ಬೆಂಗಳೂರು: ವಾಟರ್ ಟ್ಯಾಂಕರ್ ವಾಹನವು ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದ ಹಿಂಬದಿ ಸವಾರ ಮೃತಪಟ್ಟಿರುವ ಘಟನೆ ಕಾಮಾಕ್ಷಿಪಾಳ್ಯ ಠಾಣಾ ವ್ಯಾಪ್ತಿ ತುಂಗಾನಗರ ಮುಖ್ಯ ರಸ್ತೆಯಲ್ಲಿ ನಡೆದಿದೆ. ಹರೀಶ್.ಆರ್ (32) ಮೃತ ದುರ್ದೈವಿ. ನಸುಕಿನಜಾವ 02 ಗಂಟೆಗೆ ಸಂಭವಿಸಿದ್ದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಹರೀಶ್ ಮೃತಪಟ್ಟಿದ್ದನು.
ಸ್ನೇಹಿತ ಸುಚೀತ್ ಜೊತೆ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದಾಗ ತುಂಗಾನಗರ ಮುಖ್ಯರಸ್ತೆಯ ಕಾವೇರಿ ಫ್ಯಾಷನ್ ಬಳಿ ಎದುರು ದಿಕ್ಕಿನಿಂದ ಬಂದ ಶ್ರೀಕೃಷ್ಣ ಹೆಸರಿನ ನೀರಿನ ಟ್ಯಾಂಕರ್ ವಾಹನವು ಡಿಕ್ಕಿ ಹೊಡೆದಿತ್ತು. ಈ ವೇಳೆ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಸುಚೀತ್ ಕೆಳಗೆ ಬಿದ್ದಿದ್ದು, ಹಿಂಬದಿ ಸವಾರ ಹರೀಶ್ ವಾಟರ್ ಟ್ಯಾಂಕರ್ ವಾಹನದ ಮುಂಭಾಗಕ್ಕೆ ಸಿಲುಕಿಕೊಂಡು ತೀವ್ರ ಗಾಯಗೊಂಡಿದ್ದನು. ಅಪಘಾತವೆಸಗಿದ್ದ ಟ್ಯಾಂಕರ್ ಚಾಲಕ ವಾಹನ ನಿಲ್ಲಿಸದೆ ಪರಾರಿಯಾಗಿದ್ದ. ತಕ್ಷಣ ಸಾರ್ವಜನಿಕರು ಗಾಯಾಳುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯುತ್ತಿದ್ದಾಗ ಗಾಯಾಳು ಹರೀಶ್ ಮಾರ್ಗಮಧ್ಯೆ ಅಸುನೀಗಿದ್ದಾನೆ.