ಮೈಸೂರು:ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಕೇವಲ ಮೈಸೂರು ಅಭಿವೃದ್ಧಿ ಪ್ರಾಧಿಕಾರದ (ಮುಡಾ) 14 ಸೈಟ್ಗಳಿಗೆ ನಿಮ್ಮ ವರ್ಚಸ್ಸು ಕಳೆದುಕೊಳ್ಳಬೇಡಿ. ನಿಮಗೆ ಬಂದಿರುವ ಸೈಟ್ಗಳನ್ನು ವಾಪಸ್ ನೀಡಿ. ಹಗರಣದ ತನಿಖೆಯನ್ನು ದಕ್ಷ ನಿವೃತ್ತ ನ್ಯಾಯಮೂರ್ತಿಗಳಿಂದ ಮಾಡಿಸಿ. 4 ಸಾವಿರ ಕೋಟಿಯಷ್ಟು ನಿವೇಶನಗಳನ್ನು ಉಳಿಸಿದರೆ, ಮುಡಾಗೆ ಲಾಭ ಬರುತ್ತದೆ ಎಂದು ಮಾಜಿ ಸಂಸದ, ಬಿಜೆಪಿ ಮುಖಂಡ ಪ್ರತಾಪ್ ಸಿಂಹ ಹೇಳಿದರು.
ನಗರದ ಬಿಜೆಪಿ ಕಚೇರಿಯಲ್ಲಿಂದು ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಸಿದ್ದರಾಮಯ್ಯನವರು ನೊಣ ತಿಂದು ಜಾತಿ ಕೆಡಿಸಿಕೊಳ್ಳಬೇಡಿ. ಅಪಾರ ರಾಜಕೀಯ ಅನುಭವ ಉಳ್ಳವರು. ಕೇವಲ ಮುಡಾದ 14 ಸೈಟ್ಗಳಿಗಾಗಿ ನಿಮ್ಮ ವರ್ಚಸ್ಸು ಕುಗ್ಗುವಂತೆ ಮಾಡಿಕೊಳ್ಳಬೇಡಿ. 20 ವರ್ಷಗಳಲ್ಲಿ ಯಾರ್ಯಾರು ಮುಖ್ಯಮಂತ್ರಿಗಳು ಆಗಿದ್ದಾರೆ, ಅವರ ಆರ್ಥಿಕ ಸ್ಥಿತಿಗಳನ್ನು ನೋಡಿದರೆ, ನಾನು ನಿಮ್ಮನ್ನು ಭ್ರಷ್ಟ ಎಂದು ಹೇಳಲು ನಾನು ಸಿದ್ಧನಿಲ್ಲ. ಆದರೆ, ಇವತ್ತು ಹೊರಬಂದ ಪ್ರಕರಣ ನಿಮ್ಮ ಪ್ರಾಮಾಣಿಕತೆಯ ಬಗ್ಗೆ ಜನರಲ್ಲಿ ಅನುಮಾನ ಹಾಗೂ ಶಂಕೆಯನ್ನು ಮೂಡಿಸುವಂತಿದೆ. ನಿಮ್ಮ ಗಮನಕ್ಕೆ ನಿಮ್ಮ ಭಾವ-ಮೈದುನ ತಪ್ಪು ಮಾಡಿರಬಹುದು. ನೀವು ಸೈಟ್ಗಳನ್ನು ಮುಡಾಗೆ ಹಿಂದುರಿಗಿಸಿ ಮೇಲ್ಪಂಕ್ತಿ ಹಾಕಿ. ಈ ಹಗರಣವನ್ನು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅಥವಾ ನ್ಯಾ. ಎನ್.ಕುಮಾರ್ ಅಂತಹವರಿಂದ ತನಿಖೆ ಮಾಡಿಸಿ. ಯಾರ್ಯಾರು ಅಕ್ರಮವಾಗಿ ಸೈಟ್, ಬೇನಾಮಿ ಹೆಸರಲ್ಲಿ ಸೈಟ್ ಹೊಡೆದಿದ್ದಾರೆ, ಅವರಿಗೆಲ್ಲ ಧೈರ್ಯ ಕೊಟ್ಟಿರುವುದೇ ನೀವು. ಹೀಗಾಗಿ ತನಿಖೆ ಮಾಡಿಸುವವರೆಗೂ ಈ ಹಗರಣ ತಾರ್ಕಿಕ ಅಂತ್ಯಕ್ಕೆ ಹೋಗಲ್ಲ ಎಂದು ತಿಳಿಸಿದರು.
