ಕರ್ನಾಟಕ

karnataka

ETV Bharat / state

ರಾಹುಲ್ ಗಾಂಧಿ ನಮ್ಮ ಓಣಿಗೆ ಬಂದ್ರೂ ನೋಡಾಕ ಸಿಗಲಿಲ್ರಿ; ಬೆಳಗಾವಿ ಜನರಿಗೆ ನಿರಾಸೆ - BELAGAVI CONGRESS SESSION

ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಆಚರಣೆಗೆ ನಗರಕ್ಕೆ ರಾಷ್ಟ್ರೀಯ ನಾಯಕರು ಆಗಮಿಸಿದ್ದಾರೆ. 1924ರಲ್ಲಿ ಕಾಂಗ್ರೆಸ್ ಅಧಿವೇಶನ ನಡೆದ ಜಾಗದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಬೆಳಗಾವಿ ಕಾಂಗ್ರೆಸ್ ಅಧಿವೇಶನ
ರಾಹುಲ್ ಗಾಂಧಿ ನೋಡಲು ನಿಂತಿದ್ದ ಜನರು (ETV Bharat)

By ETV Bharat Karnataka Team

Published : Dec 26, 2024, 8:38 PM IST

ಬೆಳಗಾವಿ: ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಡೆದಿದ್ದ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಹಿನ್ನೆಲೆಯಲ್ಲಿ ನಗರಕ್ಕೆ ಆಗಮಿಸಿದ ರಾಷ್ಟ್ರೀಯ ನಾಯಕರನ್ನು ನೋಡಲು ಜನ ನಿಂತಿದ್ದರು. ಆದರೆ ಭದ್ರತೆ ದೃಷ್ಟಿಯಿಂದ ವೀರಸೌಧ ಬಳಿ ದೂರದಲ್ಲೇ ನಿಲ್ಲಿಸಿದ್ದರಿಂದ ಜನರಿಗೆ ನಿರಾಸೆ ಉಂಟಾಯಿತು.

ಇಂದು ಮಧ್ಯಾಹ್ನ ವೀರಸೌಧದಲ್ಲಿ ಕರೆದಿದ್ದ ವಿಸ್ತೃತ ಕಾಂಗ್ರೆಸ್ ಕಾರ್ಯಕಾರಿಣಿ ಸಭೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ. ಕೆ. ಶಿವಕುಮಾರ್ ಸೇರಿ ನಾಯಕರ ದಂಡೇ ಹರಿದು ಬಂದಿತ್ತು. ಮುಖ್ಯರಸ್ತೆಯಿಂದ ಸೌಧದವರೆಗೆ 100 ಮೀಟರ್ ನಡೆದುಕೊಂಡೇ ನಾಯಕರು ಬಂದರು. ಈ ವೇಳೆ ಅವರನ್ನು ತಮ್ಮ‌ ಮನೆಗಳ ಕಿಟಕಿಯಿಂದ‌ ಇಣುಕಿ ಅಕ್ಕಪಕ್ಕದವರು ನೋಡುತ್ತಿರುವುದು ಸಾಮಾನ್ಯವಾಗಿತ್ತು.

ರಾಹುಲ್ ಗಾಂಧಿ ನಮ್ಮ ಓಣಿಗೆ ಬಂದ್ರೂ ನೋಡಾಕ ಸಿಗಲಿಲ್ರಿ; ಬೆಳಗಾವಿ ಜನರಿಗೆ ನಿರಾಸೆ (ETV Bharat)

ವೀರಸೌಧ ಮುಂಭಾಗದ ಮನೆಗಳ ಗ್ಯಾಲರಿಯಲ್ಲಿ ನಿಂತಿದ್ದವರಿಗೆ ಮಾತ್ರ ಕೈ ನಾಯಕರ ದರ್ಶನ‌ ಸಿಗಲಿಲ್ಲ. ಏಕೆಂದರೆ ಗಂಟೆಗೂ ಹೆಚ್ಚು ಕಾಲ ನಿಂತಲ್ಲೇ ನಿಂತಿದ್ದ ಜನರನ್ನು ಪೊಲೀಸರು ಅಲ್ಲಿಂದ ತೆರವುಗೊಳಿಸಿದರು. ಇದರಿಂದ ನಾಯಕರನ್ನು ನೋಡಲು ಆಗದೇ ನಿರಾಸೆಯಿಂದ ಮನೆಯತ್ತ ಜನರು ಹೆಜ್ಜೆ ಹಾಕಿದರು.

