ವಕೀಲ ದೇವರಾಜೇಗೌಡ ಬಂಧನ (ETV Bharat) ಚಿತ್ರದುರ್ಗ/ಹಾಸನ: ಹಾಸನದ ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಪೆನ್ಡ್ರೈವ್ ಹಂಚಿಕೆ ಪ್ರಕರಣದಲ್ಲಿ ಸುದ್ದಿಯಾಗಿರುವ ಬಿಜೆಪಿ ಮುಖಂಡ ಹಾಗೂ ವಕೀಲ ದೇವರಾಜೇಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೊಳೆನರಸೀಪುರ ಠಾಣೆಯಲ್ಲಿ ದಾಖಲಾದ ಲೈಂಗಿಕ ದೌರ್ಜನ್ಯ, ಬೆದರಿಕೆ ಕೇಸ್ ಸಂಬಂಧ ವಕೀಲ ದೇವರಾಜೇಗೌಡ ಅವರನ್ನು ಪೊಲೀಸರು ಮೊದಲು ವಶಕ್ಕೆ ಪಡೆದು ವಿಚಾರಣೆ ನಡೆಸಿದರು.
ಹಾಸನ ಪೊಲೀಸರ ಮಾಹಿತಿ ಆಧರಿಸಿ ದೇವರಾಜೇಗೌಡ ಅವರನ್ನು ಹಿರಿಯೂರು ಪೊಲೀಸರು ಶುಕ್ರವಾರ ರಾತ್ರಿ ವಶಕ್ಕೆ ಪಡೆದಿದ್ದರು. ಬಳಿಕ ಪಿಎಸ್ಐ ಅರುಣ್ ನೇತೃತ್ವದಲ್ಲಿ ಪೊಲೀಸರು ಆಗಮಿಸಿ, ದೇವರಾಜೇಗೌಡ ಅವರನ್ನು ವಶಕ್ಕೆ ಪಡೆದು ತಡರಾತ್ರಿ ಹೊಳೆನರಸೀಪುರಕ್ಕೆ ಕರೆದೊಯ್ದು ವಿಚಾರಣೆ ನಡೆಸುತ್ತಿದ್ದಾರೆ.
ಕಾರಲ್ಲಿ ತೆರಳುತ್ತಿದ್ದ ದೇವರಾಜೇಗೌಡ: ಬ್ಯಾಗ್ನೊಂದಿಗೆ ಕಾರಲ್ಲಿ ದೇವರಾಜೇಗೌಡ ತೆರಳುತ್ತಿದ್ದರು. ಈ ವೇಳೆ ಪೊಲೀಸರು ವಶಕ್ಕೆ ಪಡೆದಿದ್ದರು. ಬಳಿಕ ಹೊಳೆನರಸೀಪುರ ಪೊಲೀಸರು, ವಶಕ್ಕೆ ಪಡೆದು ಕರೆದೊಯ್ದಿದ್ದಾರೆ.
ಹೊಳೆನರಸೀಪುರದ ವೃತ್ತ ನಿರೀಕ್ಷರರ ಕಚೇರಿಯಲ್ಲಿ ದೇವರಾಜೇಗೌಡ ಅವರನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಹಾಸನದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ಅವರು ಹೊಳೆನರಸೀಪುರ ಕಚೇರಿಗೆ ಆಗಮಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಸಂಜೆ ವೇಳೆಗೆ ಬಂಧಿಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ.
ಹೊಳೆನರಸೀಪುರ ಠಾಣೆಯಲ್ಲಿ ಏಪ್ರಿಲ್ 1 ರಂದು ದೇವರಾಜೇಗೌಡ ವಿರುದ್ಧ ಲೈಂಗಿಕ ದೌರ್ಜನ್ಯ ಮತ್ತು ಬೆದರಿಕೆ ಆರೋಪದಡಿ ಮಹಿಳೆಯೊಬ್ಬರು ದೂರು ನೀಡಿದ್ದರು. ಸೈಟ್ ಮಾರಾಟದ ವಿಚಾರವಾಗಿ ಸಹಾಯ ಮಾಡುವ ನೆಪದಲ್ಲಿ ದೇವರಾಜೇಗೌಡ ಅವರು ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೇ, ಹೇಳಿದ ಹಾಗೆ ಕೇಳದಿದ್ದರೆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದರು ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದರು. ಜೊತೆಗೆ ಹೊಳೆನರಸೀಪುರ ಬಿಜೆಪಿ ಕಚೇರಿಯ ಓರ್ವ ಸಿಬ್ಬಂದಿ ಮತ್ತು ಇತರ ಇಬ್ಬರ ವಿರುದ್ಧವೂ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದರು.
ಹನಿಟ್ರ್ಯಾಪ್ ಮಾಡಿದ್ದಾರೆಂದು ಆರೋಪಿಸಿ ಸಂತ್ರಸ್ತ ಮಹಿಳೆಯ ವಿರುದ್ಧ ಮಾಚ್ 38 ರಂದು ಹೆಬ್ಬಾಳದಲ್ಲಿ ದೇವರಾಜೇಗೌಡ ಅವರು ದೂರು ದಾಖಲಿಸಿದ್ದರು. ಆ ಬಳಿಕ ಏಪ್ರಿಲ್ 1 ರಂದು ದೇವರಾಜೇಗೌಡ ವಿರುದ್ಧ ಮಹಿಳೆ ದೂರು ನೀಡಿದ್ದರು.
ಇದನ್ನೂ ಓದಿ:ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮೂರನೇ ಎಫ್ಐಆರ್ ದಾಖಲು: ವರದಿ - MP Prajwal Revanna