ಮುಡಾ ಅಧ್ಯಕ್ಷ ಮರೀಗೌಡ ತಿಳಿಗೇಡಿ:ಇದೇ ವೇಳೆ, ಪ್ರತಾಪ್ ಸಿಂಹ ಕೂಡ ತಮ್ಮ ಪತ್ನಿ ಹೆಸರಲ್ಲಿ ಸೈಟ್ ಪಡೆದಿದ್ದಾರೆ ಎಂಬ ಮುಡಾ ಅಧ್ಯಕ್ಷ ಮರೀಗೌಡ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಮರೀಗೌಡ ಅವರಿಗೆ ಕನಿಷ್ಠ ಜ್ಞಾನ ಇಲ್ಲ. ಇಂತಹ ವ್ಯಕ್ತಿಯನ್ನು ಸಿದ್ದರಾಮಯ್ಯ ತಮ್ಮ ಜೊತೆಗಿರಿಸಿಕೊಂಡಿರುವುದು, ಮುಡಾ ಅಧ್ಯಕ್ಷರನ್ನಾಗಿ ಮಾಡಿರುವುದೇ ಇಂದಿನ ನಮ್ಮ ಸಮಸ್ಯೆಗೆ ಕಾರಣವಾಗಿರಬಹುದು. ಹೀಗಾಗಿ ನಾನು ಸಿದ್ದರಾಮಯ್ಯ ಅವರಿಗೆ ತಮ್ಮ ಕುಟುಂಬಕ್ಕೆ ಬಂದಿರುವ ಕಳಂಕದಿಂದ ತಪ್ಪಿಸಿಕೊಳ್ಳಲು ಸೈಟ್ಗಳನ್ನು ಸರೆಂಡರ್ ಮಾಡಿ ಎಂದು ಅವರ ಮೇಲಿನ ಗೌರವದಿಂದ ಎರಡು ದಿನಗಳ ಹಿಂದೆ ಹೇಳಿದ್ದೆ. ಇದನ್ನು ಅರ್ಥ ಮಾಡಿಕೊಳ್ಳದ ಮರೀಗೌಡ ಮುಡಾಗೆ ಮೂರ್ನಾಲ್ಕು ಸಾವಿರ ಕೋಟಿ ನಷ್ಟ ಉಂಟು ಮಾಡುವ 50:50 ಅನುಪಾತದ ಸೈಟ್ ಹಗರಣಕ್ಕೂ ಮತ್ತು ನನ್ನ ಸೈಟ್ಗೂ ಹೋಲಿಕೆ ಮಾಡುತ್ತಿದ್ದಾನೆ ಎಂದರೆ, ಕನಿಷ್ಠ ತಿಳುವಳಿಕೆ ಇಲ್ಲ. ತಿಳಿಗೇಡಿಯನ್ನು ಮುಡಾ ಅಧ್ಯಕ್ಷರನ್ನಾಗಿ ಮಾಡಲಾಗಿದೆ ಎಂದೇ ಅರ್ಥ ಎಂದು ವಾಗ್ದಾಳಿ ನಡೆಸಿದರು.
