ಮಾಡಿದೆ. ಕೇಸ್ ಹಾಕುವ ದ್ವೇಷದ ರಾಜಕೀಯ ಮಾಡುತ್ತಿದೆ. ಶಾಸಕರ ಜನಪ್ರಿಯತೆ ಸಹಿಸದೆ, ಸಣ್ಣ ಕಾರಣಕ್ಕೆ ಬಂಧಿಸುವ ಕಾರ್ಯಕ್ಕೆ ಕೈ ಹಾಕಿದೆ. ನೋಟಿಸ್ ಕೊಟ್ಟು ಹೋಗಬೇಕಾದವರು ಬಂಧಿಸಲು ಮುಂದಾಗಿದ್ದಾರೆ. ನಿಯಮ, ಸಂವಿಧಾನ ಮೀರಿ ಪೊಲೀಸರು ವರ್ತಿಸಿದ್ದಾರೆ. ಕಾನೂನಿಗೆ ಗೌರವ ಕೊಟ್ಟು ನೋಟಿಸ್ ತೆಗೆದುಕೊಂಡಿದ್ದಾರೆ. ಐದು ದಿನಗಳ ಕಾಲಾವಕಾಶ ಕೇಳಿದ್ದಾರೆ. ಇದಕ್ಕೂ ಮೀರಿ ಒತ್ತಡ ಹಾಕಿದರೆ ಇಡೀ ಜಿಲ್ಲೆಯಲ್ಲಿ ಪ್ರತಿಭಟನೆ ಮಾಡುತ್ತೇವೆ'' ಎಂದು ಸಂಸದ ನಳೀನ್ ಕುಮಾರ್ ಕಟೀಲ್ ಎಚ್ಚರಿಕೆ ನೀಡಿದ್ದರು.
'ಅಧಿಕಾರಕ್ಕಾಗಿ ಪೊಲೀಸರಿಗೆ ಬೈದಿಲ್ಲ':ಇದೇ ವೇಳೆ ಮಾತನಾಡಿದ್ದ ಹರೀಶ್ ಪೂಂಜ, ''ಪ್ರಕರಣದಲ್ಲಿ ಸಂಬಂಧವಿಲ್ಲದ ಒಬ್ಬ ಅಮಾಯಕನನ್ನು ಬಿಜೆಪಿಯಲ್ಲಿ ಮುಂಚೂಣಿಯಲ್ಲಿ ಇದ್ದಾನೆ ಅಂತ ಬಂಧನ ಮಾಡಿರುವುದನ್ನು ನಾನೊಬ್ಬ ಜನಪ್ರತಿನಿಧಿಯಾಗಿ ಖಂಡಿಸಿದ್ದೇನೆ. ದ್ವೇಷದ ರಾಜಕಾರಣ ಮಾಡಿದರೆ ಒಪ್ಪುವುದಿಲ್ಲ ಅಂತ ಪೊಲೀಸರ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದೇನೆ. ಅದನ್ನೇ ನೆಪವಾಗಿ ಇಟ್ಟುಕೊಂಡು ಮೂರು ಕೇಸ್ ಹಾಕಿದ್ದಾರೆ. ಅಧಿಕಾರಕ್ಕಾಗಿ ನಾನು ಪೊಲೀಸರಿಗೆ ಬೈದಿಲ್ಲ. ಸಿದ್ದರಾಮಯ್ಯ ಅಧಿಕಾರಕ್ಕಾಗಿ ಪೊಲೀಸ್ ಅಧಿಕಾರಿ ಬಿದರಿ ಕಾಲರ್ ಪಟ್ಟಿ ಹಿಡಿದಿಲ್ವಾ? ಕಾರ್ಯಕರ್ತರ ಶಕ್ತಿಗಾಗಿ ಪೊಲೀಸರಿಗೆ ಬೈದಿದ್ದು, ಅಧಿಕಾರಕ್ಕಲ್ಲ'' ಎಂದಿದ್ದರು.
''ಕಾಂಗ್ರೆಸ್‌ಗೆ ನೈತಿಕತೆ ಇಲ್ಲ, ಪೊಲೀಸರ ಮೇಲೆ ಹೆಚ್ಚಿನ ದೌಜನ್ಯ ಮಾಡಿರುವುದು ಕಾಂಗ್ರೆಸ್. ಬಿಜೆಪಿ ನಾಯಕರಿಗೆ ಬುದ್ದಿ ಹೇಳುವ ಅವಶ್ಯಕತೆ ಇಲ್ಲ. ತುರ್ತು ಪರಿಸ್ಥಿತಿಯಿಂದ ಹಿಡಿದು ಅವತ್ತಿನಿಂದ ಇವತ್ತಿನವರೆಗೂ ಪೊಲೀಸರನ್ನು ಇಟ್ಟುಕೊಂಡು ಕಾಂಗ್ರೆಸ್ ದೌರ್ಜನ್ಯ ಮಾಡುತ್ತಿದೆ. ಪ್ರಜ್ವಲ್ ರೇವಣ್ಣ ಪ್ರಕರಣ ಆದಾಗ ಕಾಂಗ್ರೆಸ್ ಪ್ರತಿಭಟನೆ ಮಾಡಿತ್ತಲ್ವಾ. ಆವಾಗ ಯಾವ ನ್ಯಾಯ, ಕಾನೂನು ಇತ್ತು. ಬಿಜೆಪಿ ಕಾರ್ಯಕರ್ತನಿಗೆ ಅನ್ಯಾಯ ಆದಾಗ ಪ್ರತಿಭಟನೆಗೆ ಅವಕಾಶ ನೀಡದೆ ಇರುವುದು ಯಾವ ನ್ಯಾಯ. ನಾನು ಹೈಕೋರ್ಟ್ನಲ್ಲಿ ಕಾನೂನು ವೃತ್ತಿ ಮಾಡಿ ಬಂದವನು. ಕಾನೂನಿನ ಬಗ್ಗೆ ಪೊಲೀಸ್ ಇಲಾಖೆ ಪಾಠ ಮಾಡುವ ಅಗತ್ಯ ಇಲ್ಲ. ವಿಚಾರಣೆಗೆ ಮುಂದೆ ಹಾಜರಾಗುತ್ತೇನೆ'' ಎಂದು ಪೂಂಜ ಹೇಳಿದ್ದರು.
ಇದನ್ನೂ ಓದಿ:ಹರೀಶ್ ಪೂಂಜಾ ಮನೆಗೆ ಪೊಲೀಸರು: ಬಂಧಿಸಿದ್ರೆ ಮುಂದಾಗುವ ವಿಚಾರಗಳಿಗೆ ಪೊಲೀಸರೇ ಹೊಣೆ ಎಂದ ಬಿ ವೈ ವಿಜಯೇಂದ್ರ - MLA Harish Poonja