ಕರ್ನಾಟಕ

karnataka

ETV Bharat / state

ನಾಗಮಂಗಲ ಗಲಭೆ ಬಗ್ಗೆ ಅಮಿತ್ ಶಾಗೆ ಮಾಹಿತಿ- ಪ್ರಲ್ಹಾದ್ ಜೋಶಿ; 'ಕರ್ನಾಟಕ ಬಾಂಗ್ಲಾದೇಶವಾಗದಿರಲಿ'- ಯತ್ನಾಳ್​ - nagamangala clash - NAGAMANGALA CLASH

ನಾಗಮಂಗಲ ಘಟನೆಯಲ್ಲಿ ಪೆಟ್ರೋಲ್ ಬಾಂಬ್ ಬಳಕೆಯಾಗಿದ್ದು, ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಲಾಗುವುದು ಎಂದು ಕೇಂದ್ರ ಸಚಿವ ಪ್ರಲ್ಹಾದ್​ ಜೋಶಿ ತಿಳಿಸಿದರು.

ಪ್ರಲ್ಹಾದ್ ಜೋಶಿ
ಪ್ರಲ್ಹಾದ್ ಜೋಶಿ (ETV Bharat)

By ETV Bharat Karnataka Team

Published : Sep 12, 2024, 5:58 PM IST

ಬೆಂಗಳೂರು:ಕೇಂದ್ರ ಸರ್ಕಾರ ಎಲ್ಲ ವಿಚಾರದಲ್ಲಿಯೂ ಮಧ್ಯಪ್ರವೇಶ ಮಾಡಲ್ಲ. ಆದರೆ, ನಾಗಮಂಗಲ ಘಟನೆಯಲ್ಲಿ ಪೆಟ್ರೋಲ್ ಬಾಂಬ್ ಬಳಕೆಯಾಗಿರುವ ಹಿನ್ನೆಲೆಯಲ್ಲಿ ಸಮಗ್ರ ಮಾಹಿತಿಯೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ಮಾತುಕತೆ ನಡೆಸುತ್ತೇನೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿಳಿಸಿದರು.

ಸದಾಶಿವನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ''ಮತಾಂಧರಿಗೆ ಇದು ನಮ್ಮ ಸರ್ಕಾರ ಎನಿಸಿದೆ. ಇಸ್ಲಾಮಿಕ್ ಸರ್ಕಾರ ಇದೆ ಎನ್ನುವ ಭಾವನೆ ಇದೆ. ಹೀಗಾಗಿ ಗಲಭೆ ಮಾಡಿದ್ದಾರೆ. ಪೊಲೀಸ್ ಅಧಿಕಾರಿಗಳಿಗೆ ಸರ್ಕಾರವೇ ಸೂಚನೆ ನೀಡಿ ಹೇಳಿಕೆ ಕೊಡಿಸುತ್ತಿದೆ. ನಾನು ಪೊಲೀಸ್ ಇಲಾಖೆಯನ್ನು ದೂರಲ್ಲ. ಇದು ಸರ್ಕಾರದ ವೈಫಲ್ಯ. ಓಲೈಕೆ ರಾಜಕಾರಣವಾಗಿದೆ. ಈ ಘಟನೆ ಪೂರ್ವ ನಿಯೋಜಿತ. ಕೇಂದ್ರ ಸರ್ಕಾರ ಎಲ್ಲದಕ್ಕೂ ಮಧ್ಯಪ್ರದೇಶ ಮಾಡುವುದಕ್ಕೆ ಆಗಲ್ಲ. ಆದರೂ, ಪೆಟ್ರೋಲ್ ಬಾಂಬ್ ಬಳಕೆ ಆಗಿರುವ ಕಾರಣ ಸಂಪೂರ್ಣ ಮಾಹಿತಿ ಸಂಗ್ರಹಿಸಿ ಕೇಂದ್ರ ಗೃಹ ಸಚಿವರ ಜೊತೆ ಮಾತನಾಡುತ್ತೇನೆ'' ಎಂದರು.

