ಬಳ್ಳಾರಿ:ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ದೇಶಾದ್ಯಂತ ಕಾಂಗ್ರೆಸ್ಗೆ ಇಪ್ಪತ್ತು ಸ್ಥಾನ ಬರುವುದು ಕಷ್ಟವಿದೆ. ಇಂಥ ಪರಿಸ್ಥಿತಿ ಇರುವಾಗ ರಾಜ್ಯದಲ್ಲಿ ಕಾಂಗ್ರೆಸ್ 20 ಸೀಟು ಗೆಲ್ಲುವುದು ಸಾಧ್ಯವೇ ಇಲ್ಲ ಎಂದು ಮಾಜಿ ಸಚಿವ ಸಿ ಟಿ ರವಿ ಹೇಳಿದರು.
ನಗರದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಇಪ್ಪತ್ತು ಲೋಕಸಭೆ ಸ್ಥಾನ ಗೆಲ್ಲುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಗಮನ ಸೆಳೆದಾಗ ಪ್ರತಿಕ್ರಿಯಿಸಿದ ಅವರು, ಕರ್ನಾಟಕ, ತಮಿಳುನಾಡು, ಕೇರಳದಲ್ಲಿ ಕಳೆದ ಬಾರಿ ಬೋನಸ್ ಎಂಬಂತೆ ಕಾಂಗ್ರೆಸ್ ಒಂದೆರಡು ಕ್ಷೇತ್ರಗಳನ್ನು ಗೆದ್ದಿತ್ತು. ಈ ಬಾರಿ ಅಷ್ಟೂ ಸ್ಥಾನ ಗೆಲ್ಲುವುದು ಅನುಮಾನವಿದೆ ಎಂದರು.
ರಾಜ್ಯದ ಎಲ್ಲ 28 ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಲಿದೆ. ರಾಮಮಂದಿರ ನಿರ್ಮಾಣದ ಬಳಿಕ ದೇಶದಲ್ಲಿ ರಾಮಮಯ ವಾತಾವರಣ ನಿರ್ಮಾಣವಾಗಿದೆ. ನಲವತ್ತು ವರ್ಷದ ರಾಜಕಾರಣದಲ್ಲಿ ರಾಮಮಂದಿರ ಕಟ್ಟಬೇಕೆಂದು ಒಮ್ಮೆಯೂ ಹೇಳದ ಸಿದ್ದರಾಮಯ್ಯ ಬಾಯಿಯಲ್ಲೇ ಜೈ ಶ್ರೀರಾಮ ಘೋಷಣೆ ಬಂದಿದೆ ಎಂದರೆ ಬಿಜೆಪಿ ಗೆಲ್ಲುತ್ತದೆಂದು ಕಾಂಗ್ರೆಸ್ನವರಿಗೆ ಅರಿವಾಗಿದೆ. 2024 ರ ಲೋಕಸಭಾ ಚುನಾವಣೆಯಲ್ಲಿ ಎನ್‌ಡಿಎ ನಾಲ್ಕು ನೂರು ಸ್ಥಾನಗಳ ಗಡಿಯನ್ನು ದಾಟಲಿದೆ ಎಂದು ಅವರು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.
ಇಂಡಿಯಾ ಒಕ್ಕೂಟವು ಆರಂಭದಲ್ಲಿ ದೊಡ್ಡದಾಗಿ ಸೌಂಡ್ ಮಾಡಿತ್ತು. ಆದರೇ ಸರಣಿ ಸಭೆಗಳು ನಡೆಯುತ್ತ ಅಬ್ಬರ ಕಡಿಮೆಯಾಗಿ, ಮೂರನೇ ಸಭೆಯ ಸಂದರ್ಭದಲ್ಲಿ ಇಂಡಿಯಾ ಒಕ್ಕೂಟ ಮಕಾಡೆ ಮಲಗಿದೆ. ಈಗ ಇಂಡಿಯಾ ಒಕ್ಕೂಟ ‘ಢಮಾರ್’ ಎಂದಿದೆ ಎಂದು ಸಿ.ಟಿ ರವಿ ವ್ಯಂಗ್ಯವಾಡಿದರು.