ಬೆಂಗಳೂರು: ಬ್ರೈನ್ ಟ್ಯೂಮರ್, ಕ್ಯಾನ್ಸರ್ ಸೇರಿದಂತೆ ನರಕ್ಕೆ ಸಂಬಂಧಿಸಿದಂತೆ ರೋಗ ಲಕ್ಷಣ ತಿಳಿಯಲು ನಿಮ್ಹಾನ್ಸ್ ಆಸ್ಪತ್ರೆಯ ರೋಗಿಗಳಿಂದ ಸಂಗ್ರಹಿಸಲಾಗಿದ್ದ ಬಯಾಪ್ಸಿ ಸ್ಯಾಂಪಲ್ಗಳ ಕಳ್ಳತನ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಬಯಾಪ್ಸಿ ಸ್ಯಾಂಪಲ್ ಗಳನ್ನ ಕಳೆದ ಎರಡು ವರ್ಷಗಳಿಂದ ಕದ್ದು ಕೇರಳದ ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಮಾರಾಟ ಮಾಡಿರುವ ಅಂಶ ಈಗ ಬೆಳಕಿಗೆ ಬಂದಿದೆ.
ಕಳೆದ ಡಿಸೆಂಬರ್ 23ರಂದು ಆಸ್ಪತ್ರೆಯ ಹೆಚ್ಒಡಿ ಡಾ.ಅನಿತಾ ಮಹದೇವನ್ ಅವರು ಶವಾಗಾರಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಬಯಾಪ್ಸಿ ಸ್ಯಾಂಪಲ್ಗಳನ್ನು ಕಳ್ಳತನವಾಗಿರುವುದು ಬೆಳಕಿಗೆ ಬಂದಿತ್ತು. ನಿಮ್ಹಾನ್ಸ್ ಆಸ್ಪತ್ರೆಯ ರಿಜಿಸ್ಟರ್ ಶಂಕರ್ ನಾರಾಯಣ್ ರಾವ್ ಈ ಸಂಬಂಧ ನೀಡಿದ ದೂರಿನ ಮೇರೆಗೆ ಆಸ್ಪತ್ರೆಯಲ್ಲಿ ಟೆಕ್ನಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಚಂದ್ರಶೇಖರ್, ಶವಗಾರದಲ್ಲಿ ಸಹಾಯಕನಾಗಿದ್ದ ಅಣ್ಣಾದೊರೈ ಸೇರಿದಂತೆ ಮೂವರ ವಿರುದ್ಧ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹಲವು ವರ್ಷಗಳಿಂದ ಗುತ್ತಿಗೆ ಆಧಾರದ ಮೇಲೆ ಇಬ್ಬರು ಕೆಲಸ ಮಾಡುತ್ತಿದ್ದರು.
ವಿಚಾರಣೆ ವೇಳೆ ತಲೆಮರೆಸಿಕೊಂಡಿರುವ ಆರೋಪಿ ರಘುರಾಮ್ ಮೂಲಕ ಕೇರಳದ ಖಾಸಗಿ ಮೆಡಿಕಲ್ ಕಾಲೇಜುಗಳಿಗೆ ಬಯಾಪ್ಸಿ ಸ್ಯಾಂಪಲ್ ಮಾರಾಟ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು. ಕಳೆದ ಎರಡು ವರ್ಷದಿಂದಲೂ ಇವರು ಮಾರಾಟ ಜಾಲದಲ್ಲಿ ತೊಡಗಿಸಿಕೊಂಡಿದ್ದು, ಸುಮಾರು 300 ರಿಂದ 400 ಬಯಾಪ್ಸಿ ಸ್ಯಾಂಪಲ್ ಗಳನ್ನ ಮಾರಾಟ ಮಾಡಿರುವುದು ವಿಚಾರಣೆ ವೇಳೆ ತಿಳಿದುಬಂದಿದೆ.