ಬೆಂಗಳೂರು:ಸೈಕ್ಲೋನ್ ದಕ್ಷಿಣ ಛತ್ತೀಸ್‌ಗಢದಿಂದ ದಕ್ಷಿಣ ಕೇರಳದವರೆಗೆ ಮಹಾರಾಷ್ಟ್ರದ ವಿದರ್ಭದ ಮೂಲಕ ಸಾಗುತ್ತಿದೆ. ಮರಾಠವಾಡ ಮತ್ತು ಕರ್ನಾಟಕದ ಮೇಲೆ ಚಂಡಮಾರುತ ಸರಾಸರಿ ಸಮುದ್ರ ಮಟ್ಟದಿಂದ 0.9 ಕಿಲೋ ಮೀಟರ್ ಎತ್ತರದಲ್ಲಿದೆ. ಈ ಹಿನ್ನೆಲೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೂರು ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಚಂಡಮಾರುತದಿಂದ ಇಂದು ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಬೀದರ್, ಕಲಬುರಗಿ, ಬೆಳಗಾವಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಾಗಲಕೋಟೆ, ಗದಗ, ವಿಜಯಪುರ, ಚಿಕ್ಕಮಗಳೂರು, ಕೊಡಗು, ಹಾಸನ, ಚಿತ್ರದುರ್ಗ, ಮೈಸೂರು, ಮಂಡ್ಯದ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಹಗುರ ಮಳೆ ಮತ್ತು 30 ರಿಂದ 40 ಕಿ. ಮೀ. ವೇಗದಲ್ಲಿ ರಭಸದ ಗಾಳಿ ಬೀಸಲಿದೆ ಎಂದು ಮಾಹಿತಿ ನೀಡಿದೆ.
ಏಪ್ರಿಲ್ 23 ರಂದು ಬೀದರ್, ಕಲಬುರಗಿ, ಬೆಳಗಾವಿ, ಬಾಗಲಕೋಟೆಯ ಒಂದೆರಡು ಕಡೆಗಳಲ್ಲಿ ಗುಡುಗು ಸಹಿತ ಹಗುರ ಮಳೆ ಮತ್ತು 30- 40 ಕಿ.ಮೀ ರಭಸದ ಗಾಳಿ ಬೀಸಲಿದೆ. ಚಿಕ್ಕಮಗಳೂರು, ಕೊಡಗು, ಹಾಸನ, ಮೈಸೂರು, ಮಂಡ್ಯ ಜಿಲ್ಲೆಗಳಲ್ಲಿ ಕೆಲವೆಡೆ ಹಗುರ ಮಳೆಯಾಗಲಿದೆ. ಏಪ್ರಿಲ್ 24 ರಂದು ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಮಂಡ್ಯ ಜಿಲ್ಲೆಗಳ ಒಂದೆರಡು ಕಡೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯದ ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರುವ ಸಾಧ್ಯತೆ ಇದೆ ಎಂದು ವಾತಾವರಣ ಶಾಖೆ ಹೇಳಿದೆ.
ಮುಂದಿನ 5 ದಿನ ಬಿಸಿಗಾಳಿ ಕೂಡ ಹೆಚ್ಚಾಗುವ ಸಾಧ್ಯತೆ: ಮುಂದಿನ 5 ದಿನ ಬೀದರ್, ಬೆಳಗಾವಿ, ಬಾಗಲಕೋಟೆ, ವಿಜಯಪುರ, ಕಲಬುರಗಿ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ಗದಗ, ಧಾರವಾಡ, ದಾವಣಗೆರೆ, ಕೋಲಾರ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಬಿಸಿಗಾಳಿ ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ಮತ್ತು ಆರ್ದ್ರತೆ ಪರಿಸ್ಥಿತಿಗಳು ಮೇಲುಗೈ ಸಾಧಿಸುವ ಸಾಧ್ಯತೆಯಿದೆ ಎಂದು ಇಲಾಖೆ ಹೇಳಿದೆ.
ಸಿಲಿಕಾನ್ ಸಿಟಿಯಲ್ಲಿ ಮೋಡ ಕವಿದ ವಾತಾವರಣ: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮುಂಜಾನೆ ಭಾಗಶಃ ಮೋಡ ಕವಿದ ವಾತಾವರಣ, ಮಧ್ಯಾಹ್ನ ಮತ್ತು ಸಂಜೆ ಶುಭ್ರವಾದ ಆಕಾಶ ಇರಲಿದೆ. ತಾಪಮಾನ ಗರಿಷ್ಠ 37 ಡಿಗ್ರಿ ಮತ್ತು ಕನಿಷ್ಠ 24 ಡಿಗ್ರಿ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಸದ್ಯ ಚಂಡಮಾರುತದ ಪರಿಚಲನೆಯು ಆಗ್ನೇಯ ಅರೇಬಿಯನ್ ಸಮುದ್ರದ ಮೇಲೆ ಇದೆ. ಈ ಸೈಕ್ಲೋನಿಕ್ ಪರಿಚಲನೆ ಮರಾಠವಾಡ ಮತ್ತು ಪಕ್ಕದ ಪಶ್ಚಿಮ ವಿದರ್ಭದ ಮೇಲಿದೆ. ಮುಂದಿನ ಒಂದೆರಡು ದಿನ ಸರಾಸರಿ ಸಮುದ್ರ ಮಟ್ಟದಿಂದ 1.5 ಕಿಮೀ ವರೆಗೆ ವಿಸ್ತರಿಸಿಸಲಿದೆ. ಇದರಿಂದ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಲಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರದ ಹವಾಮಾನ ಶಾಸ್ತ್ರಜ್ಞ ವಿ.ಕೆ. ಬದರಿನಾಥ್ ಹೇಳಿದ್ದಾರೆ.
ಓದಿ:ಬೆಂಗಳೂರು: ಐತಿಹಾಸಿಕ ಕರಗ ಉತ್ಸವದ ಹಸಿ ಕರಗ ಸಂಪನ್ನ - Bengaluru Karaga