ಕರ್ನಾಟಕ

karnataka

ETV Bharat / state

ಬೆಳಗಾವಿ ಸುವರ್ಣಸೌಧ ಮುಂದೆ ಗಾಂಧೀಜಿ ಪ್ರತಿಮೆ ಅನಾವರಣ - GANDHIJI STATUE

ಬೆಳಗಾವಿ ಸುವರ್ಣಸೌಧದ ಎದುರು 25 ಅಡಿ ಎತ್ತರದ ಮಹಾತ್ಮ ಗಾಂಧೀಜಿ ಅವರ ಪುತ್ಥಳಿಯನ್ನು ಮಲ್ಲಿಕಾರ್ಜುನ ಖರ್ಗೆ ಲೋಕಾರ್ಪಣೆಗೊಳಿಸಿದರು.

ಬೆಳಗಾವಿ ಸುವರ್ಣಸೌಧ ಮುಂದೆ ಗಾಂಧೀಜಿ ಪ್ರತಿಮೆ ಅನಾವರಣ
ಬೆಳಗಾವಿ ಸುವರ್ಣಸೌಧ ಮುಂದೆ ಗಾಂಧೀಜಿ ಪ್ರತಿಮೆ ಅನಾವರಣ (ETV Bharat)

By ETV Bharat Karnataka Team

Published : Jan 21, 2025, 12:42 PM IST

Updated : Jan 21, 2025, 1:24 PM IST

ಬೆಳಗಾವಿ: ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಅಂಗವಾಗಿ ಸುವರ್ಣ ವಿಧಾನಸೌಧ ಮುಂದೆ ಬೃಹದಾಕಾರದ ಮಹಾತ್ಮ ಗಾಂಧೀಜಿ ಕಂಚಿನ ಪುತ್ಥಳಿ ಅನಾವರಣಗೊಂಡಿತು.

25 ಅಡಿ ಎತ್ತರದ ಬಾಪೂಜಿ ಪುತ್ಥಳಿಯನ್ನು ಚರಕ ನೇಯ್ಯುವ ಮೂಲಕ ಎಐಸಿಸಿ ಅಧ್ಯಕ್ಷ ಮತ್ತು ರಾಜ್ಯಸಭಾ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಲೋಕಾರ್ಪಣೆಗೊಳಿಸಿದರು. ಗಾಂಧೀಜಿ ಪ್ರತಿಮೆ ಉದ್ಘಾಟನೆ ಆಗುತ್ತಿದ್ದಂತೆ ಇತ್ತ ಸುವರ್ಣಸೌಧದ ಮುಂಭಾಗದಲ್ಲಿ ಸಿಡಿಮದ್ದುಗಳನ್ನು ಸಿಡಿಸಿ ಕಾರ್ಯಕರ್ತರು ಸಂಭ್ರಮಿಸಿದರು.

ಚರಕ ನೇಯ್ಯುವ ಮೂಲಕ ಗಾಂಧೀಜಿ ಪ್ರತಿಮೆ ಅನಾವರಣ (ETV Bharat)

ನನ್ನ ಜೀವನವೇ ನನ್ನ ಸಂದೇಶ ಎಂದು ಸಾರುವ ಗಾಂಧೀಜಿ ಮೂರ್ತಿ ಇಡೀ ದೇಶಕ್ಕೆ ಗೌರವ. ಇಡೀ ಜಗತ್ತು ಗಾಂಧೀಜಿ ಅವರನ್ನು ಗೌರವಿಸುತ್ತದೆ. ಬೆಳಗಾವಿ ಇಡೀ ದೇಶಕ್ಕೆ ಗೌರವ ತಂದುಕೊಡುವ ಸ್ಥಳ. ಯಾಕೆಂದರೆ ಗಾಂಧೀಜಿ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದು ಬೆಳಗಾವಿಯಲ್ಲಿ ಮಾತ್ರ. ಅಂತಹ ಮಹಾತ್ಮನ ಪುತ್ಥಳಿ ಉದ್ಘಾಟನೆ ನನ್ನ ಕೈಯಿಂದ ಆಗಿದ್ದಕ್ಕೆ ನನ್ನ ಜೀವನ ಧನ್ಯವಾಯಿತು ಎಂದು ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.

ರಾಮ ಭಕ್ತರಾಗಿ ಅತ್ಯುತ್ತಮ‌ ಹಿಂದೂ ಆಗಿದ್ದ ಮಹಾತ್ಮ ಗಾಂಧೀಜಿ ಅವರನ್ನು ಬಿಜೆಪಿ ಪರಿವಾರದ ಗೋಡ್ಸೆ ಹತ್ಯೆ ಮಾಡಿದ. ನಾವು ಮಹಾತ್ಮಗಾಂಧಿ ಅವರ ಹಿಂದೂತ್ವದಲ್ಲಿ ನಂಬಿಕೆ ಇಟ್ಟಿದ್ದೇವೆ. ಬಿಜೆಪಿ ಪರಿವಾರ ಗೋಡ್ಸೆಯ ಕೊಲೆಗಡುಕ ಸಿದ್ಧಾಂತ ಪಾಲಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹರಿಹಾಯ್ದರು.

