ಬೆಳಗಾವಿ:ಕ್ರಿಮಿನಾಶಕ ಮಿಶ್ರಿತ ನೀರು ಸೇವಿಸಿ ನಡು ರಸ್ತೆಯಲ್ಲೇ ಎರಡು ಹಸು, ಎಮ್ಮೆ, ಐದು ಆಡುಗಳು ಸಾವಿಗೀಡಾಗಿರುವ ಘಟನೆ ಬೆಳಗಾವಿ ತಾಲೂಕಿನ ಸಂತಿಬಸ್ತವಾಡ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಸಂತಿ ಬಸ್ತವಾಡ ಗ್ರಾಮದ ಯಲ್ಲಪ್ಪ ಚಿನಗುಪ್ಪಿ ಎಂಬುವರಿಗೆ ಸೇರಿದ ಎರಡು ಹಸುಗಳು, ಎಮ್ಮೆ, ಐದು ಆಡುಗಳು ಸಾವನ್ನಪ್ಪಿದ್ದು ಮೇಯಿಸಲು ಹೋದಾಗ ಕ್ರಿಮಿನಾಶಕ ನೀರು ಸೇವನೆ ಮಾಡಿವೆ. ಪಕ್ಕದ ಜಮೀನಿನ ಮಾಲೀಕ ಕಬ್ಬಿನ ಹೊಲಕ್ಕೆ ಔಷಧ ಸಿಂಪಡಿಸಲು ನೀರಿನಲ್ಲಿ ಕ್ರಿಮಿನಾಶಕ ಬೆರೆಸಿ ಇಟ್ಟಿದ್ದರು. ಬಿಸಿಲಿನ ಬೇಗೆಗೆ ಬಸವಳಿದಿದ್ದ ಹಸು, ಎಮ್ಮೆ ಹಾಗೂ ಆಡುಗಳು ಅದೇ ಕ್ರಿಮಿನಾಶಕ ಮಿಶ್ರಿತ ನೀರನ್ನು ಸೇವನೆ ಮಾಡಿವೆ. ಕ್ರಿಮಿನಾಶಕ ಮಿಶ್ರಿತ ನೀರು ಸೇವನೆ ಮಾಡ್ತಿದ್ದಂತೆ ಒದ್ದಾಡಿ ನಡು ರಸ್ತೆಯಲ್ಲೇ ಪ್ರಾಣಬಿಟ್ಟಿವೆ.
ಲಕ್ಷಾಂತರ ರೂ. ಮೌಲ್ಯದ ಹಸು, ಎಮ್ಮೆ, ಆಡುಗಳನ್ನು ಕಳೆದುಕೊಂಡು ರೈತ ಕಂಗಾಲಾಗಿದ್ದು ಪರಿಹಾರದ ನಿರೀಕ್ಷೆಯಲ್ಲಿದ್ದಾರೆ. ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿ ಈ ದುರ್ಘಟನೆ ನಡೆದಿದೆ.