ಇವರು ಎತ್ತಿರುವ ವಿಚಾರದಲ್ಲಿ ಕಾನೂನು ರೀತಿ ಇಲ್ಲ ಎಂದರೆ, ಅದನ್ನು ರದ್ದು ಮಾಡಿ ಎಂದು ನಾನು ಸಂಸದನಾಗಿದ್ದಾಗ ಮುಡಾ ಆಯುಕ್ತರಿಗೆ ತಿಳಿಸಿದ್ದೆ. ಸಾವಿರ, ಲಕ್ಷ ಲೆಕ್ಕದಲ್ಲಿ ದಂಡ ಕಟ್ಟಬೇಕಾದ ಪ್ರಕರಣ. ಅಲ್ಲದೇ, ಇದು ನಾನೇ ಹೇಳಿ ರದ್ದು ಮಾಡಿಸಿರುವ ಸಿಆರ್ ಪ್ರಕರಣ. ನೀವೇ ಮುಡಾ ಅಧ್ಯಕ್ಷ ಇದ್ದೀರಿ, ಕಾನೂನು ರೀತಿ ಕ್ರಮ ಕೈಗೊಳ್ಳಿ ಎಂದು ಸೆಪ್ಟೆಂಬರ್ನಲ್ಲಿ ಹೇಳಿದ್ದೀನಿ. ಕ್ರಮದ ಪ್ರಕಾರ ದಂಡ ಕಟ್ಟಿದ್ರೆ ಆಗುತ್ತದೆ. ಅದಕ್ಕೂ, ಈ ಹಗರಣಕ್ಕೂ ಏನು ಸಂಬಂಧ?. ಈ ಮರೀಗೌಡ ಹಿಂದೆ ಮೈಸೂರು ಡಿಸಿಯಾಗಿದ್ದ ಶಿಖಾ ಅವರನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಈ ಪ್ರಕರಣದಿಂದ ತಪ್ಪಿಸಿಕೊಳ್ಳಲು ಒಂದೂವರೆ ತಿಂಗಳು ತಲೆಮರೆಸಿಕೊಂಡಿದ್ದ. ಈ ವ್ಯಕ್ತಿಗೆ ಸಿದ್ದರಾಮಯ್ಯನವರ ಬಗ್ಗೆ ಕಾಳಜಿ, ಗೌರವ, ಪ್ರೀತಿಯನ್ನು ಅರ್ಥ ಮಾಡಿಕೊಳ್ಳುವ ಜ್ಞಾನ ಇಲ್ಲ ಎಂದು ಪ್ರತಾಪ್ ಸಿಂಹ ಟೀಕಿಸಿದರು.
ಮೈಸೂರಿನವರೇ ಸಿಎಂ ಹಮ್ಮೆ: ಮತ್ತೊಂದೆಡೆ,ಸಿದ್ದರಾಮಯ್ಯ ಮೂರೂವರೆ ವರ್ಷ ಸಿಎಂ ಆಗಿರುತ್ತಾರೆ ಎಂದು ಅವರ ಹಿಂಬಾಲಕರು ಹೇಳುತ್ತಾರೆ. ಅದನ್ನೇ ನಾನು ಹೇಳಿದ್ದೇನೆ. ಡಿ.ಕೆ. ಶಿವಕುಮಾರ್ ಸಿಎಂ ಆದರೂ ಖುಷಿ. ಅವರು ಸಹಾ ಹಳೆ ಮೈಸೂರು ಭಾಗದವರೇ. ಆದರೆ ಸಿದ್ದರಾಮಯ್ಯ ಸಿಎಂ ಆಗಿರುವುದು ಬೇರೆ ಖುಷಿನೇ. ಯಾಕೆಂದರೆ, ಅವರು ಬೇರೆ ಪಕ್ಷದಲ್ಲಿ ಇದ್ದರೂ, ಮೈಸೂರಿನವರೇ ಸಿಎಂ ಎಂಬುದು ನಮಗೆ ಹೆಮ್ಮೆ ಆಗಿರುತ್ತದೆ ಎಂದು ಪ್ರತಾಪ್ ಸಿಂಹ ಹೇಳಿದರು.