ವಿಜಯಪುರದಲ್ಲಿ ಪ್ರವಾಹ ಭೀತಿ (ETV Bharat) ವಿಜಯಪುರ:ಮಹಾರಾಷ್ಟ್ರದಲ್ಲಿ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿದೆ. ಉಜನಿ ಹಾಗೂ ವೀರ್ ಜಲಾಶಯಗಳಿಂದ 1,20,000 ಕ್ಯೂಸೆಕ್ ನೀರನ್ನು ಭೀಮಾನದಿಗೆ ಬಿಡಲಾಗುತ್ತಿದೆ. ಹೀಗಾಗಿ ನದಿ ಮೈದುಂಬಿ ಹರಿಯುತ್ತಿದ್ದು, ಜಿಲ್ಲೆಯ ಚಡಚಣ, ಇಂಡಿ, ಆಲಮೇಲ, ಸಿಂದಗಿ ತಾಲೂಕುಗಳಲ್ಲಿ ಪ್ರವಾಹ ಆತಂಕ ಆವರಿಸಿದೆ.
ನದಿ ನೀರಿನ ಪ್ರಮಾಣ ಏರಿಕೆಯಾದ ಹಿನ್ನೆಲೆಯಲ್ಲಿ ಕರ್ನಾಟಕ ಹಾಗೂ ಮಹಾರಾಷ್ಟ್ರದ ಸಮಾನಾಂತರದಲ್ಲಿರುವ 8 ಬಾಂದಾರ್ ಕಂ ಬ್ಯಾರೇಜ್ಗಳು ಮುಳುಗಿವೆ. ಕರ್ನಾಟಕದ ಗೋವಿಂದಪುರ-ಭಂಡಾರಕವಟೆ, ಉಮರಾಣಿ-ಲವಗಿ, ಚಣೆಗಾಂವ-ಬರೂರ, ಹಿಂಗಣಿ-ಆಳಗಿ ಬ್ಯಾರೇಜ್ಗಳು ಜಲಾವೃತಗೊಂಡಿವೆ.
ಮಹಾರಾಷ್ಟ್ರದ ಹಿಳ್ಳಿ-ಗುಬ್ಬೇವಾಡ, ಔಜ-ಶಿರನಾಳ, ಚಿಂಚಪೂರ-ಧೂಳಖೇಡ, ಖಾನಾಪುರ-ಪಡನೂರ ಬ್ಯಾರೇಜ್ಗಳು ಜಲಾವೃತಗೊಂಡಿವೆ. ಬ್ಯಾರೇಜ್ಗಳ ಮೇಲೆ ಎರಡು ಅಡಿಗಿಂತ ಹೆಚ್ಚು ನೀರು ಹರಿಯುತ್ತಿದೆ. ಉಭಯ ರಾಜ್ಯಗಳ ಕೆಲ ಗ್ರಾಮಗಳ ರಸ್ತೆ ಸಂಪರ್ಕ ಬಂದ್ ಆಗಿದೆ. ಎರಡೂ ಬದಿಗೆ ತೆರಳಲು ಸುತ್ತು ಹಾಕಿಕೊಂಡು ಹೋಗುವ ಅನಿವಾರ್ಯತೆ ಎದುರಾಗಿದೆ.
ನದಿಯಲ್ಲಿ ನೀರು ಏರಿಕೆಯಾದ ಕಾರಣ, ರೈತರ ಜಮೀನಿಗೆ ನೀರೆತ್ತುವ ಪಂಪ್ ಸೆಟ್ಗಳು ನೀರಲ್ಲಿ ಮುಳುಗಿವೆ. ಕೆಲ ಪಂಪ್ಸೆಟ್ಗಳು ಕೊಚ್ಚಿ ಹೋಗಿವೆ. ಮತ್ತಷ್ಟು ನೀರು ಏರಿಕೆಯಾದರೆ ರೈತರ ಜಮೀನಿಗೆ ಭೀಮಾನದಿ ನೀರು ನುಗ್ಗಲಿದೆ. ಕೆಲ ಗ್ರಾಮಗಳಿಗೂ ನೀರು ನುಗ್ಗಿ ಪ್ರವಾಹ ಉಂಟಾಗುವ ಸಾಧ್ಯತೆ ಇದೆ. ಜನರು ಸುರಕ್ಷತಾ ಕ್ರಮ ವಹಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ.
ಇದನ್ನೂ ಓದಿ:ತುಂಬಿದ ಇದ್ರಮ್ಮನ ಕೆರೆ; ಜೀವ ಕೈಯಲ್ಲಿ ಹಿಡಿದು ಟಾಯರ್ ಟ್ಯೂಬ್ ಮೇಲೆ ಮಕ್ಕಳ ಸಂಚಾರ - Children Crossing Lake