ಬೆಂಗಳೂರು: ಕುಡಿಯುವ ನೀರಿನ ಸಮಸ್ಯೆ ಆಲಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಸಹಾಯವಾಣಿ ಆರಂಭಿಸಿದ ಮೊದಲ ದಿನವೇ ನೂರಾರು ಫೋನ್ ಕರೆಗಳು ಬಂದಿವೆ. ಬಹುತೇಕ ಕರೆಗಳು ನೀರಿನ ಬೇಡಿಕೆಗೆ ಸಂಬಂಧಿಸಿವೆ. ಪಾಲಿಕೆಯ ಪ್ರಮುಖ ಬಡಾವಣೆಗಳಿಂದ ಹೆಚ್ಚು ಕರೆಗಳು ಬಂದಿವೆ. ಇವು ನೀರಿನ ಬೇಡಿಕೆ, ಬತ್ತಿದ ಕೊಳವೆ ಬಾವಿಗಳು, ಟ್ಯಾಂಕರ್ ನೀರಿನ ಸರಬರಾಜಿಗಾಗಿ ಮೊರೆ ಹಾಗೂ ದುಬಾರಿ ಶುಲ್ಕಕ್ಕೆ ಸಂಬಂಧಿಸಿವೆ ಎಂದು ಪಾಲಿಕೆಯ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯು (ಬಿಡ್ಲ್ಯೂಎಸ್‌ಎಸ್‌ಬಿ) 1916 ಸಹಾಯವಾಣಿ ಆರಂಭಿಸಿದ್ದು, ಈ ಸಂಖ್ಯೆಗೆ ಕರೆ ಮಾಡಿ ನೀರಿನ ಸಮಸ್ಯೆಗಳ ಕುರಿತು ದೂರು ನೀಡಬಹುದು. ಮಾರ್ಚ್ 6ರಂದು ಸಹಾಯವಾಣಿ ಆರಂಭಿಸಿದ್ದು 24 ಗಂಟೆಗಳಲ್ಲಿ ಸಾಕಷ್ಟು ಕರೆಗಳು ಬಂದಿವೆ. ಅಪಾರ್ಟ್ಮೆಂಟ್ಗಳಿಂದಲೂ ನೀರಿನ ಅಭಾವ ಕುರಿತು ದೂರುಗಳು ಬಂದಿವೆ. ನೋಂದಣಿಯನ್ನು ಕಡ್ಡಾಯ ಮಾಡಿರುವುದರಿಂದ ಖಾಸಗಿ ಟ್ಯಾಂಕರ್ಗಳು ನೀರು ಸರಬರಾಜು ಮಾಡುತ್ತಿಲ್ಲ. ಆದ್ದರಿಂದ ಜಲಮಂಡಳಿಯ ಮುಖಾಂತರ ನೀರು ಪೂರೈಕೆ ಮಾಡುವಂತೆ ಬೇಡಿಕೆ ಬಂದಿದೆ. ಪಾಲಿಯು ನೀರಿನ ಸಮಸ್ಯೆ ಗಂಭೀರವಾಗಿರುವ ಮತ್ತು ಕೊಳಚೆ ಪ್ರದೇಶಗಳತ್ತ ಗಮನಹರಿಸಿದೆ. ವಿಶೇಷವಾಗಿ ನಗರದ ಹೊರ ವಲಯಗಳಲ್ಲಿ ನೀರಿನ ಅಭಾವ ಕಾಡುತ್ತಿದೆ. ಈ ಭಾಗಗಳಿಂದ ಬರುತ್ತಿರುವ ಕರೆಗಳಿಗೆ ಸ್ಪಂದಿಸುವುದು ಕಷ್ಟವಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದರು.