ಕರ್ನಾಟಕ

karnataka

ಜೈವಿಕ ತಂತ್ರಜ್ಞಾನ ನೀತಿ 2024 - 2029 ಅನಾವರಣ: ಹೊಸ ಜೈವಿಕ ನೀತಿಯಲ್ಲಿನ ಅಂಶಗಳೇನು? - Biotechnology Policy

By ETV Bharat Karnataka Team

Published : Sep 6, 2024, 10:54 PM IST

ಕರ್ನಾಟಕ ಸರ್ಕಾರದ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಅಡಿ ಬರುವ ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ (ಕಿಟ್ಸ್) ಕರ್ನಾಟಕ ಜೈವಿಕ ತಂತ್ರಜ್ಞಾನ ನೀತಿ 2024-2029 ಅನಾವರಣಗೊಳಿಸಿದೆ.

ವಿಧಾನಸೌಧ
ವಿಧಾನಸೌಧ (ETV Bharat)

ಬೆಂಗಳೂರು: ರಾಜ್ಯ ಸರ್ಕಾರ ಜೈವಿಕ ತಂತ್ರಜ್ಞಾನ ನೀತಿ 2024-29 ಅನಾವರಣ ಗೊಳಿಸಿದೆ. ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆಗೊಂಡಿರುವ ಜೈವಿಕ ತಂತ್ರಜ್ಞಾನ ನೀತಿ ಮೂಲಕ ರಾಜ್ಯ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಗನಾಗಿರುವ ಉದ್ದೇಶ ಹೊಂದಿದೆ.

ಕರ್ನಾಟಕ ಸರ್ಕಾರದ ವಿದ್ಯುನ್ಮಾನ, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಡಿ ಬರುವ ಕರ್ನಾಟಕ ನಾವೀನ್ಯತೆ ಮತ್ತು ತಂತ್ರಜ್ಞಾನ ಸೊಸೈಟಿ (ಕಿಟ್ಸ್) ಕರ್ನಾಟಕ ಜೈವಿಕ ತಂತ್ರಜ್ಞಾನ ನೀತಿ 2024-2029 ಅನಾವರಣಗೊಳಿಸಿದೆ. ಈ ನೀತಿ ರಾಜ್ಯಕ್ಕೆ ಹೊಸ ಮಾನದಂಡವನ್ನು ನಿಗದಿಪಡಿಸಿದೆ. ಕರ್ನಾಟಕ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಬೆಳವಣಿಗೆಯ ವೇಗ ಹೆಚ್ಚಿಸಲು ಹೊಸ ನೀತಿಗಳನ್ನು ಕಾರ್ಯತಂತ್ರಾತ್ಮಕವಾಗಿ ಜಾರಿಗೊಳಿಸುವ ಉದ್ದೇಶ ಹೊಂದಿದೆ ಎಂದು ಸಚಿವ ಪ್ರಿಯಾಂಕ ಖರ್ಗೆ ತಿಳಿಸಿದ್ದಾರೆ.

ಜೈವಿಕ ತಂತ್ರಜ್ಞಾನ ನೀತಿಯ ಉದ್ದೇಶ:ಉದ್ಯೋಗ ಮತ್ತು ಉದ್ಯಮಶೀಲತೆ ಎರಡನ್ನೂ ಬೆಂಬಲಿಸಲು, ಕೌಶಲ್ಯದ ಮೂಲಕ ಜೈವಿಕ ತಂತ್ರಜ್ಞಾನ ಶಿಕ್ಷಣವನ್ನು ಬಲಪಡಿಸುವುದು. ವ್ಯವಹಾರ ಸ್ಥಾಪನೆಗೆ ಅನುಕೂಲವಾಗುವಂತೆ ಮತ್ತು ಹೂಡಿಕೆ ಆಕರ್ಷಿಸಲು ಜೈವಿಕ ತಂತ್ರಜ್ಞಾನ ನಿಯಮಗಳನ್ನು ಸುಗಮಗೊಳಿಸುವ ಉದ್ದೇಶ ಹೊಂದಿದೆ.

