ಬೆಂಗಳೂರು:ಬಾಣಂತಿಯರ ಸಾವುಗಳ ಸತ್ಯಶೋಧನೆ, ಅಧಿಕಾರಿಗಳು ಹಾಗೂ ಇತರರ ಸರಣಿ ಆತ್ಮಹತ್ಯೆಗೆ ಕಾರಣ ಹುಡುಕಿ ಆಂದೋಲನ ನಡೆಸಲು ಬಿಜೆಪಿ ಸಜ್ಜಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಮಾರ್ಗದರ್ಶನದಲ್ಲಿ ಪ್ರಮುಖ ಮುಖಂಡರನ್ನು ಒಳಗೊಂಡ ಆಂದೋಲನ ಸಮಿತಿ ಹಾಗೂ ಸತ್ಯಶೋಧನಾ ತಂಡವನ್ನು ಪ್ರತ್ಯೇಕವಾಗಿ ರಚಿಸಲಾಗಿದ್ದು, ಅದಕ್ಕೆ ಜವಾಬ್ದಾರಿ ಸಹ ನಿಗದಿಪಡಿಸಲಾಗಿದೆ.
ಸರ್ಕಾರಿ ಅಧಿಕಾರಿ, ಸಿಬ್ಬಂದಿ ಮತ್ತು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡ ಸ್ಥಳಗಳಿಗೆ ಭೇಟಿ ನೀಡಿ ಆತ್ಮಹತ್ಯೆಗೆ ಕಾರಣ, ಪೂರ್ವಾಪರ ಮಾಹಿತಿ ಸಂಗ್ರಹಿಸುವುದು. ಪ್ರಕರಣ ಬೆಳಕಿಗೆ ಬಂದ ನಂತರ ಉಸ್ತುವಾರಿ ಸಚಿವರ ಸ್ಪಂದನೆ, ಸರ್ಕಾರ ಕೈಗೊಂಡ ಕ್ರಮ, ತನಿಖೆಯ ಪ್ರಗತಿ ಮತ್ತಿತರ ವಿವರಗಳನ್ನು ಆಂದೋಲನ ಸಮಿತಿ ಸಂಗ್ರಹಿಸಲಿದೆ.
18 ಮಂದಿ ಪ್ರಮುಖರ ಆಂದೋಲನ ಸಮಿತಿ:ವಿಧಾನಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿ ಒಟ್ಟು 18 ಜನ ಪ್ರಮುಖರನ್ನು ಒಳಗೊಂಡ ಆಂದೋಲನ ಸಮಿತಿಯು ಸಂಗ್ರಹಿಸಿದ ಮಾಹಿತಿಯನ್ನು ಜನರ ಮುಂದಿಡಲಿದೆ. ಹೋರಾಟದ ಮೂಲಕ ಸರ್ಕಾರಕ್ಕೆ ತ್ವರಿತ ಕ್ರಮಗಳಿಗೆ ಒತ್ತಡ ಹೇರಲಿದೆ.
ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಬಿಸಿ ಮುಟ್ಟಿಸಿದರೆ ಸರ್ಕಾರದ ಬಣ್ಣ ಬಯಲಾಗಲಿದೆ. ತಳಮಟ್ಟದಲ್ಲಿ ಏನಾಗುತ್ತಿದೆ, ಏನಾಗಿದೆ ಎಂದು ಎತ್ತಿ ತೋರಿಸಿ ಗಟ್ಟಿ ಜನಾಭಿಪ್ರಾಯ ರೂಪುಗೊಳ್ಳುತ್ತದೆ. ಈ ಕ್ರಮದಿಂದ ಜನರ ಜೊತೆಗೆ ನಿಕಟತೆ, ಸಮಸ್ಯೆ ಬಗೆಹರಿದರೆ ಪಕ್ಷದ ಪರ ಸಕಾರಾತ್ಮಕ ವಾತಾವರಣ ಜೊತೆಗೆ ಸರ್ಕಾರದ ಕೈಕಟ್ಟಿ ಹಾಕುವುದು ಪಕ್ಷದ ಕಾರ್ಯತಂತ್ರವಾಗಿದೆ.
ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರು ಹಾಗೂ ನವಜಾತ ಶಿಶುಗಳ ಸಾವಿನ ಹಿನ್ನೆಲೆಯಲ್ಲಿ ಸತ್ಯಶೋಧನೆಗೆ ತಜ್ಞರು ಸೇರಿ 15 ಸದಸ್ಯರ ತಂಡ ಸತ್ಯಶೋಧನೆಗೆ ಇಳಿಯಲಿದೆ. ವಸ್ತುಸ್ಥಿತಿ ಅಧ್ಯಯನ ನಡೆಸಿ ವರದಿ ಸಲ್ಲಿಸುವ ಜವಾಬ್ದಾರಿಯನ್ನು ತಂಡವು ಮಾಡಲಿದೆ. ವಾಸ್ತವಾಂಶಗಳ ಮೇಲೆ ಬೆಳಕು ಚೆಲ್ಲಿ ಸರ್ಕಾರದ ಕಣ್ಣು ತೆರೆಸಲು ಬಿಜೆಪಿ ರಾಜ್ಯಾಧ್ಯಕ್ಷರು ಬಯಸಿದ್ದಾರೆ.