ಕರ್ನಾಟಕ

karnataka

ETV Bharat / state

ವಾಲ್ಮೀಕಿ ನಿಗಮದ ಹಗರಣ: ವಿಧಾನಸೌಧಕ್ಕೆ ಬಿಜೆಪಿ ನಾಯಕರ ಪಾದಯಾತ್ರೆ - BJP Leaders Protest

ವಾಲ್ಮೀಕಿ ನಿಗಮದಲ್ಲಿನ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದರು.

bjp padayatra
ವಿಧಾನಸೌಧಕ್ಕೆ ಬಿಜೆಪಿ ನಾಯಕರ ಪಾದಯಾತ್ರೆ (ETV Bharat)

By ETV Bharat Karnataka Team

Published : Jul 15, 2024, 11:13 AM IST

Updated : Jul 15, 2024, 3:34 PM IST

ಬಿಜೆಪಿ ನಾಯಕರ ಪಾದಯಾತ್ರೆ (ETV Bharat)

ಬೆಂಗಳೂರು:ವಾಲ್ಮೀಕಿ ನಿಗಮದಲ್ಲಿನ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಶಾಸಕರ ಭವನದಲ್ಲಿ ಬಿಜೆಪಿ ನಾಯಕರು ಸೋಮವಾರ ಪ್ರತಿಭಟನೆ ನಡೆಸಿದರು. ನಂತರ ವಿಧಾನಸೌಧದವರೆಗೆ ಪಾದಯಾತ್ರೆ ಕೈಗೊಂಡರು.

ವಾಲ್ಮೀಕಿ ನಿಗಮದಲ್ಲಿನ ಅಕ್ರಮ ಪ್ರಕರಣ ಖಂಡಿಸಿ ಅಧಿವೇಶನ ಆರಂಭಕ್ಕೂ ಮೊದಲು ಬಿಜೆಪಿ ನಾಯಕರಿಂದ ಸಾಂಕೇತಿಕ ಪ್ರತಿಭಟನೆ ನಡೆಯಿತು. ಶಾಸಕರ ಭವನದಲ್ಲಿರುವ ವಾಲ್ಮೀಕಿ ಪ್ರತಿಮೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ‌ ಮಾಲಾರ್ಪಣೆ ಮಾಡಿದರು. ಸುನೀಲ್ ಕುಮಾರ್, ಆರಗ ಜ್ಞಾನೇಂದ್ರ, ಅರವಿಂದ್ ಬೆಲ್ಲದ್, ವಿಶ್ವನಾಥ್ ಸೇರಿದಂತೆ ಬಿಜೆಪಿ ಶಾಸಕರು, ವಿಧಾನಪರಿಷತ್ ಸದಸ್ಯರು ಭಾಗಿಯಾಗಿದ್ದರು.

ಮೊದಲು ಸರ್ಕಾರದ ವಿರುದ್ಧ ಪ್ಲೇ ಕಾರ್ಡ್ ಹಿಡಿದು ಪ್ರತಿಭಟನೆ ನಡೆಸಿದ ಬಿಜೆಪಿ ನಾಯಕರು, ಬಳಿಕ ಶಾಸಕರ ಭವನದಿಂದ ವಿಧಾನಸೌಧದ ವರೆಗೂ ಪಾದಯಾತ್ರೆ ನಡೆಸಿದರು. ಅಧಿವೇಶನದಲ್ಲಿ ಮೊದಲ ದಿನದ ಕಲಾಪ ಆರಂಭಗೊಳ್ಳುತ್ತಿದ್ದಂತೆ ನಿಗಮದ ಅಕ್ರಮ ವಿಷಯದ ಪ್ರಸ್ತಾಪ ಮಾಡಿ ಬಿಜೆಪಿ ಉಭಯ ಸದನಗಳಲ್ಲಿಯೂ ಹೋರಾಟ ಮಾಡಲು ಮುಂದಾದರು.

ಈ ವೇಳೆ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್ ಅಶೋಕ್, ರಾಜ್ಯದ ಇತಿಹಾಸದಲ್ಲಿ 187 ಕೋಟಿ ದಲಿತರ ಹಣ ಲೂಟಿಯಾಗಿದೆ. ಯಾವುದೇ ಸರ್ಕಾರ ಮಾಡಿರಲಿಲ್ಲ. ಕಾಂಗ್ರೆಸ್ ಸರ್ಕಾರ ಲೂಟಿ‌ ಮಾಡಿದೆ. ದಲಿತರ ಪರ ನಾವಿದ್ದೇವೆ ಅಂತ ಕಾಂಗ್ರೆಸ್ ಹೇಳುತ್ತದೆ. ಆದರೆ, ಅವರ ಮತ ಪಡೆದು ಅವರ ಹಣ ಲೂಟಿ‌ ಮಾಡಿದ್ದಾರೆ. 187 ಕೋಟಿ‌ ಲೂಟಿ‌ ಮಾಡಿದವರು ದಲಿತರೆ?, ಹಾಗಾಗಿ ಕಾಂಗ್ರೆಸ್ ವಿರುದ್ಧ ನಾವು ಪ್ರತಿಭಟನೆ ಮಾಡುತ್ತಿದ್ದೇವೆ.

