ಬೆಂಗಳೂರು:ಮುಡಾ ಹಗರಣ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆಮುಖ್ಯಮಂತ್ರಿ ಸಿದ್ದರಾಮಯ್ಯ, ಪತ್ನಿ ಬಿ.ಎಂ.ಪಾರ್ವತಿ ಸೇರಿ ಆರು ಮಂದಿ ವಿರುದ್ಧ ಲೋಕಾಯುಕ್ತಕ್ಕೆ ಬಿಜೆಪಿ ಮುಖಂಡ ಎನ್.ಆರ್. ರಮೇಶ್ ದೂರು ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ, ಇವರ ಸಹೋದರ ಬಿ.ಎಂ. ಮಲ್ಲಿಕಾರ್ಜುನಸ್ವಾಮಿ ಮುಡಾದ ಮಾಜಿ ಅಧ್ಯಕ್ಷರಾದ ಬಸವನಗೌಡ, ಹೆಚ್.ವಿ. ರಾಜೀವ್ ಹಾಗೂ ಆಯುಕ್ತರಾಗಿದ್ದ ಡಿ.ಬಿ. ನಟೇಶ್ ವಿರುದ್ಧ ಅಧಿಕಾರ ದುರುಪಯೋಗ, ವಂಚನೆ ಹಾಗೂ ಭ್ರಷ್ಟಾಚಾರ ಆರೋಪದಡಿ ಎನ್.ಆರ್. ರಮೇಶ್ ದೂರು ದಾಖಲಿಸಿದ್ದಾರೆ. ವಿಜಯನಗರ 3 ಮತ್ತು 4ನೇ ಹಂತದ ಬಡಾವಣೆಗಳಲ್ಲಿ ಒಟ್ಟು 38,284 ಚದರ್ ಅಡಿ ವಿಸ್ತೀರ್ಣದ 14 ನಿವೇಶನಗಳನ್ನು 'ಬದಲಿ ನಿವೇಶನ'ದ ಹೆಸರಿನಲ್ಲಿ ಬಿ.ಎಂ. ಪಾರ್ವತಿಯವರ ಹೆಸರಿಗೆ 2021-2022ರಲ್ಲಿ ಕಾನೂನಿನ ಎಲ್ಲಾ ನಿಯಮಗಳನ್ನು ಮೀರಿ ಹಂಚಿಕೆ ಮಾಡಲಾಗಿದೆ ಎಂದು ದೂರಿನಲ್ಲಿ ಎನ್.ಆರ್. ರಮೇಶ್ ಆಪಾದಿಸಿದ್ದಾರೆ.
ನಗರಾಭಿವೃದ್ಧಿ ಇಲಾಖೆಯ ನಿಯಮ ಪ್ರಕಾರ ಬಡಾವಣೆಯ ನಿರ್ಮಾಣಕ್ಕೆಂದು ಪ್ರಾಧಿಕಾರವು ಸ್ಥಳೀಯರ ಸ್ವತ್ತುಗಳನ್ನು ಭೂಸ್ವಾಧೀನ ಪಡಿಸಿಕೊಳ್ಳುತ್ತದೆಯೋ, ಅಂತಹ ಸ್ವತ್ತುಗಳ ಮಾಲೀಕರಿಗೆ ಅದೇ ಬಡಾವಣೆಯಲ್ಲಿ ನಿವೇಶನಗಳನ್ನು ಹಂಚಬೇಕು ಅಥವಾ ಆ ಬಡಾವಣೆಯ ನಂತರ ಪ್ರಾಧಿಕಾರವು ಅಭಿವೃದ್ಧಿಪಡಿಸುವ ಬಡಾವಣೆಯಲ್ಲಿ ಬದಲಿ ನಿವೇಶನ ಹಂಚಿಕೆ ಮಾಡಬಹುದಾಗಿರುತ್ತದೆ. ಆದರೆ, ಎಂತಹ ಸಂದರ್ಭದಲ್ಲಿಯೂ ಸಹ ಉದ್ದೇಶಿತ ಬಡಾವಣೆಯ ನಿವೇಶನಗಳಿಗೆ ಬದಲಾಗಿ, ಬಡಾವಣೆಗಿಂತಲೂ ಮುಂಚಿತವಾಗಿ ಅಭಿವೃದ್ಧಿಪಡಿಸಿರುವ ಬಡಾವಣೆಗಳಲ್ಲಿ ಬದಲಿ ನಿವೇಶನಗಳನ್ನು ಹಂಚಿಕೆ ಮಾಡುವುದು ಅಪರಾಧವಾಗಿದೆ ಎಂದು ದೂರಿದ್ದಾರೆ.