ಬೆಂಗಳೂರು: ಪ್ರತಿಪಕ್ಷಗಳು ಧರಣಿ ನಡೆಸುತ್ತಿರುವ ಸಂದರ್ಭದಲ್ಲಿ ನಿಯಮ 69ರ ಅನ್ವಯ ಸಾರ್ವಜನಿಕ ಮಹತ್ವದ ವಿಚಾರ ಚರ್ಚೆಗೆ ಅವಕಾಶ ನೀಡಿದ್ದು ಸರಿಯಲ್ಲ ಎಂದು ಪ್ರತಿಪಕ್ಷಗಳಾದ ಜೆಡಿಎಸ್ ಮತ್ತು ಬಿಜೆಪಿ, ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಅವರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿವೆ.
ಸ್ಪೀಕರ್ ಅವರಿಗೆ ದೂರಿನ ಪತ್ರವನ್ನು ನೀಡಲಾಗಿದ್ದು, ಅದರಲ್ಲಿ ಪ್ರತಿಪಕ್ಷದ ನಾಯಕ ಆರ್.ಅಶೋಕ್, ಜೆಡಿಎಸ್‍ನ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು, ಶಾಸಕರಾದ ವಿ.ಸುನಿಲ್ ಕುಮಾರ್, ಎಸ್.ಸುರೇಶ್ ಕುಮಾರ್, ಸಿ.ಸಿ.ಪಾಟೀಲ್ ಮತ್ತಿತರರು ಸಹಿ ಹಾಕಿದ್ದಾರೆ.
ಪತ್ರದಲ್ಲೇನಿದೆ?: ಪ್ರತಿಪಕ್ಷಗಳ ಧ್ವನಿಯನ್ನು ಹತ್ತಿಕ್ಕುವುದು ನಿಮ್ಮ ಕಾರ್ಯಶೈಲಿಯ ಭಾಗವೇನೋ? ಎಂಬ ಅನುಮಾನ ನಮ್ಮೆಲ್ಲರನ್ನೂ ಬಲವಾಗಿ ಕಾಡಲಾರಂಭಿಸಿದೆ. ಮೊದಲ ಕಲಾಪದಲ್ಲಿಯೇ ಪ್ರತಿಪಕ್ಷದ ಶಾಸಕರನ್ನು ಅಮಾನತು ಮಾಡಿದ ಕೀರ್ತಿ ನಿಮ್ಮದು. ಈ ಸರ್ಕಾರದ ಹಲವು ಸ್ವತ್ತುಗಳನ್ನು ಸದನದಲ್ಲಿ ಅನಾವರಣಗೊಳಿಸಬೇಕು ಎಂಬ ವಿಪಕ್ಷದ ಪ್ರಯತ್ನ ಜನರ ಬೇಡಿಕೆಯಾಗಿತ್ತು. ಆದರೆ ಅದಕ್ಕೆ ಅವಕಾಶವನ್ನೇ ನೀಡದೇ ಪ್ರಜಾತಂತ್ರ ವ್ಯವಸ್ಥೆಯನ್ನು ಅಪಾಯಕ್ಕೆ ಸಿಲುಕಿಸಲಾಗುತ್ತಿದೆ ಎಂಬ ಆತಂಕ ಶುರುವಾಗಿದೆ. ಮುಂದಿನ ಅವಧಿಯಲ್ಲಿ ತ್ರಿಕರಣ ಪೂರಕವಾಗಿ ಪ್ರತಿಪಕ್ಷಗಳ ಪರ ನಿಲುವು ತಾಳಬೇಕು ಎಂದು ಒತ್ತಾಯಿಸಲಾಗಿದೆ.