ಸರ್ಕಾರ ನೈತಿಕವಾಗಿ ಸತ್ತು ಹೋಗಿದೆ. ಸಿಎಂಗೆ ಮಾನ ಮರ್ಯಾದೆ ಇದ್ರೆ ರಾಜೀನಾಮೆ ಕೊಡಬೇಕು. ಈ ಕುರಿತು ಸದನದ ಒಳಗೆ ಹೋರಾಟ ‌ಮಾಡುತ್ತೇವೆ. ಸಿಎಂ ಬಚಾವ್ ಆಗೋಕೆ ನಿವೃತ್ತ ಜಡ್ಜ್ ಮುಖಾಂತರ ನ್ಯಾಯಾಂಗ ತನಿಖೆ ಮಾಡಿಸುತ್ತಿದ್ದಾರೆ. ಇವರ ಮೇಲೆ ಆರೋಪ ಬಂದರೆ ನ್ಯಾಯಂಗ ತನಿಖೆಗೆ ನೀಡಿದ್ದಾರೆ. ಯಡಿಯೂರಪ್ಪ ಮೇಲೆ ಆದರೆ ಎಸ್​​ಐಟಿ ತನಿಖೆ, ಇವರಿಗಾದರೆ ನ್ಯಾಯಾಂಗ ತನಿಖೆ, ಇದು ಸರಿಯಲ್ಲ, ನಾವು ಸಿಬಿಐ ತನಿಖೆಗೆ ಒತ್ತಾಯ ಮಾಡುತ್ತಿದ್ದೇವೆ ಎಂದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಮಾತನಾಡಿ, ಸಿಎಂಗೆ ತಾಕತ್‌ ಇದ್ದರೆ ಸಿಬಿಐ ತನಿಖೆಗೆ ಕೋಡಬೇಕು. ನ್ಯಾಯಾಂಗ ತನಿಖೆ ಅಂತ ನಾಟಕ‌ ಮಾಡುತ್ತಿದ್ದಾರೆ. ಇದೊಂದು ದೊಡ್ಡ ಹಗರಣ. ಸದನದ ಒಳಗೆ ಹೊರಗೆ ನಾವು ಹೋರಾಟ ಮಾಡುತ್ತೇವೆ. ಸಿಎಂ ರಾಜೀನಾಮೆ ಕೋಡಬೇಕು. ದಲಿತರ ಹೆಸರಲ್ಲಿ ಅಧಿಕಾರಕ್ಕೆ ಬಂದು ದಲಿತರ ಹಣ ದೊಚಿದ್ದಾರೆ. ಕಾಂಗ್ರೆಸ್ ಸರ್ಕಾರದ ಬಂಡವಾಳ ಬಯಲಾಗಿದೆ. ಸಿಎಂ ನೈತಿಕತೆ ‌ಕಳೆದುಕೊಂಡಿದ್ದಿರಿ, ನಾಗೇಂದ್ರ ಈಗಾಗಲೇ ಇಡಿ‌ ಕಸ್ಟಡಿಯಲ್ಲಿದ್ದಾರೆ. ಸಿಎಂ ಇದಕ್ಕೆ ಉತ್ತರ ಕೊಡಬೇಕು. ಡಿಸಿಎಂ ಆರೋಪಿಗಳಿಗೆ ಕ್ಲೀನ್ ಚಿಟ್ ಕೊಡ್ತಾ ಇದ್ದಾರೆ. ಮುಡಾ ಹಗರಣ ಸಿಬಿಐಗೆ ವಹಿಸಬೇಕು. ವಾಲ್ಮೀಕಿ ನಿಗಮದ ಹಗರಣಕ್ಕೆ ಸದನದಲ್ಲಿ ಸಿಎಂ ಉತ್ತರ ಕೋಡಬೇಕು. ವಾಲ್ಮೀಕಿ ನಿಗಮದ ಬಗ್ಗೆ ನಿಲುವಳಿ‌ ಸೂಚನೆ ಕೊಟ್ಟಿದ್ದೇವೆ. ಇವತ್ತು ಚರ್ಚೆಗೆ ಅವಕಾಶ ಕೊಡುತ್ತೇವೆ. ಮುಡಾ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿ ಎಂದು ಆಗ್ರಹಿಸಿದರು.

ಇದನ್ನೂ ಓದಿ:ಇಂದಿನಿಂದ ವಿಧಾನಮಂಡಲ ಅಧಿವೇಶನ: ಶಾಸಕರ ಹಾಜರಾತಿ ಗುರುತಿಸಲು ಎಐ ತಂತ್ರಜ್ಞಾನ ಬಳಕೆ - Karnataka Monsoon Session

Last Updated : Jul 15, 2024, 3:34 PM IST

ABOUT THE AUTHOR

...view details