ಸಿಎಂ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (ETV Bharat)

ಮಹಾತ್ಮ ಗಾಂಧಿ ಅವರು ಕೊನೆ ಉಸಿರು ಇರುವವರೆಗೂ ಅವರ ಬಾಯಲ್ಲಿ ಹೇ ರಾಮ್ ಜಪಿಸುತ್ತಿದ್ದರು. ಆದರೆ, ಅವರನ್ನು ಬಿಜೆಪಿಯವರು ಹಿಂದೂ‌ ವಿರೋಧಿ ಎನ್ನುತ್ತಾರೆ. ಆದರೆ, ಗಾಂಧಿ ತತ್ವದ ವಿರೋಧಿಯಾಗಿರುವ ಬಿಜೆಪಿ ಪರಿವಾರ ಸಂವಿಧಾನ ವಿರೋಧಿ-ಅಂಬೇಡ್ಕರ್ ದ್ವೇಷಿಯೂ ಆಗಿದೆ ಎಂದು ಆರೋಪಿಸಿದರು.

ನಾವು ಮಹಾತ್ಮ ಗಾಂಧಿಯವರ ವಿಚಾರಗಳನ್ನು ಮುಂದಿನ ಪೀಳಿಗೆಗೆ ಮತ್ತಷ್ಟು ಅರ್ಥಪೂರ್ಣವಾಗಿ ತಲುಪಿಸುವ, ಗಾಂಧಿಯವರ ಗ್ರಾಮ ಸ್ವರಾಜ್ಯದ ಕನಸನ್ನು ನನಸು ಮಾಡುವ ಗುರಿಯೊಂದಿಗೆ ಜೈ ಬಾಪು-ಜೈ ಭೀಮ್-ಜೈ ಸಂವಿಧಾನ ಅಭಿಯಾನಯನ್ನು ಮುನ್ನಡೆಸುತ್ತೇವೆ. ನೂರು ವರ್ಷಗಳ ಹಿಂದೆ ಕರ್ನಾಟಕದಲ್ಲಿ ನಡೆದ ಎಐಸಿಸಿ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದು ಮಹಾತ್ಮ ಗಾಂಧಿ. ಆ ದಿನ ಸ್ವಾತಂತ್ರ್ಯ ಹೋರಾಟದ ಕಿಚ್ಚನ್ನು ಈ ನೆಲದಲ್ಲಿ ಹೆಚ್ಚಿಸಿದರು ಎಂದು ಸಿಎಂ ಸ್ಮರಿಸಿದರು.

ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ, ವಿಧಾನಸಭೆ ಸಭಾಧ್ಯಕ್ಷ ಯು.ಟಿ‌. ಖಾದರ್, ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಡಿಸಿಎಂ ಡಿ.ಕೆ. ಶಿವಕುಮಾರ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ‌. ವೇಣುಗೋಪಾಲ್, ರಣದೀಪ ಸಿಂಗ್ ಸುರ್ಜೇವಾಲ, ಸಚಿವರಾದ ಹೆಚ್.ಕೆ. ಪಾಟೀಲ, ಡಾ. ಜಿ. ಪರಮೇಶ್ವರ, ಸತೀಶ ಜಾರಕಿಹೊಳಿ ಸೇರಿ ಮತ್ತಿತರರು ಇದ್ದರು.

ಇದನ್ನೂ ಓದಿ: ಗಾಂಧೀಜಿ ಅಧ್ಯಕ್ಷತೆ ವಹಿಸಿದ್ದ 1924ರ ಬೆಳಗಾವಿ ಕಾಂಗ್ರೆಸ್ ಅಧಿವೇಶನಕ್ಕಾದ ಖರ್ಚೆಷ್ಟು?

ಇದನ್ನೂ ಓದಿ: ಬೆಳಗಾವಿ ಕಾಂಗ್ರೆಸ್ ಅಧಿವೇಶನದಲ್ಲಿ ಗಾಂಧೀಜಿ‌ ಭಾಷಣ ಹೇಗಿತ್ತು? ಅವರು ಪ್ರಸ್ತಾಪಿಸಿದ ವಿಚಾರಗಳು ಯಾವುವು?

Last Updated : Jan 21, 2025, 1:24 PM IST

ABOUT THE AUTHOR

...view details