ಬೆಂಗಳೂರು: ಬಿಟ್‌ಕಾಯಿನ್ ಅಕ್ರಮ ಹಗರಣದಲ್ಲಿ ಸಿಐಡಿಯ ವಿಶೇಷ ತನಿಖಾ ತಂಡ (ಎಸ್ಐಟಿ)ದಿಂದ ಬಂಧನಕ್ಕೊಳಾಗಿದ್ದ ಪೊಲೀಸ್ ಇನ್‌ಸ್ಪೆಕ್ಟರ್ ಡಿ.ಎಂ.ಪ್ರಶಾಂತ್ ಬಾಬು ಹಾಗೂ ಖಾಸಗಿ ಕಂಪನಿಯ ಸೈಬರ್ ಪರಿಣಿತ ಕೆ.ಎಸ್.ಸಂತೋಷ್ ಕುಮಾರ್‌ಗೆ ನಗರ ಸಿವಿಲ್ ಸೆಷನ್ಸ್ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಪ್ರಕರಣ ಸಂಬಂಧ ಸೈಬರ್ ಪರಿಣಿತ ಸಂತೋಷ್ ಕುಮಾರ್ ಮತ್ತು ಇನ್ಸ್‌ಪೆಕ್ಟರ್ ಪ್ರಶಾಂತ್ ಬಾಬು ಹಾಗೂ ಈ ಹಿಂದಿನ ಇತರೆ ಮೂವರು ತನಿಖಾಧಿಕಾರಿಗಳ ವಿರುದ್ಧ ಸಿಐಡಿ ಸೈಬರ್ ಅಪರಾಧ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಜನವರಿ 25ರಂದು ಇಬ್ಬರನ್ನು ಎಸ್ಐಟಿ ತಂಡ ಬಂಧಿಸಿತ್ತು.
ಆರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪಡೆದು ವಿಚಾರಣೆ ನಡೆಸಿ ಇಬ್ಬರೂ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ನಂತರ ಇಬ್ಬರೂ ಸಹ ಜಾಮೀನು ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಸಿಟಿ ಸಿವಿಲ್ ಹಾಗೂ ಸೆಷನ್ಸ್ ನ್ಯಾಯಾಲಯ ಆರೋಪಿಗಳಿಗೆ ಸಾಕ್ಷ್ಯ ನಾಶಪಡಿಸಬಾರದು ಎಂಬುದು ಸೇರಿದಂತೆ ಕೆಲ ಷರತ್ತುಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿ ಆದೇಶಿಸಿದೆ.
ಬಿಟ್‌ಕಾಯಿನ್ ಹಗರಣದ ಹಿನ್ನೆಲೆ: ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಬಿಟ್‌ಕಾಯಿನ್ ಹಗರಣದ ತನಿಖೆಯನ್ನು ಸಿಐಡಿ ಎಸ್ಐಟಿ ನಡೆಸುತ್ತಿದೆ. 2020ರಲ್ಲಿ ಕೆಂಪೇಗೌಡ ನಗರ ಪೊಲೀಸರು ಡ್ರಗ್ಸ್ ಪ್ರಕರಣದಲ್ಲಿ ಆರೋಪಿ ಸುಜಯ್ ಎಂಬಾತನನ್ನು ಬಂಧಿಸಿದ್ದರು. ಈ ವೇಳೆ ಡಾರ್ಕ್ ನೆಟ್‌ನಲ್ಲಿ ಬಿಟ್‌ಕಾಯಿನ್ ಮೂಲಕ ಡ್ರಗ್ಸ್ ಖರೀದಿ ಪ್ರಕರಣ ಬೆಳಕಿಗೆ ಬಂದಿತ್ತು.
ಈ ಪ್ರಕರಣದ ಜಾಡು ಹಿಡಿದು ಸಾಗಿದ ಪೊಲೀಸರು ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಎಂಬಾತನನ್ನು ಬಂಧಿಸಿದ್ದರು. ಆಗ ಸರ್ಕಾರಿ ವೆಬ್‌ಸೈಟ್ ಹಾಗೂ ಆನ್‌ಲೈನ್ ಗೇಮಿಂಗ್ ಆ್ಯಪ್‌ಗಳನ್ನು ಹ್ಯಾಕ್ ಮಾಡಿ ಕೋಟ್ಯಂತರ ರೂಪಾಯಿ ಹಣವನ್ನು ಅಕ್ರಮವಾಗಿ ಸಂಪಾದಿಸಿರುವ ಕುರಿತ ಮಾಹಿತಿ ಬಯಲಾಗಿತ್ತು. ಇದರ ನಂತರ ಪ್ರಕರಣವನ್ನು ಆಗಿನ ಸರ್ಕಾರ ಸಿಸಿಬಿಗೆ ಹಸ್ತಾಂತರಿಸಿತ್ತು. ಸಿಸಿಬಿ ತನಿಖೆಯಲ್ಲಿ ದೊಡ್ಡ ಪ್ರಮಾಣದಲ್ಲಿ ವಂಚನೆ ನಡೆದಿರುವುದು ಬೆಳಕಿಗೆ ಬಂದಿತ್ತು.
ಇದರ ಬಳಿಕ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಪ್ರಕರಣವನ್ನು ಮರು ತನಿಖೆಗಾಗಿ ಎಸ್ಐಟಿ ರಚಿಸಿದೆ. ಜನವರಿಯಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಸೇರಿ ಐವರನ್ನು ಎಸ್ಐಟಿ ವಶಕ್ಕೆ ಪಡೆದಿತ್ತು. ಈ ಐವರು ಪ್ರಕರಣದಲ್ಲಿ ಉದ್ದೇಶಪೂರ್ವಕವಾಗಿ ಸಾಕ್ಷ್ಯ ನಾಶಪಡಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು.
ಇದನ್ನೂ ಓದಿ:ಬಿಟ್‌ಕಾಯಿನ್ ಹಗರಣ: ಪೊಲೀಸ್ ಇನ್‌ಸ್ಪೆಕ್ಟರ್ ಸೇರಿ ಐವರನ್ನು ವಶಕ್ಕೆ ಪಡೆದ ಎಸ್ಐಟಿ