ಆರೋಗ್ಯ, ಹವಾಮಾನ ಮತ್ತು ಇಂಧನ ಗುರಿಗಳಿಗೆ ಅನುಗುಣವಾಗಿ ಜೈವಿಕ ಉತ್ಪಾದನೆ ಬೆಂಬಲಿಸುವುದು, ಆಹಾರ ಭದ್ರತೆಯನ್ನು ಹೆಚ್ಚಿಸುವುದು, ಕರ್ನಾಟಕವನ್ನು ಜಾಗತಿಕ ಜೈವಿಕ ಉತ್ಪಾದನಾ ಕೇಂದ್ರವಾಗಿ ಉತ್ತೇಜಿಸಲಿದೆ. ಆರಂಭಿಕ ಹಂತದ ಜೈವಿಕ ತಂತ್ರಜ್ಞಾನ ನವೋದ್ಯಮಗಳಿಗೆ ಧನಸಹಾಯ ಮತ್ತು ಮಾರ್ಗದರ್ಶನದೊಂದಿಗೆ ಮತ್ತು ಸ್ಥಳೀಯ ಉತ್ಪನ್ನಗಳನ್ನು ಆದ್ಯತೆಯೊಂದಿಗೆ ಸಂಗ್ರಹಿಸುವ ಮೂಲಕ ಮಾರುಕಟ್ಟೆ ಪ್ರವೇಶದೊಂದಿಗೆ ಮಧ್ಯಮ ಹಂತದ ಉದ್ಯಮಗಳನ್ನು ಬೆಂಬಲಿಸುವ ಗುರಿ ಹೊಂದಿದೆ.

30,000 ಗುಣಮಟ್ಟದ ಉದ್ಯೋಗ ಸೃಷ್ಟಿ ಗುರಿ:ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಕರ್ನಾಟಕವನ್ನು ಜಾಗತಿಕ ಮಟ್ಟದಲ್ಲಿ ಪ್ರಮುಖ ಸ್ಥಾನವನ್ನಾಗಿ ಹೊರಹೊಮ್ಮಿಸಲು ಜೀನೋಮಿಕ್ಸ್, ಆಣ್ವಿಕ ಜೀವಶಾಸ್ತ್ರ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಹಾಗೂ ವಾಣಿಜ್ಯೀಕರಣಕ್ಕಾಗಿ ಬೆಂಬಲವನ್ನು ಮುಂದುವರಿಸುವ ಉದ್ದೇಶ ಹೊಂದಲಾಗಿದೆ. ಹಣಕಾಸು ಪ್ರೋತ್ಸಾಹಕಗಳೊಂದಿಗೆ 50 ನವೀನ ಸಂಸ್ಥೆಗಳು ಸೇರಿದಂತೆ 300 ಜೈವಿಕ ತಂತ್ರಜ್ಞಾನ ಕಂಪನಿಗಳ ರಚನೆಗೆ ಅನುಕೂಲ ಮಾಡಿಕೊಡುವ ಉದ್ದೇಶ ಇದೆ.

2029ರ ವೇಳೆಗೆ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ 30,000 ಗುಣಮಟ್ಟದ ಉದ್ಯೋಗಗಳನ್ನು ಸೃಷ್ಟಿಸುವುದು ಮತ್ತು 20,000 ವ್ಯಕ್ತಿಗಳಿಗೆ ವಿಶೇಷ ಕೌಶಲ್ಯಗಳಲ್ಲಿ ತರಬೇತಿ ನೀಡಲು 200 ಕ್ಕೂ ಹೆಚ್ಚು ಸಂಸ್ಥೆಗಳೊಂದಿಗೆ ಪಾಲುದಾರಿಕೆಯನ್ನು ಹೊಂದುವ ಅಂಶಗಳನ್ನು ನೀತಿಯಲ್ಲಿ ಸೇರಿಸಲಾಗಿದೆ.

ಕ್ಷೇತ್ರವಾರು ಆದ್ಯತೆ ಏನಿರಲಿದೆ?:ಹೊಸ ನೀತಿ ಜೈವಿಕ ಕೃಷಿ, ಜೈವಿಕ-ಕೈಗಾರಿಕಾ ಅನ್ವಯಗಳು (ಜೈವಿಕ ಶಕ್ತಿ, ಸ್ಮಾರ್ಟ್ ಪ್ರೋಟೀನ್ ಗಳು ಮತ್ತು ನ್ಯೂಟ್ರಾಸ್ಯುಟಿಕಲ್ಸ್), ಸಾಗರ ಜೈವಿಕ ತಂತ್ರಜ್ಞಾನ, ಸಿಂಥೆಟಿಕ್ ಜೈವಿಕ ತಂತ್ರಜ್ಞಾನ, ವೈದ್ಯಕೀಯ ಉಪಕರಣಗಳು ಮತ್ತು ರೋಗ ನಿರ್ಣಯ, ಜೈವಿಕ ತಂತ್ರಜ್ಞಾನದಲ್ಲಿ ಕೃತಕ ಬುದ್ಧಿಮತ್ತೆ (AI)/ಯಂತ್ರ ಕಲಿಕೆ (ML), ಸೂಕ್ಷ್ಮ ಜೀವಾಣರೋಧಕ ಪ್ರತಿರೋಧ, ಆರೋಗ್ಯಕ್ಕಾಗಿ ಮಲ್ಟಿ-ಓಮಿಕ್ಸ್, ಕೋಶ ಮತ್ತು ಜೀನ್ ಚಿಕಿತ್ಸೆಗಳು, ಅಪರೂಪದ ರೋಗಗಳಿಗೆ, ಮತ್ತು ಬಾಹ್ಯಾಕಾಶ ಜೈವಿಕ ತಂತ್ರಜ್ಞಾನ ಮುಂತಾದ ಉದಯೋನ್ಮುಖ ಕ್ಷೇತ್ರಗಳಿಗೆ ಹೆಚ್ಚಿನ ಒತ್ತು ನೀಡಲಾಗುವುದು.

