ಶಿವಮೊಗ್ಗ:ಬಿ.ಎಸ್.ಯಡಿಯೂರಪ್ಪನವರ ಹಿರಿಯ ಪುತ್ರ,ಶಿವಮೊಗ್ಗಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಇಂದು ತಮ್ಮ ನಾಮಪತ್ರ ಸಲ್ಲಿಸಿದರು. ಇದೇ ವೇಳೆ ತಮ್ಮ ಹಾಗೂ ಪತ್ನಿಯ ಆಸ್ತಿ ವಿವರ ನೀಡಿದ್ದಾರೆ. ರಾಘವೇಂದ್ರ ಒಟ್ಟು 55.85 ಕೋಟಿ ರೂ. ಮೌಲ್ಯದ ಸ್ಥಿರ ಹಾಗೂ ಚರಾಸ್ತಿ ಹೊಂದಿದ್ದಾರೆ. ಪತ್ನಿ ತೇಜಸ್ವಿನಿ 17.86 ಕೋಟಿ ರೂ. ಮೌಲ್ಯದ ಸ್ಥಿರ ಹಾಗೂ ಚರಾಸ್ತಿ ಹೊಂದಿರುವ ಮಾಹಿತಿ ಒದಗಿಸಿದ್ದಾರೆ.
ರಾಘವೇಂದ್ರ ಅವರು ಒಟ್ಟು 73.71 ಕೋಟಿ ರೂ ಮೌಲ್ಯದ ಆಸ್ತಿ ವಿವರವನ್ನು ತಮ್ಮ ಅಫಿಡವಿಟ್‌ನಲ್ಲಿ ನೀಡಿದ್ದಾರೆ. ತಮ್ಮ ಬಳಿ 33,291 ರೂ. ನಗದು ಹಾಗು ಪತ್ನಿ ಬಳಿ 9.39 ಲಕ್ಷ ರೂ ನಗದು ಇರುವುದಾಗಿ ವಿವರ ನೀಡಿದ್ದಾರೆ. ರಾಘವೇಂದ್ರ ವಿವಿಧ ಬ್ಯಾಂಕ್‌ಗಳಲ್ಲಿ 13 ಖಾತೆ ಹೊಂದಿದ್ದಾರೆ. 13 ಅಕೌಂಟ್‌ಗಳಲ್ಲಿ 98.01 ಲಕ್ಷ ರೂ. ಹೊಂದಿದ್ದಾರೆ. ತೇಜಸ್ವಿನಿ ವಿವಿಧ ಬ್ಯಾಂಕ್‌ಗಳಲ್ಲಿ 08 ಖಾತೆ ಹೊಂದಿದ್ದಾರೆ. ಇವರು ತಮ್ಮ ಖಾತೆಗಳಲ್ಲಿ 25.65 ಲಕ್ಷ ರೂ. ಹೊಂದಿದ್ದಾರೆ. ರಾಘವೇಂದ್ರ ಸುಮಾರು 15 ಕಂಪನಿಗಳಲ್ಲಿ 7.68 ಕೋಟಿ ಹೂಡಿಕೆ ಮಾಡಿದ್ದಾರೆ. ತೇಜಸ್ವಿನಿ 6 ಕಂಪನಿಗಳಲ್ಲಿ 1.22 ಕೋಟಿ ಹೂಡಿಕೆ ಮಾಡಿದ್ದಾರೆ.
ಪತ್ನಿ, ತಮ್ಮ, ಮಕ್ಕಳಿಗೆ ಕೋಟಿ ಕೋಟಿ ಸಾಲ: ರಾಘವೇಂದ್ರ ಪತ್ನಿ ತೇಜಸ್ವಿನಿಗೆ 5.4 ಕೋಟಿ ರೂ, ಸಹೋದರ ವಿಜಯೇಂದ್ರಗೆ 85 ಲಕ್ಷ ರೂ, ಪುತ್ರ ಭಗತ್‌ಗೆ 65 ಲಕ್ಷ ರೂ ಹಾಗೂ ಸುಭಾಷ್‌ಗೆ 85 ಲಕ್ಷ ರೂ ಸಾಲ ನೀಡಿದ್ದಾರೆ. ಅಲ್ಲದೆ ಸಂಬಂಧಿಗಳು ಹಾಗೂ ವಿವಿಧ ಕಂಪನಿಗಳಿಗೆ ಒಟ್ಟು 20.39 ಕೋಟಿ ಸಾಲ ನೀಡಿದ್ದಾರೆ.
ವಾಹನಗಳ ವಿವರ:ರಾಘವೇಂದ್ರ ಅವರು ಅಂಬಾಸಿಡರ್ ಕಾರು, ಟ್ರ್ಯಾಕ್ಟರ್ ಹಾಗೂ ಟಯೋಟಾ ಫಾರ್ಚೂನರ್ ಕಾರು ಹೊಂದಿದ್ದಾರೆ.
ಚಿನ್ನಾಭರಣ:ರಾಘವೇಂದ್ರ 1021.50 ಗ್ರಾಂ ಚಿನ್ನ ಹಾಗೂ 8.6 ಕೆ.ಜಿ ಬೆಳ್ಳಿ ಹೊಂದಿದ್ದಾರೆ. ಇವರ ಬಳಿ 116.26 ಕ್ಯಾರೆಟ್ ವಜ್ರ ಮತ್ತು 42 ಕ್ಯಾರೆಟ್ ಬೆಲೆಬಾಳುವ ಹರಳುಗಳಿವೆ. ತೇಜಸ್ವಿನಿ 1395.92 ಗ್ರಾಂ ಚಿನ್ನ ಹಾಗೂ 5.1 ಕೆ.ಜಿ ಬೆಳ್ಳಿ ಹೊಂದಿದ್ದಾರೆ. 96.022 ಕ್ಯಾರೆಟ್ ವಜ್ರ ಹೊಂದಿದ್ದಾರೆ.