''ಸಿದ್ದರಾಮಯ್ಯ ಓಲೈಕೆ ಮಾಡಿ ಮತ ಪಡೆದು ಮಜಾವಾದಿಗಳಾಗಿದ್ದಾರೆ. ಸಮಾಜವಾದದ ಹೆಸರಲ್ಲಿ ಮಜಾವಾದ ಮಾಡುತ್ತಿದ್ದಾರೆ. ಬೆಂಕಿ ಹಚ್ಚಿ ಅಂಗಡಿ ಸುಟ್ಟಿದ್ದಾರೆ. ನಾಳೆಯಿಂದ ಅವರ ಬದುಕಿಗೆ ದಿಕ್ಕು ಏನು? ಸರ್ಕಾರದ ಮುಂದಾಳುಗಳು ಮಜಾವಾದಿಗಳಾಗಿದ್ದಾರೆ'' ಎಂದು ಸಿದ್ದರಾಮಯ್ಯ ವಿರುದ್ಧ ಜೋಶಿ ತೀವ್ರ ವಾಗ್ದಾಳಿ ನಡೆಸಿದರು.

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ''ನಾಗಮಂಗಲ ಘಟನೆಯಲ್ಲಿ ಪೊಲೀಸ್ ಇಲಾಖೆ ಸಂಪೂರ್ಣವಾಗಿ ವಿಫಲವಾಗಿದೆ. ಇದು ವ್ಯವಸ್ಥಿತವಾಗಿ ಮಾಡಿರುವ ಕೃತ್ಯ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಮುಸ್ಲಿಂ ಮೂಲಭೂತವಾದಿಗಳು ಬಾಲ ಬಿಚ್ಚಿ ಶಾಂತಿಯುತವಾಗಿ ಹೋಗುವ ಮೆರವಣಿಗೆ ಮೇಲೆ ಪೆಟ್ರೋಲ್ ಬಾಂಬ್ ಹಾಕುವ ಕೃತ್ಯ ಮಾಡಿದ್ದಾರೆ. ಹಿಂದುಗಳ ಬಗ್ಗೆ ಕಳಕಳಿ ಇದ್ದರೆ, ಯಾರು ಈ ಕೃತ್ಯ ಮಾಡಿದ್ದಾರೋ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು'' ಎಂದು ಆಗ್ರಹಿಸಿದರು.

''ಪೊಲೀಸರ ನಡವಳಿಕೆ ಕೂಡ ಮುಸ್ಲಿಂ ರಕ್ಷಣೆ ರೀತಿ ಇದೆ. ತಕ್ಷಣ ಅಲ್ಲಿನ ಎಸ್​​ಪಿಯನ್ನು ಅಮಾನತು ಮಾಡಿ ತನಿಖೆ ಮಾಡಬೇಕು. ಹಿಂದುಗಳಿಗೆ ನ್ಯಾಯ ಕೊಡಬೇಕು. ಇಲ್ಲವಾದಲ್ಲಿ ಕರ್ನಾಟಕ ಮತ್ತೊಂದು ಬಾಂಗ್ಲಾದೇಶ ಆಗುತ್ತದೆ. ರಾಜ್ಯದಲ್ಲಿ ಬೇಜವಾಬ್ದಾರಿಯುತ ಗೃಹ ಸಚಿವರಿದ್ದಾರೆ. ಮುಸ್ಲಿಂ ತುಷ್ಟೀಕರಣಕ್ಕೆ ಈ ಘಟನೆ ಸಾಕ್ಷಿ. ಇದೊಂದು ಆಕಸ್ಮಿಕ ಸಣ್ಣ ಘಟನೆ ಎಂದು ಗೃಹ ಸಚಿವರು ಹೇಳಿದ್ದಾರೆ. ಘಟನೆ ಆಕಸ್ಮಿಕ ಎಂದಿರುವುದು ದುರ್ದೈವ. ಅವರೇ ಆಕಸ್ಮಿಕವಾಗಿ ಗೃಹ ಸಚಿವರಾಗಿದ್ದಾರೆ. ಆಕಸ್ಮಿಕವಾಗಿ ಎನ್ನುವವರು ಆಕಸ್ಮಿಕವಾಗಿಯೇ ರಾಜೀನಾಮೆ ಕೊಡಲಿ. ಮಸೀದಿಗಳ ಮುಂದೆ ಮೆರವಣಿಗೆ ಬೇಡವೆಂದರೆ, ನಾವೇನು ಪಾಕಿಸ್ತಾನದಲ್ಲಿದ್ದೇವೆಯೇ'' ಎಂದು ವಾಗ್ದಾಳಿ ನಡೆಸಿದರು.