ಹೆಚ್ಚಿನ ರಿಯಾಯಿತಿ, ಹಣಕಾಸು ಪ್ರೋತ್ಸಾಹಕಗಳು:ಹೊಸ ನೀತಿಯಲ್ಲಿ ನವೋದ್ಯಮಗಳಿಗೆ ಹಲವು ಹಣಕಾಸು ಪ್ರೋತ್ಸಾಹಕಗಳು, ರಿಯಾಯಿತಿಗಳನ್ನು ಕಲ್ಪಿಸಲಾಗಿದೆ. ರಾಜ್ಯ ಜಿಎಸ್​ಟಿ ಮರುಪಾವತಿ, ಮಾರುಕಟ್ಟೆ ವೆಚ್ಚ ಮರುಪಾವತಿ, ಪೇಟೆಂಟ್ ವೆಚ್ಚ ಮರುಪಾವತಿ, ಗುಣಮಟ್ಟ ಪ್ರಮಾಣೀಕರಣ ವೆಚ್ಚ ಮರುಪಾವತಿ, ಪರಿಪೋಷಣೆ / ವೇಗವರ್ಧನೆ ಕೇಂದ್ರಗಳ ಸ್ಥಾಪನೆ ಮತ್ತು ಉನ್ನತೀಕರಣ / ವಿಸ್ತರಣೆ ಬೆಂಬಲಕ್ಕಾಗಿ ಒಂದು ಬಾರಿಯ ಬಂಡವಾಳ ಅನುದಾನ ನೀಡಲಾಗುವುದು.

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ (MSME)ಗಳಿಗೂ ಹೊಸ ನೀತಿಯಲ್ಲಿ ಪೇಟೆಂಟ್ ವೆಚ್ಚ ಮರುಪಾವತಿ, ಮಾರುಕಟ್ಟೆ ವೆಚ್ಚ ಮರುಪಾವತಿ, ಗುಣಮಟ್ಟ ಪ್ರಮಾಣೀಕರಣ ವೆಚ್ಚ ಮರುಪಾವತಿ, ಪ್ರೊಟೊಟೈಪಿಂಗ್ ವೆಚ್ಚ ಮರುಪಾವತಿ, ಬಡ್ಡಿ ಸಬ್ಸಿಡಿ, ಸ್ಟ್ಯಾಂಪ್ ಡ್ಯೂಟಿ ವಿನಾಯಿತಿ, ಭೂ ಪರಿವರ್ತನೆ ಶುಲ್ಕ ಪ್ರೋತ್ಸಾಹ, ವಿದ್ಯುತ್ ದರ ರಿಯಾಯಿತಿ ನೀಡಲಾಗುವುದು.

ದೊಡ್ಡ ಕೈಗಾರಿಕೆಗಳಿಗೆ ಎಸ್.ಟಿ.ಪಿ ವೆಚ್ಚ ಮರುಪಾವತಿ, ಮಳೆನೀರು ಕೊಯ್ಲು ವೆಚ್ಚ ಮರುಪಾವತಿ, ಬಡ್ಡಿ ಸಬ್ಸಿಡಿ, ಭೂ ವೆಚ್ಚ ಮರುಪಾವತಿ, ಉತ್ಪಾದನಾ ಸಂಬಂಧಿತ ಪ್ರೋತ್ಸಾಹಕಗಳು, ಪೇಟೆಂಟ್ ವೆಚ್ಚ ಮರುಪಾವತಿ, ಮಾರುಕಟ್ಟೆ ವೆಚ್ಚ ಮರುಪಾವತಿ, ವಿದ್ಯುತ್ ದರ ರಿಯಾಯಿತಿ ನೀಡಲಾಗುವುದು.

ಇದನ್ನೂ ಓದಿ:ಎತ್ತಿನಹೊಳೆ ಯೋಜನೆಯಿಂದ 7 ಜಿಲ್ಲೆಗಳಿಗೆ ನೀರು ಗ್ಯಾರಂಟಿ : ಸಿಎಂ ಸಿದ್ದರಾಮಯ್ಯ - CM Siddaramaiah

For All Latest Updates

ABOUT THE AUTHOR

...view details