ಕರ್ನಾಟಕ

karnataka

ETV Bharat / state

ಬೇಲೇಕೇರಿ ಅದಿರು ನಾಪತ್ತೆ ಪ್ರಕರಣ: ಶಿಕ್ಷೆ ರದ್ದುಕೋರಿ ಖಾರದಪುಡಿ ಮಹೇಶ್, ಪ್ರೇಮಚಂದ್ ಗರ್ಗ್ ಅರ್ಜಿ; ಸಿಬಿಐಗೆ ನೋಟಿಸ್ - BELEKERE IRON ORE CASE

ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ವಿಶೇಷ ನ್ಯಾಯಾಲಯ ವಿಧಿಸಿರುವ ಶಿಕ್ಷೆ ರದ್ದುಪಡಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್, ಸಿಬಿಐಗೆ ನೋಟಿಸ್ ಜಾರಿ ಮಾಡಿದೆ.

ಹೈಕೋರ್ಟ್
ಹೈಕೋರ್ಟ್ (ETV Bharat)

By ETV Bharat Karnataka Team

Published : Nov 5, 2024, 6:29 PM IST

ಬೆಂಗಳೂರು: ಬೇಲೇಕೇರಿ ಬಂದರಿನಲ್ಲಿ ಅರಣ್ಯ ಇಲಾಖೆ ವಶಪಡಿಸಿಕೊಂಡು ಸಂಗ್ರಹಿಸಿಟ್ಟಿದ್ದ ಕಬ್ಬಿಣದ ಅದಿರು ಕಳವು ಮತ್ತು ರಫ್ತು ಮಾಡಿದ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿರುವ ಮೆಸರ್ಸ್ ಶ್ರೀ ಲಕ್ಷ್ಮಿ ವೆಂಕಟೇಶ್ವರ ಮಿನರಲ್ಸ್ ಪಾಲುದಾರ ಕೆ. ಮಹೇಶ್ ಕುಮಾರ್ ಅಲಿಯಾಸ್ ಖಾರಪುಡಿ ಮಹೇಶ್ ಮತ್ತು ಮೆಸರ್ಸ್ ಲಾಲ್ ಮಹಲ್ ಲಿಮಿಟೆಡ್ ಮತ್ತು ಅದರ ಮಾಲೀಕ ಪ್ರೇಮ್ ಚಂದ್ ಗರ್ಗ್ ಅವರು ವಿಶೇಷ ನ್ಯಾಯಾಲಯದ ಆದೇಶ ರದ್ದುಪಡಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಖಾರದಪುಡಿ ಮಹೇಶ್ ಮಹೇಶ್ ಮತ್ತು ಪ್ರೇಮ್ ಚಂದ್ ಗರ್ಗ್ ಅವರು ಪ್ರಕರಣದಲ್ಲಿ ಖುಲಾಸೆ ಕೋರಿದ್ದಾರೆ. ಗರ್ಗ್ ಅವರು ಸಹೋದರಿಯ ಪುತ್ರನ ವಿವಾಹ ಗೋವಾದಲ್ಲಿ ನಡೆಯುತ್ತಿದ್ದು, ನವೆಂಬರ್ 8 ರಿಂದ 18ರವರೆಗೆ ಜಾಮೀನು ನೀಡಬೇಕು ಎಂದು ಮಧ್ಯಂತರ ಮನವಿ ಮಾಡಿದ್ದಾರೆ.

ಇಬ್ಬರೂ ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಪ್ರಕರಣ ಸಂಬಂಧ ಕೇಂದ್ರೀಯ ತನಿಖಾ ದಳ(ಸಿಬಿಐ)ಕ್ಕೆ ನೋಟಿಸ್ ಜಾರಿ ಮಾಡಿತು.

ವಿಶೇಷ ನ್ಯಾಯಾಲಯದ ತೀರ್ಪು ಬದಿಗೆ ಸರಿಸುವುದಲ್ಲದೇ ಅರ್ಜಿದಾರರ ತಂಗಿಯ ಮಗನ ವಿವಾಹ ಗೋವಾದಲ್ಲಿ ಮುಂದಿನ ವಾರ ನಡೆಯಲಿದೆ. ಅರ್ಜಿದಾರರೊಬ್ಬರೇ ಸೋದರ ಮಾವ ಆಗಿರುವುದರಿಂದ ಸಾಂಪ್ರದಾಯಿಕ ಕರ್ತವ್ಯಗಳನ್ನು ನಿಭಾಯಿಸಬೇಕಿದೆ. ಈ ದೃಷ್ಟಿಯಿಂದ ನವೆಂಬರ್ 8 ರಿಂದ 18ರವರೆಗೆ 10 ದಿನಗಳ ಕಾಲ ಅವರನ್ನು ಬಿಡುಗಡೆ ಮಾಡಬೇಕು ಎಂದು ವಿಚಾರಣೆ ವೇಳೆ ಪ್ರೇಮ್ ಚಂದ್ ಗರ್ಗ್ ಪರ ವಕೀಲರು ಕೋರಿದರು.

