ಮೈಸೂರು: ಚುನಾವಣಾ ಚಾಣಕ್ಯ ಅಮಿತ್ ಶಾ ನೇತೃತ್ವದಲ್ಲಿ ಮೈಸೂರಿನ ಖಾಸಗಿ ಹೋಟೆಲ್ನಲ್ಲಿ ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆ ಹಾಗೂ ಮೈಸೂರು ವಿಭಾಗೀಯ ಮಟ್ಟದ ಕ್ಲಸ್ಟರ್ ಸಭೆ ನಡೆಯಿತು.
ಸಭೆಯಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ 28 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಲು ಅನುಸರಿಸಬೇಕಾದ ಚುನಾವಣಾ ಅಂಶಗಳ ಬಗ್ಗೆ ರಾಜ್ಯ ನಾಯಕರಿಗೆ ಅಮಿತ್ ಶಾ ಕೆಲವು ಟಿಪ್ಸ್ಗಳನ್ನು ಹಾಗೂ ಟಾಸ್ಕ್ಗಳನ್ನು ನೀಡಿದ್ದಾರೆ ಎನ್ನಲಾಗಿದೆ.
ಮೊದಲು ರಾಜ್ಯದ ಪ್ರಮುಖ ನಾಯಕರ ಸಭೆ ನಡೆಸಿದ ಶಾ ಲೋಕಸಭಾ ಚುನಾವಣೆ ಅಭ್ಯರ್ಥಿಗಳ ಬಗ್ಗೆ, ಜೆಡಿಎಸ್ಗೆ ಯಾವ್ಯಾವ ಕ್ಷೇತ್ರಗಳನ್ನು ಬಿಟ್ಟುಕೊಡಬೇಕು, ಯಾವ್ಯಾವ ಅಭ್ಯರ್ಥಿಗಳ ಬದಲಾವಣೆ ಆಗಬೇಕು ಸೇರಿದಂತೆ ಕೆಲ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಿದ ಬಳಿಕ ರಾಜ್ಯ ನಾಯಕರಿಗೆ ಕೆಲವು ಚುನಾವಣಾ ಟಾಸ್ಕ್ಗಳನ್ನು ನೀಡಿದ್ದಾರೆ ಎಂದು ಹೇಳಲಾಗುತ್ತದೆ. ಈ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ್.ಅಶೋಕ್, ಮಾಜಿ ಸಿಎಂಗಳಾದ ಬಸವರಾಜ ಬೊಮ್ಮಾಯಿ, ಸದಾನಂದ ಗೌಡ, ಮಾಜಿ ಸಚಿವರಾದ ಸಿ ಟಿ ರವಿ, ಕೆ ಎಸ್ ಈಶ್ವರಪ್ಪ ಸೇರಿದಂತೆ ಪ್ರಮುಖ ಬಿಜೆಪಿ ನಾಯಕರು ಭಾಗಿಯಾಗಿದ್ದರು.
ಚಾಮುಂಡೇಶ್ವರಿ ದರ್ಶನ ಪಡೆದ ಅಮಿತ್ ಶಾ ಕ್ಲಸ್ಟರ್ ಸಭೆ:ರಾಜ್ಯ ಬಿಜೆಪಿ ನಾಯಕರ ಕೋರ್ ಕಮಿಟಿಯ ಸಭೆಯ ನಂತರ ಮೈಸೂರು ವಿಭಾಗೀಯ ಮಟ್ಟದ ಕ್ಲಸ್ಟರ್ ಸಭೆಯನ್ನು ನಡೆಸಲಾಯಿತು. ಇದರಲ್ಲಿ ಮೈಸೂರು-ಕೊಡಗು, ಚಾಮರಾಜನಗರ, ಮಂಡ್ಯ, ಹಾಸನ ಸೇರಿದಂತೆ ಹಳೆಯ ಮೈಸೂರು ಭಾಗದ ಐದಕ್ಕೂ ಹೆಚ್ಚು ಲೋಕಸಭಾ ಕ್ಷೇತ್ರದ ಬಗ್ಗೆ ಮಾಹಿತಿ ಪಡೆದು, ಈ ಕ್ಷೇತ್ರಗಳಲ್ಲಿ ಬಿಜೆಪಿ ಅನುಸರಿಸಬೇಕಾದ ಕಾರ್ಯ ತಂತ್ರಗಳು ಸೇರಿದಂತೆ ಕೆಲ ಸಲಹೆಗಳನ್ನು ನೀಡಿದ್ದಾರೆ ಎಂದು ಹೇಳಲಾಗಿದೆ. ಒಟ್ಟಾರೆ ಸಭೆಯಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿ ಸಹಕಾರದಿಂದ ಅತಿ ಹೆಚ್ಚು ಸ್ಥಾನ ಗೆಲ್ಲುವ ಬಗ್ಗೆ ಚರ್ಚೆಸಲಾಗಿದೆ ಎನ್ನಲಾಗುತ್ತಿದೆ.
ಚಾಮುಂಡೇಶ್ವರಿ ದರ್ಶನ:ಇದಕ್ಕೂ ಮೊದಲು ಮೈಸೂರಿಗೆ ಆಗಮಿಸಿದ ಶಾ ಬೆಳಗ್ಗೆ ಸುತ್ತೂರು ಮಠಕ್ಕೆ ಭೇಟಿ ನೀಡಿ ಜಾತ್ರಾ ಮಹೋತ್ಸವದ ಸಮಾರೋಪ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಬಳಿಕ ಚಾಮುಂಡಿ ನಾಡದೇವತೆ ಶ್ರೀ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದರು.
ಚಾಮುಂಡೇಶ್ವರಿ ದರ್ಶನ ಪಡೆದ ಅಮಿತ್ ಶಾ ಚಾಮುಂಡಿ ಬೆಟ್ಟದಲ್ಲಿ ಅಮಿತ್ ಶಾಗೆ ದೇವಾಲಯದ ವತಿಯಿಂದ ಪೂರ್ಣಕುಂಭ ಸ್ವಾಗತ ಕೋರಲಾಯಿತು. ದರ್ಶನ ಪಡೆದ ಗೃಹ ಸಚಿವರು, ಈ ವೇಳೆ ಪ್ರಧಾನ ಅರ್ಚಕರಾದ ಶಶಿಶೇಖರ್ ದೀಕ್ಷಿತರಿಂದ ದೇವಿಗೆ ವಿಶೇಷ ಪೂಜೆ ನೆರವೇರಿಸಿದರು. ಈ ವೇಳೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಸಂಸದ ಪ್ರತಾಪ್ ಸಿಂಹ, ಮಾಜಿ ಶಾಸಕರಾದ ಎಲ್.ನಾಗೇಂದ್ರ ಹಾಗೂ ಹಲವು ಮುಖಂಡರು ಗೃಹ ಸಚಿವರನ್ನು ಬರಮಾಡಿಕೊಂಡರು.
ಇದನ್ನೂ ಓದಿ:ಅಮಿತ್ ಶಾ ಕರ್ನಾಟಕಕ್ಕೆ ಬರಿಗೈಲಿ ಬಂದಿದ್ದಾರೆ: ಸಿಎಂ ಸಿದ್ದರಾಮಯ್ಯ ಕಿಡಿ