ಬೆಂಗಳೂರು: ಸದನಕ್ಕೆ ಮಾಹಿತಿ ನೀಡದೆ ಕೇಂದ್ರದ ವಿರುದ್ಧ ನಿರ್ಣಯ ಮಂಡಿಸಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ ಇದರ ವಿರುದ್ಧ ನಾಳೆ ರಾಜ್ಯಪಾಲರಿಗೆ ದೂರು ನೀಡಲಿದ್ದೇವೆ. ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ನಡೆಸಲಿದ್ದೇವೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಸದನ ನಡೆಯುತ್ತಿರುವ ಸಂದರ್ಭದಲ್ಲಿ ಇದು ಕರಾಳ ದಿನ ಅನಿಸುತ್ತಿದೆ. ಅಧಿವೇಶನ ಹೇಗೆ ನಡೆಯಬೇಕು ಅಂತ ಬಿಎಸಿ ಸಭೆ ನಡೆಸಿ ಚರ್ಚಿಸಲಾಗುತ್ತದೆ. ಯಾವ ಬಿಲ್ ಮಂಡನೆ, ಎಷ್ಟು ದಿನ ಸದನ ಅಂತ ನಿರ್ಣಯ ಆಗುತ್ತದೆ. ಯಾವೆಲ್ಲಾ ಬಿಲ್ ಮಂಡನೆ ಅಂತ ಮನೆಗೆ ಪೋಸ್ಟ್ ಬರುತ್ತದೆ. ಏಕಾಏಕಿ ಕೇಂದ್ರದ ವಿರುದ್ಧ ಅವಹೇಳನ ಮಾಡುವ ಚಾಳಿ ಮುಂದುವರೆದಿದೆ.
ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗ ಬಜೆಟ್ ಮಂಡಿಸಿದ್ದರು. ಅವರು ಕೇಂದ್ರದ ಸಹಕಾರ ಬೇಕು ಅಂತ ಹೇಳಿದ್ದರು. ಆದರೆ ಸಿದ್ದರಾಮಯ್ಯ ಇವರ ತಲೆಯಲ್ಲಿ ವಿಷ ಬಿತ್ತಿದ್ದಾರೆ. ಅವರು ಕೇಂದ್ರದ ವಿರುದ್ಧ ನಿರ್ಣಯ ಮಂಡನೆ ಮಾಡೋದಾದರೆ ಮೊದಲೇ ಹೇಳಬೇಕಿತ್ತು. ಆದರೆ ಕಳ್ಳರ ರೀತಿ ನಿರ್ಣಯ ಮಂಡಿಸಿದ್ದಾರೆ. ಸ್ಪೀಕರ್ ಕೂಡ ನಮ್ಮ ಗಮನಕ್ಕೆ ತಂದಿಲ್ಲ. ಬಡವರ, ರೈತರ ಪರ ಚರ್ಚೆ ಆಗಬೇಕಿತ್ತು. ಇವರು ಪ್ರಧಾನಿ ಮೋದಿ ಅವರನ್ನು ತೆಗಳುವ ಕೆಲಸ ಮಾಡಿದ್ದಾರೆ. ಇವರು ಲೋಕಸಭೆ ಚುನಾವಣೆ ಸೋತಿರೋ ರೀತಿ ಬಿಲ್ ಮಂಡಿಸಿದ್ದಾರೆ ಎಂದು ಆರೋಪಿಸಿದರು.
ನಂತರ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ವಿಪಕ್ಷ ನಾಯಕರು ಹೇಳಿದಂತೆ ಸದನ ಸುಸೂತ್ರವಾಗಿ ನಡೆಸಲು ಸಹಕಾರ ನೀಡಿದ್ದೇವೆ. ಕಾನೂನು ಸಚಿವರು ಏಕಾಏಕಿ ಅಡಿಷನಲ್ ಸಬ್ಜೆಕ್ಟ್ ಮಂಡನೆ ಮಾಡಿ ಸದನದ ಎಲ್ಲಾ ನೀತಿ, ನಿಯಮ ಗಾಳಿಗೆ ತೂರಿದ್ದಾರೆ. ಅದಕ್ಕೆ ಸ್ಪೀಕರ್ ಕೂಡ ಕೈ ಜೋಡಿಸಿದ್ದಾರೆ ಎಂದು ದೂರಿದರು.
ರಾಜ್ಯದಲ್ಲಿ ನಾಲಾಯಕ್ ಕಾಂಗ್ರೆಸ್ ಸರ್ಕಾರ ಇದೆ ಗ್ಯಾರಂಟಿ ಮೂಲಕ ಲೋಕಸಭಾ ಚುನಾವಣೆ ಗೆಲ್ಲುತ್ತೇವೆ ಅನ್ನೋ ವಿಶ್ವಾಸ ಅವರಿಗಿಲ್ಲ. ಸದನದ ಒಳಗೂ ರಾಜಕೀಯ ಮಾಡ್ತಿದ್ದಾರೆ. ಸದನದ ಗೌರವ ಹಾಳು ಮಾಡುವ ಕೆಲಸ ಮಾಡಿದ್ದಾರೆ. ಇದನ್ನು ಬಿಜೆಪಿ ಗಂಭೀರವಾಗಿ ತೆಗೆದುಕೊಂಡಿದೆ. ಕಾನೂನುಬಾಹಿರ ನಿರ್ಣಯ ಮಂಡಿಸಿದ್ದನ್ನು ಬಿಜೆಪಿ ಬಲವಾಗಿ ಖಂಡಿಸುತ್ತದೆ. ಇದರ ವಿರುದ್ಧ ರಾಜ್ಯಪಾಲರಿಗೆ ದೂರು ಕೊಡುತ್ತೇವೆ.