ಬೆಂಗಳೂರು: ರಾಜ್ಯಾದ್ಯಂತ ನಂದಿನಿ ಹಾಲಿನ ಬೆಲೆ ಪ್ರತಿ ಲೀಟರ್‌ಗೆ 2 ರೂಪಾಯಿ ಹೆಚ್ಚಿಸಲಾಗಿದೆ. 1 ಲೀಟರ್, ಅರ್ಧ ಲೀಟರ್ ಹಾಲಿನೊಂದಿಗೆ 50 ಎಂಎಲ್ ಹೆಚ್ಚುವರಿ ಹಾಲು ನೀಡಲು ನಿರ್ಧರಿಸಲಾಗಿದೆ. ಪರಿಷ್ಕೃತ ದರ ಇಂದಿನಿಂದ ಜಾರಿಗೆ ಬಂದಿದೆ.
ಈ ಕುರಿತು ಮಾಧವನಗರದ ನಂದಿನಿ ಶಾಪ್ ಅಂಗಡಿಯ ಉಸ್ತುವಾರಿ ಮಧು 'ಈಟಿವಿ ಭಾರತ್' ಜೊತೆ ಮಾತನಾಡಿ, "ಹಾಲು ಅವಶ್ಯಕ ವಸ್ತು. ಹೀಗಾಗಿ ಯಥಾಸ್ಥಿತಿಯಲ್ಲಿ ವ್ಯಾಪಾರ ನಡೆಯುತ್ತಿದೆ. ಜನ ಅಸಮಾಧಾನ ಹೊರಹಾಕುತ್ತಾ ಹಾಲು ಕೊಂಡುಕೊಳ್ಳುತ್ತಿದ್ದಾರೆ. 50 ಎಂಎಲ್ ಹೆಚ್ಚಿಗೆ ನೀಡುತ್ತಿರುವುದು ಗ್ರಾಹಕರಿಗೆ ಸ್ವಲ್ಪ ಸಮಾಧಾನ ತಂದಿದೆ" ಎಂದರು.
ಧಾರವಾಡ ಮೂಲದ ಟ್ರಾವೆಲ್ಸ್ ಉದ್ಯೋಗಿ ಶಂಭು ಪಾಟೀಲ್ ಮಾತನಾಡುತ್ತಾ, "ಹಾಲಿನ ದರ ಕಡಿಮೆ ಮಾಡಬೇಕಿತ್ತು, ಹೆಚ್ಚಿಸಿರುವುದು ಜನರಿಗೆ ಹೊರೆಯಾಗಿದೆ. ಪೆಟ್ರೋಲ್, ಡೀಸೆಲ್ ದರಗಳೂ ಸಹ ಹೆಚ್ಚಾಗಿವೆ. ಸಿಲಿಂಡರ್ ದರ ಕೂಡ ಹೆಚ್ಚಳವಾಗುವ ಸಾಧ್ಯತೆ ಇದೆ. ರೈತರಿಗೆ ದರ ಹೆಚ್ಚಳದ ಲಾಭ ಸಿಗಬೇಕು. ಸರ್ಕಾರದ ನಿರ್ಧಾರದಿಂದ ವ್ಯಾಪಾರಸ್ಥರಿಗೆ ಲಾಭವಾಗುವ ಸಾಧ್ಯತೆ ಇದೆ. ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮೇಲೆ ದರ ಹೆಚ್ಚಳ ಪ್ರಭಾವ ಬೀರುವ ಸಾಧ್ಯತೆಯಿದೆ" ಎಂದು ಹೇಳಿದರು.
ರೇಸ್ ಕೋರ್ಸ್ ರಸ್ತೆಯ ಟೀ ವ್ಯಾಪಾರಿ ಕೆ.ಸುರೇಶ್ ಪ್ರತಿಕ್ರಿಯಿಸಿ, "50 ಎಂಎಲ್ ಹೆಚ್ಚಿಸಿ 2 ರೂಪಾಯಿ ಜಾಸ್ತಿ ಮಾಡಿದ್ದಾರೆ. 1 ಲೀಟರ್‌ಗೆ ಹೇಗೆ ಇದು ಅನ್ವಯವಾಗಲಿದೆ ಮತ್ತು ಗ್ರಾಹಕರು ಹೇಗೆ ಇದನ್ನು ಸ್ವೀಕರಿಸುತ್ತಾರೆ ಎಂಬುದನ್ನು ಕಾದುನೋಡಬೇಕಿದೆ. ತಕ್ಷಣವೇ ಕಾಫಿ, ಟೀ ಬೆಲೆ ಜಾಸ್ತಿ ಮಾಡಲು ಸಾಧ್ಯವಿಲ್ಲ. ಇದರಿಂದ ಮಾರಾಟಗಾರರಿಗೆ ತೊಂದರೆಯಾಗುತ್ತದೆ. ಬರುವ ಲಾಭ ಕಡಿಮೆಯಾಗುತ್ತದೆ. ಜನಸಾಮಾನ್ಯರು ಮೂರ್ನಾಲ್ಕು ದಿನ ಬೈದುಕೊಂಡು ಮತ್ತೆ ತಮ್ಮ ಜೀವನದ ಕಡೆ ಗಮನ ಕೊಡುತ್ತಾರೆ. ಹಾಗಾಗಿ, ಮುಂದಿನ ಚುನಾವಣೆಯ ಮೇಲೆ ದರ ಹೆಚ್ಚಳದ ಪರಿಣಾಮ ಅಷ್ಟೇನೂ ಆಗದು. ಮಧ್ಯಮ ವರ್ಗದವರು ಮಾತ್ರ ದರ ಹೆಚ್ಚಳದಿಂದ ತತ್ತರಿಸುತ್ತಾರೆ" ಎಂದು ತಿಳಿಸಿದರು.
ಇದನ್ನೂ ಓದಿ:ಗ್ರಾಹಕರಿಗೆ ಹೊರೆಯಲ್ಲದ ಭಾರ, ರೈತರಿಗಿಲ್ಲ ಹೆಚ್ಚುವರಿ ಲಾಭ: ಹಾಲು ದರ ಪರಿಷ್ಕರಣೆ ಹಿಂದಿದೆ ಮಾರ್ಕೆಟಿಂಗ್ ಮಂತ್ರ - Milk Price Revision