ಇದಕ್ಕೂ ಮೊದಲು ಈಟಿವಿ ಭಾರತ ಜೊತೆಗೆ ಮಾತನಾಡಿದ ಸ್ಥಳೀಯರಾದ ರೇಖಾ ಕೋರಿಶೆಟ್ಟಿ, ನಮ್ಮ ಏರಿಯಾಕ್ಕೆ ನೂರು ವರ್ಷಗಳ ಹಿಂದೆ ಗಾಂಧೀಜಿ ಆಗಮಿಸಿದ್ದರು. ಇಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದ ಅಧ್ಯಕ್ಷತೆಯನ್ನು ಅವರು ವಹಿಸಿದ್ದು, ನಮಗೆ ಅತ್ಯಂತ ಹೆಮ್ಮೆ ಮತ್ತು ಖುಷಿ ವಿಚಾರ. ಈಗ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ರಾಷ್ಟ್ರೀಯ ನಾಯಕರನ್ನು ನೋಡಬೇಕೆಂದು ನಿಂತಿದ್ದೆವು. ಆದರೆ ನೋಡಲು ಆಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸುಮಾರು 2 ಗಂಟೆಯಿಂದ ನಿಂತಿದ್ದೇವೆ. ಆದರೆ, ರಾಹುಲ್ ಗಾಂಧಿ ಅವರನ್ನು ನೋಡಲು ನಮಗೆ ಪೊಲೀಸರು ಅವಕಾಶ ನೀಡುತ್ತಿಲ್ಲ.‌ ಅವರಷ್ಟಕ್ಕೆ ಅವರು ಬಂದು ಹೋದರೆ ಏನು ಉಪಯೋಗ.? ನಮಗೆ ತುಂಬಾ ನಿರಾಸೆಯಾಗಿದೆ ಎಂದು ಸ್ಥಳೀಯ ಮಲ್ಲಿಕಾರ್ಜುನ ಪ್ರತಿಕ್ರಿಯೆ ನೀಡಿದರು.

ಮತ್ತೋರ್ವ ಯುವತಿ ಮಾತನಾಡಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ ಸೇರಿ ದೊಡ್ಡ ದೊಡ್ಡ ಕಾಂಗ್ರೆಸ್ ನಾಯಕರು ನಮ್ಮ ಏರಿಯಾಕೆ ಬಂದಿದ್ದಾರೆ ಅಂತಾ ನಾವು ನೋಡಲು ತುಂಬಾ ಆಸೆಯಿಂದ ನಿಂತಿದ್ದೆವು. ಆದರೆ, ನಮಗೆ ಇಲ್ಲಿ ನಿಲ್ಲಬೇಡಿ ಅಂತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ಬೆಳಗಾವಿಯಲ್ಲಿ ನಡೆದಿದ್ದ ರಾಷ್ಟ್ರೀಯ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಅಂಗವಾಗಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ರಾಷ್ಟ್ರೀಯ ನಾಯಕರ ದಂಡೇ ಕುಂದಾನಗರಿಯಲ್ಲಿ ನೆರೆದಿದೆ.

ಇದನ್ನೂ ಓದಿ:ಕಾಂಗ್ರೆಸ್ ಅಧಿವೇಶನ ನಿಮಿತ್ತ ಕುಂದಾನಗರಿ ಸುತ್ತಮುತ್ತ ಲೈಟಿಂಗ್ಸ್: ಶತಮಾನದ ಬೆಳಕಿಗೆ ಏನಂತಾರೆ ಬೆಳಗಾವಿ ಜನ?

ಇದನ್ನೂ ಓದಿ: ರಾಹುಲ್​, ಮಲ್ಲಿಕಾರ್ಜುನ ಖರ್ಗೆ ಬೆಳಗಾವಿಗೆ ಆಗಮನ: ಸೆಲ್ಫಿಗೆ ಮುಗಿಬಿದ್ದ ಜನರು

ABOUT THE AUTHOR

...view details