ಖಾರಪುಡಿ ಮಹೇಶ್ ಪ್ರತಿನಿಧಿಸಿದ್ದ ವಕೀಲರು ವಾದ ಮಂಡಿಸಿ, ಐಪಿಸಿ ಸೆಕ್ಷನ್ 120ಬಿಗೆ ಐದು ವರ್ಷ ಶಿಕ್ಷೆ ಇದೆ. ಶಿಕ್ಷೆಯು ಸ್ಥಾಪಿತ ಅವಧಿಯವರೆಗೆ ಇದ್ದರೆ ಅದನ್ನು ಉದಾರವಾಗಿ ಪರಿಗಣಿಸಬೇಕು ಎಂದು ಕಾನೂನು ಹೇಳುತ್ತದೆ ಎಂದು ವಿವರಿಸಿದರು.

ಈ ವೇಳೆ ಸಿಬಿಐ ಪರ ವಕೀಲರು, ವಿಶೇಷ ನ್ಯಾಯಾಲಯದ ತೀರ್ಪು 400 ಪುಟಗಳಿವೆ. ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ಸಿಬಿಐ ತನಿಖೆಗೆ ವಹಿಸಿದ್ದು, ವಿಚಾರಣೆ ಆರಂಭವಾದಾಗಿನಿಂದ ಸುಪ್ರೀಂ ಕೋರ್ಟ್ ಅದರ ಮೇಲೆ ನಿಗಾ ಇಟ್ಟಿದೆ. ಇದಕ್ಕೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶಬೇಕು. ಇದು ಸಾಮಾನ್ಯ ಐಪಿಸಿ ಸೆಕ್ಷನ್ 420 ಅಲ್ಲ. ನೈಸರ್ಗಿಕ ಸಂಪತ್ತು ಲೂಟಿ ಮಾಡಲಾಗಿದೆ ಎಂದು ಪೀಠಕ್ಕೆ ತಿಳಿಸಿದರು. ವಾದ - ಪ್ರತಿವಾದ ಆಲಿಸಿದ ಪೀಠವು ಸಿಬಿಐಗೆ ನೋಟಿಸ್ ಜಾರಿ ಮಾಡಿದ್ದು, ಆಕ್ಷೇಪಣೆ ಸಲ್ಲಿಸಲು ಆದೇಶಿಸಿ, ವಿಚಾರಣೆಯನ್ನು ನವೆಂಬರ್ 12ಕ್ಕೆ ಮುಂದೂಡಿತು.

ಪ್ರಕರಣದ ಹಿನ್ನೆಲೆ:ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಖಾರದಪುಡಿ ಮಹೇಶ್ ಮತ್ತು ಪ್ರೇಮ್ ಚಂದ್ ಗರ್ಗ್‌ಗೆ ಐಪಿಸಿ ಸೆಕ್ಷನ್ 120-ಬಿ ಅಡಿ ಕ್ರಿಮಿನಲ್ ಪಿತೂರಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಐದು ವರ್ಷ ಜೈಲು ಶಿಕ್ಷೆ ಮತ್ತು 20,000 ರೂ.ಗಳ ದಂಡ ವಿಧಿಸಲಾಗಿದೆ. ಐಪಿಸಿ ಸೆಕ್ಷನ್ 420 ಅಡಿ ಕಳವು ಅಪರಾಧಕ್ಕೆ ಇಬ್ಬರಿಗೂ ಏಳು ವರ್ಷ ಜೈಲು ವಿಧಿಸಲಾಗಿದ್ದು, ದಂಡದ ಮೊತ್ತವನ್ನು ಕ್ರಮವಾಗಿ 9.25 ಕೋಟಿ ಮತ್ತು 90 ಲಕ್ಷ ವಿಧಿಸಲಾಗಿದೆ ಮತ್ತು ಐಪಿಸಿ ಸೆಕ್ಷನ್ 379 ಜೊತೆಗೆ 120-ಬಿ ಅಡಿ ಪಿತೂರಿ ನಡೆಸಿ ಕಳವು ಮಾಡಿದ್ದಕ್ಕಾಗಿ ಮೂರು ವರ್ಷ ಜೈಲು ಶಿಕ್ಷೆ ಮತ್ತು 20,000 ದಂಡ ವಿಧಿಸಿ, ಎಲ್ಲಾ ಶಿಕ್ಷೆಗಳು ಏಕಕಾಲಕ್ಕೆ ಜಾರಿಯಾಗಲಿವೆ ಎಂದು ವಿಶೇಷ ನ್ಯಾಯಾಲಯ ಅಕ್ಟೋಬರ್ 26ರಂದು ತೀರ್ಪು ನೀಡಿತ್ತು.

ಇದನ್ನೂ ಓದಿ: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣ: ಶಾಸಕ ಸತೀಶ್ ಸೈಲ್ ಸೇರಿ 7 ಮಂದಿಗೆ ನಾಳೆ ಶಿಕ್ಷೆ ಪ್ರಕಟ

ABOUT THE AUTHOR

...view details