ಎನ್‍ಐಎ ತನಿಖೆಗೆ ಶೋಭಾ ಕರಂದ್ಲಾಜೆ ಆಗ್ರಹ:ಗಣೇಶ ನಿಮಜ್ಜನ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದು ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾದ ಘಟನೆ ಖಂಡನೀಯವಾಗಿದೆ. ನಾಗಮಂಗಲದ ಘಟನೆ ಕುರಿತು ನ್ಯಾಷನಲ್ ಇನ್ವೆಸ್ಟಿಗೇಷನ್ ಏಜೆನ್ಸಿ (ಎನ್‍ಐಎ) ಮೂಲಕ ತನಿಖೆ ಮಾಡಿಸಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದರು.

ರಾಜಾಜಿನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಎನ್‍ಐಎ ತನಿಖೆ ಮಾಡಿದರೆ ಮಾತ್ರ ಸತ್ಯಾಂಶ ಹೊರಕ್ಕೆ ಬರಲಿದೆ ಎಂದು ನುಡಿದರು. ನಾಗಮಂಗಲದ ಘಟನೆಯಿಂದ ನಮ್ಮೆಲ್ಲ ಹಿಂದೂಗಳಿಗೆ ಅಪಮಾನ ಆಗಿದೆ. ನಾಗಮಂಗಲದಲ್ಲಿ ಗಣಪತಿ ಮೆರವಣಿಗೆ ಮೇಲೆ ಚಪ್ಪಲಿ ಎಸೆದಿದ್ದಾರೆ. ಜೊತೆಗೆ ಕಲ್ಲೆಸೆದಿದ್ದಾರೆ. ಅಲ್ಲದೆ, ನಮ್ಮ ಅಂಗಡಿಗಳನ್ನು ಸುಟ್ಟಿದ್ದಾರೆ ಎಂದು ಆಕ್ಷೇಪಿಸಿದರು. ಆದರೂ ಅಲ್ಲಿನ ಸಚಿವರು, ಗೃಹ ಸಚಿವರು ಇದೊಂದು ಚಿಕ್ಕ ಘಟನೆ ಎಂದಿದ್ದಾರೆ ಎಂದರಲ್ಲದೆ, ಇನ್ನು ದೊಡ್ಡದು ಏನಾಗಬೇಕಿತ್ತು ನಿಮಗೆ ಎಂದು ಪ್ರಶ್ನಿಸಿದರು. ಹಿಂದೂಗಳ 25 ಅಂಗಡಿ ಸುಟ್ಟದ್ದು ನಿಮಗೆ ಚಿಕ್ಕ ಘಟನೆಯಾಗಿ ಕಂಡರೆ ಇನ್ನು ದೊಡ್ಡ ಘಟನೆ ಏನಾಗಬೇಕಾಗಿತ್ತು ಎಂದು ಕೇಳಿದರು.

ಸಂಸದ ತೇಜಸ್ವಿ ಸೂರ್ಯ ಮಾತನಾಡಿ, ಕಾಂಗ್ರೆಸ್ ಸರ್ಕಾರದಲ್ಲಿ ಹಿಂದೂವಿರೋಧಿ ಶಕ್ತಿಗಳಿಗೆ ಹೊಸ ಶಕ್ತಿ ಬಂದಿದೆ, ಸರ್ಕಾರ ಸಂವಿಧಾನ ಪ್ರಕಾರ ನಡೀತಿದೆಯೋ? ಷರಿಯಾ ಪ್ರಕಾರ ನಡೀತಿದೆಯೋ? ಅಲ್ಪಸಂಖ್ಯಾತರ ತುಷ್ಟೀಕರಣ ನಡೆಯುತ್ತಿದೆ. ನಾಗಮಂಗಲ ಸೂಕ್ಷ್ಮ ಪ್ರದೇಶ, ಆದರೂ ಸರ್ಕಾರ, ಪೊಲೀಸರು ಮುನ್ನೆಚ್ಚರಿಕೆ ಕೈಗೊಂಡಿಲ್ಲ. ಗಣಪತಿ ವಿಸರ್ಜನೆಗೂ ಸಾಧ್ಯ ಇಲ್ಲದ ಸ್ಥಿತಿ ರಾಜ್ಯದಲ್ಲಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.

ಇದನ್ನೂ ಓದಿ:ನಾಗಮಂಗಲ ಗಣೇಶ ಮೆರವಣಿಗೆ ವೇಳೆ ಗಲಾಟೆ: 52 ಜನರ ಬಂಧನ, ಪರಿಸ್ಥಿತಿ ಹತೋಟಿಗೆ- ಸಚಿವ ಪರಮೇಶ್ವರ್ - Nagamangala Clash

ABOUT THE AUTHOR

...view details