ಬೆಳಗಾವಿ:ರಾಜ್ಯ, ರಾಷ್ಟ್ರ, ವಿದೇಶದಲ್ಲಿ ಕೆಲವು ವಿಶೇಷ ಘಟನಾವಳಿಗಳು ನಡೆದರೆ, ಅದರಲ್ಲಿ ಬೆಳಗಾವಿಯ ಹೆಜ್ಜೆ ಗುರುತುಗಳು ಇದ್ದೆ ಇರುತ್ತವೆ. ಅವು ಸಿಹಿ - ಕಹಿಗಳ ನೆನಪುಗಳ ಹೂರಣವು ಆಗಿರುತ್ತವೆ. ನಿನ್ನೆಯಷ್ಟೇ ನಡೆದ ಅಮೆರಿಕರದ ಚುನಾವಣೆಗೂ ಬೆಳಗಾವಿ ನಂಟಿದೆ. ಈ ನಂಟಿನ ಗಂಟನ್ನು ಈಟಿವಿ ಭಾರತದ ವಿಶೇಷ ವರದಿ ಬಿಚ್ಚಿಡುತ್ತಿದೆ.
ವಿಶ್ವವೇ ಕುತೂಹಲದಿಂದ ಕಾಯುತ್ತಿದ್ದ ಅಮೆರಿಕ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ನೇತೃತ್ವದ ರಿಪಬ್ಲಿಕನ್ ಪಕ್ಷದ ಭರ್ಜರಿ ಗೆಲುವು ಸಾಧಿಸಿದೆ. ಅಮೆರಿಕದ ಸಂಸತ್ತಿನ ಪ್ರತಿನಿಧಿಗಳ ಚುನಾವಣೆಯಲ್ಲಿ ಮಿಷಿಗನ್ ರಾಜ್ಯದಿಂದ ಸ್ಪರ್ಧಿಸಿದ್ದ ಬೆಳಗಾವಿ ಮಣ್ಣಿನ ಮಗ ಶ್ರೀನಿವಾಸ್ ಥಾಣೇಧಾರ್ ಕೂಡ ಗೆದ್ದಿದ್ದಾರೆ. ಈ ಮೂಲಕ ಅಮೆರಿಕ ರಾಜಕೀಯದಲ್ಲಿ ಕನ್ನಡ ನಾಡಿನ ಛಾಪು ಮೂಡಿಸಿದ್ದಾರೆ. ಸಾಹಿತಿ, ವಿಜ್ಞಾನಿ ಹಾಗೂ ಅಮೆರಿಕದ ಪ್ರಖ್ಯಾತ ಉದ್ಯಮಿಯಾಗಿರುವ ಶ್ರೀನಿವಾಸ್ ಥಾಣೇಧಾರ್ ಬೆಳಗಾವಿ ಮೂಲದವರು ಎಂಬುವುದು ಹೆಮ್ಮೆಯ ಸಂಗತಿ.
ಶ್ರೀನಿವಾಸ್ ಥಾಣೇಧಾರ್ಹಿನ್ನೆಲೆ:ಚಿಕ್ಕೋಡಿಯಲ್ಲಿ 1955ರ ಫೆ.22ರಂದು ಶ್ರೀನಿವಾಸ್ ಜನಿಸಿದ್ದಾರೆ. ಅವರ ತಂದೆ ಬೆಳಗಾವಿ ಕೋರ್ಟ್ನಲ್ಲಿ ನೌಕರಿ ಮಾಡುತ್ತಿದ್ದರು. ಹಾಗಾಗಿ, ಬೆಳಗಾವಿ ನಗರದ ಶಹಾಪುರದ ಮೀರಾಪುರ ಗಲ್ಲಿಯಲ್ಲಿ ವಾಸವಿದ್ದ ಶ್ರೀನಿವಾಸ್ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನ ಇಲ್ಲಿನ ಚಿಂತಾಮಣರಾವ್ ಸರ್ಕಾರಿ ಪದವಿ ಪೂರ್ವ ಶಾಲೆಯಲ್ಲಿ ಪೂರ್ಣಗೊಳಿಸಿದ್ದಾರೆ. ಬಳಿಕ ಪಿಯುಸಿ ಬೆಳಗಾವಿ ಕಾಲೇಜೊಂದರಲ್ಲಿ ಮುಗಿಸಿ ಕರ್ನಾಟಕ ವಿಶ್ವವಿದ್ಯಾಲಯದಿಂದ ಬಿಎಸ್ಸಿ ಪದವಿ ಪಡೆದಿದ್ದಾರೆ. 1977ರಲ್ಲಿ ಬಾಂಬೆ ವಿಶ್ವವಿದ್ಯಾಲಯದಿಂದ ರಸಾಯನ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಶ್ರೀನಿವಾಸ್, 1979ರಲ್ಲಿ ಅಮೆರಿಕಕ್ಕೆ ತೆರಳಿದ್ದರು. 1982ರಲ್ಲಿ ಪಾಲಿಮರ್ ಕೆಮಿಸ್ಟ್ರಿ ವಿಷಯದಲ್ಲಿ ಅಲ್ಲೇ ಪಿಹೆಚ್‌ಡಿ ಪದವಿ ಗಳಿಸಿದ್ದಾರೆ. 1982ರಿಂದ 1984ರವೆಗೆ ಮಿಷಿಗನ್ ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸಿದ್ದರು. 1984ರಿಂದ 1990ರವರೆಗೆ ಪಾಲಿಮರ್ ಸಿಂಥೆಸಿಸ್ ಕೆಮಿಸ್ಟ್ ಹಾಗೂ ಪ್ರಾಜೆಕ್ಟ್ ಲೀಡರ್ ಆಗಿ ಪೆಟ್ರೊಲೈಟ್ ಕಾರ್ಪೊರೇಷನ್‌ನಲ್ಲಿ ಕಾರ್ಯನಿರ್ವಹಿಸಿದ್ದ ಅವರು, ಬಳಿಕ ಸ್ವಂತ ಉದ್ಯಮ ಆರಂಭಿಸಿದ್ದರು.