ಬೆಂಗಳೂರು: ಹೊಸ ವರ್ಷ ಸಮೀಪಿಸುತ್ತಿದ್ದಂತೆ ರಾಜಧಾನಿಯಲ್ಲಿ ಮಾದಕ ವಸ್ತುಗಳ ವಾಸನೆ ಜೋರಾಗಿದೆ. ಡ್ರಗ್ಸ್ ಅಡ್ಡೆ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ, ಮೊದಲ ಬಾರಿ 24 ಕೋಟಿ ಮೌಲ್ಯದ ನಿಷೇಧಿತ ಎಂಡಿಎಂಎ ಜಪ್ತಿ ಮಾಡಿಕೊಂಡಿದ್ದಾರೆ.
ಇನ್ನು ಪ್ರಕರಣ ಸಂಬಂಧ ನೈಜೀರಿಯಾ ಮೂಲದ ಮಹಿಳೆ ರೋಜ್ಲೈಮ್ ಎಂಬುವರನ್ನು ಬಂಧಿಸಲಾಗಿದೆ. ನೈಜೀರಿಯಾ ಮೂಲದ ಈಕೆ ಕೆಲ ವರ್ಷಗಳಿಂದ ಕೆ. ಆರ್. ಪುರಂನ ಟಿ. ಸಿ. ಪಾಳ್ಯದಲ್ಲಿ ನೆಲೆಸಿದ್ದರು. ವೀಸಾ ಅವಧಿ ಗಡುವು ಮುಗಿದರೂ ನಗರದಲ್ಲಿ ವಾಸ್ತವ್ಯ ಹೂಡಿದ್ದಳು. ಜೀವನಕ್ಕಾಗಿ ಪ್ರಾವಿಷನ್ ಸ್ಟೋರ್ ಅಂಗಡಿ ಇಟ್ಟುಕೊಂಡಿದ್ದ ಆರೋಪಿತೆಯು ಮೋಜಿನ ಜೀವನ ಮಾಡಲು ಹಾಗೂ ಹೆಚ್ಚಿನ ಹಣ ಸಂಪಾದಿಸಲು ವಾಮಮಾರ್ಗ ಕಂಡುಕೊಂಡಿದ್ದಳು. ವ್ಯವಸ್ಥಿತ ಜಾಲದ ಮೂಲಕ ಡ್ರಗ್ಸ್ ದಂಧೆಕೋರರನ್ನು ಸಂಪರ್ಕಿಸುತ್ತಿದ್ದ ಆರೋಪಿಯು, 24 ಕೋಟಿ ಮೌಲ್ಯದ ನಿಷೇಧಿತ 12 ಕೆಜಿ ಎಂಡಿಎಂಎ ಕ್ರಿಸ್ಟಲ್ ತರಿಸಿಕೊಂಡು ಸಂಗ್ರಹಿಸಿದ್ದಳು. ಖಚಿತ ಮಾಹಿತಿ ಮೇರೆಗೆ ಸಿಸಿಬಿ ಮಾದಕವಸ್ತು ನಿಗ್ರಹ ದಳ ಅಧಿಕಾರಿಗಳು ದಾಳಿ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೆ 70 ಸಿಮ್ಗಳನ್ನು ಜಪ್ತಿ ಮಾಡಿರುವ ಬಗ್ಗೆ ನಗರ ಪೊಲೀಸ್ ಆಯುಕ್ತ ದಯಾನಂದ ಮಾಹಿತಿ ನೀಡಿದ್ದಾರೆ.