ನಾ ಮಾಡಿದ ಅಭಿವೃದ್ಧಿಯೊಂದಿಗೆ ಮೋದಿ ಹೆಸರಲ್ಲಿ ಮತಯಾಚಿಸುತ್ತೇವೆ: ಬಸವರಾಜ ಬೊಮ್ಮಾಯಿ ಹಾವೇರಿ: ಬಿಜೆಪಿ ಪ್ರಣಾಳಿಕೆ ಸುಳ್ಳುಗಳ ವಾರಂಟಿ ಎಂದು ಆರೋಪಿಸಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಕ್ಕೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದರು.
ಹಾವೇರಿಯಲ್ಲಿ ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನವರ ಹೇಳಿಕೆಗಳೆಲ್ಲ ಹಾಸ್ಯಾಸ್ಪದ ಎಂದರು. ಲೋಕಸಭೆಯಲ್ಲಿ ಬಹುಮತಕ್ಕೆ 272 ಸ್ಥಾನಗಳನ್ನು ಗೆಲ್ಲಬೇಕು. ಅಷ್ಟು ಸ್ಥಾನಗಳಿಗೆ ನಿಲ್ಲುವ ಶಕ್ತಿ ಇಲ್ಲದವರು ಊರೆಲ್ಲ ಮಾತನಾಡುತ್ತಿದ್ದಾರೆ ಎಂದು ಬೊಮ್ಮಾಯಿ ವ್ಯಂಗ್ಯವಾಡಿದರು.
ಪ್ರಧಾನಿ ನರೇಂದ್ರ ಮೋದಿ ಬಲಶಾಲಿತನ ಬಲಹೀನವಾಗುತ್ತಿದೆ ಎಂಬ ನಟ ಪ್ರಕಾಶ್ ರಾಜ್ ಟೀಕೆಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ನಟ ಪ್ರಕಾಶ್ ರಾಜ್ ಯಾವಾಗ ಫೇಸ್ ರೀಡರ್ ಆಗಿದ್ದಾರೆ ಎಂದು ಆಕ್ಷೇಪಿಸಿದರು. ವಿಶ್ವದ ನಾಯಕ ಮೋದಿಯವರನ್ನು ಪ್ರಕಾಶ್ ರಾಜ್ ನೋಡುವ ದೃಷ್ಟಿಕೋನ ಆ ರೀತಿ ಇದೆ ಎಂದು ಬೊಮ್ಮಾಯಿ ಟಾಂಗ್ ಕೊಟ್ಟರು.
ಇದು ಲೋಕಸಭಾ ಚುನಾವಣೆ, ರಾಷ್ಟ್ರದ ಚುನಾವಣೆ. ಮೋದಿ ಹೆಸರು ಹೇಳಬೇಕು ಹೇಳುತ್ತೇವೆ. ಅದರ ಜೊತೆಗೆ ನಾವು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಸೇರಿಸಿ ಮತ ಕೇಳುತ್ತೇವೆ. ಏಪ್ರಿಲ್ 25 ಅಥವಾ 26ರ ನಂತರ ಉತ್ತರ ಕರ್ನಾಟಕ ಭಾಗದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಎರಡು ಅಥವಾ ಮೂರು ಲೋಕಸಭೆ ಕ್ಷೇತ್ರಗಳಿಗೆ ಒಂದು ಕ್ಲಸ್ಟರ್ ಮಾಡಿದ್ದಾರೆ. ಇವತ್ತು ಒಳ್ಳೆಯ ಮುಹೂರ್ತ ಇದ್ದು, ಎರಡು ಸೆಟ್ ನಾಮಪತ್ರ ಸಲ್ಲಿಸಿದ್ದೇನೆ. ಏಪ್ರಿಲ್ 19ರಂದು ಮತ್ತೊಮ್ಮೆ ನಾಮಪತ್ರ ಸಲ್ಲಿಸುವೆ. ಅವತ್ತು ನಮ್ಮ ನಾಯಕ ಯಡಿಯೂರಪ್ಪ, ಮಾಜಿ ಸಚಿವ ಬೈರತಿ ಬಸವರಾಜ ಸೇರಿದಂತೆ ಹಲವು ನಾಯಕರು ಬರುತ್ತಾರೆ. ಇವತ್ತು ಶುಭ ಗಳಿಗೆಯಲ್ಲಿ ನಾಮಪತ್ರ ಸಲ್ಲಿಸಿರುವೆ. ಅತಿ ಹೆಚ್ಚು ಮತಗಳ ಅಂತರದಲ್ಲಿ ಗೆಲ್ಲುವ ಆತ್ಮವಿಶ್ವಾಸ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಬೊಮ್ಮಾಯಿ ಪುತ್ರ ಭರತ ಬೊಮ್ಮಾಯಿ, ಮಾಜಿ ಸಚಿವ ಬಿ ಸಿ ಪಾಟೀಲ್, ಮಾಜಿ ಶಾಸಕ ವಿರುಪಾಕ್ಷಪ್ಪ ಬಳ್ಳಾರಿ, ಶಿವರಾಜ್ ಸಜ್ಜನರ್, ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ್ ಪೂಜಾರ್ ಸೇರಿದಂತೆ ವಿವಿಧ ಮುಖಂಡರು ಉಪಸ್ಥಿತರಿದ್ದರು.
ಇದನ್ನೂ ಓದಿ:ಬೆಳಗಾವಿ: ಡಿಕೆಶಿ ಸಮ್ಮುಖದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ನಾಮಪತ್ರ ಸಲ್ಲಿಕೆ - Mrinal Hebbalkar Nomination