ಬೆಂಗಳೂರು: ಬಾಬುಸಾಪಾಳ್ಯದಲ್ಲಿ ಕುಸಿದು ಬಿದ್ದ ನಿರ್ಮಾಣದ ಹಂತದ ಕಟ್ಟಡದಲ್ಲಿ ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರಿದಿದೆ. ಅವಶೇಷಗಳ ಅಡಿ ಸಿಲುಕಿ ಸಾವನ್ನಪ್ಪಿದವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಬಿಹಾರ ಮೂಲದ ಅರ್ಮಾನ್, ಮೊಹಮ್ಮದ್ ಸಾಹಿಲ್, ಸೋಲೋ ಪಾಸ್ವಾನ್, ಶ್ರೀರಾನ್ ಕಿರುಪಾಲ್. ತಮಿಳುನಾಡು ಮೂಲದ ಮಣಿಕಂಠನ್, ಸತ್ಯರಾಜು ಮತ್ತು ಆಂಧ್ರಪ್ರದೇಶ ಮೂಲದ ತುಳುಸಿರೆಡ್ಡಿ ಮತ್ತು ಉತ್ತರ ಪ್ರದೇಶ ಮೂಲದ ಪುಲ್ಚನ್ ಯಾದವ್ ಮೃತರು.
ಅಗ್ನಿಶಾಮಕದಳ ಜೊತೆಗೆ ಎನ್ಡಿಆರ್ಎಫ್ ಹಾಗೂ ಎಸ್ಡಿಆರ್ಎಫ್ ಸಿಬ್ಬಂದಿ ಜೊತೆಗೂಡಿ ಕಟ್ಟಡದ ಅವಶೇಷದಡಿ ಸಿಲುಕಿದವರಿಗಾಗಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದಾರೆ. 3 ಮಂದಿಯನ್ನ ರಕ್ಷಿಸಲಾಗಿದೆ. ಇನ್ನೂ ಮೂರರಿಂದ ನಾಲ್ಕು ಮಂದಿ ಅವಶೇಷಗಳಡಿ ಸಿಲುಕಿಕೊಂಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ರಕ್ಷಣಾ ಕಾರ್ಯಾಚರಣೆ ಚುರುಕುಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಟ್ಟಡ ಕುಸಿತ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಹೆಣ್ಣೂರು ಪೊಲೀಸರು ಮನೆ ಮಾಲೀಕನ ಪುತ್ರ ಭುವನ್ ಗೌಡ, ಕಟ್ಟಡದ ಮೇಲ್ವಿಚಾರಕರಾಗಿದ್ದ ಮೋಹನ್ ರೆಡ್ಡಿ, ಏಳುಮಲೈ ಎಂಬುವರನ್ನ ಬಂಧಿಸಿದ್ದಾರೆ. ಕಟ್ಟಡದ ನಾಲ್ಕನೇ ಅಂತಸ್ತಿನವರೆಗೂ ಉಸ್ತುವಾರಿ ವಹಿಸಿಕೊಂಡಿದ್ದ ಮುನಿಯಪ್ಪ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಕಟ್ಟಡದ ಮಾಲೀಕ ಮುನಿರಾಜು ರೆಡ್ಡಿ ನಾಪತ್ತೆಯಾಗಿದ್ದು, ಬಂಧನಕ್ಕಾಗಿ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದುರಂತ ಸಂಬಂಧ ಲೋಕಾಯುಕ್ತ ನ್ಯಾ. ಬಿ.ಎಸ್. ಪಾಟೀಲ್ ಸ್ಥಳಕ್ಕೆ ಭೇಟಿ ನಿರ್ಲಕ್ಷ್ಯವಹಿಸಿದ್ದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದುರ್ಘಟನೆಯಲ್ಲಿ 8 ಮಂದಿ ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆ ಕಾರಣ ಯಾರು?. ಆಗಿದ್ದೇಗೆ ಎಂಬುದರ ಬಗ್ಗೆ ತನಿಖೆಯಾಗಬೇಕು ಎಂದರು.