ಹಾವೇರಿ: ಹಾವೇರಿ ಲೋಕಸಭಾ ಬಿಜೆಪಿ ಅಭ್ಯರ್ಥಿ ಹಾಗೂ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ನಾಮಪತ್ರ ಸಲ್ಲಿಸುವ ವೇಳೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಮ್ಮ ಆಸ್ತಿ ವಿವರ ಘೋಷಣೆ ಮಾಡಿದ್ದಾರೆ. ತಾವು 29.58 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿರುವುದಾಗಿ ಘೋಷಿಸಿಕೊಂಡಿದ್ದಾರೆ.
ಬೊಮ್ಮಾಯಿ ಬಳಿ 3 ಲಕ್ಷ ರೂಪಾಯಿ ನಗದು ಹಣವಿದೆ. ಬ್ಯಾಂಕ್ ಹಾಗೂ ಫೈನಾನ್ಸ್‌ಗಳಲ್ಲಿ 51 ಲಕ್ಷ ರೂಪಾಯಿ ಠೇವಣಿ ಬಾಂಡ್, ವಿವಿಧ ಕಂಪನಿ ಶೇರ್‌ಗಳಲ್ಲಿ 3.30 ಕೋಟಿ ರೂಪಾಯಿ ಹೂಡಿಕೆ ಮಾಡಿದ್ದಾರೆ. 1.59 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಹೊಂದಿದ್ದಾರೆ. ಯಾವುದೇ ಸ್ವಂತ ವಾಹನ ಇಲ್ಲ.
ಒಟ್ಟು 6.12 ಕೋಟಿ ರೂಪಾಯಿ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. 96.80 ಲಕ್ಷ ರೂ ಮೌಲ್ಯದ ಕೃಷಿ ಜಮೀನು, 7 ಕೋಟಿ ರೂ ಮೌಲ್ಯದ ಕೃಷಿಯೇತರ ಜಮೀನು, 6.30 ಕೋಟಿ ರೂ ಮೌಲ್ಯದ ವಾಣಿಜ್ಯ ಕಟ್ಟಡ ಬೆಂಗಳೂರು ಹಾಗೂ ಶಿಗ್ಗಾವಿಯಲ್ಲಿ 9.18 ಕೋಟಿ ರೂ ಮೌಲ್ಯದ ವಾಸದ ಮನೆ ಸೇರಿದಂತೆ 23.45 ಕೋಟಿ ರೂ ಮೌಲ್ಯದ ಸ್ಥಿರಾಸ್ತಿ ಹೊಂದಿದ್ಧಾರೆ.
ಬೊಮ್ಮಾಯಿ ಅವರ ಮೇಲೆ 5.31 ಕೋಟಿ ರೂ ಸಾಲದ ಹೊರೆ ಇದೆ. 20 ಕೋಟಿ ರೂ ಮೌಲ್ಯದ ಪಿತ್ರಾರ್ಜಿತ ಆಸ್ತಿ ಹೊಂದಿದ್ದಾರೆ. ಪತ್ನಿ ಬಳಿ 1.32 ಕೋಟಿ ರೂ, ಪುತ್ರಿ ಬಳಿ 1.53 ಕೋಟಿ ರೂ ಚರಾಸ್ತಿ ಇದೆ.
ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಆಸ್ತಿ ವಿವರ:ಹಾವೇರಿ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಕೂಡ ಕೋಟ್ಯಧಿಪತಿ. ಇವರ ಒಟ್ಟು 55.67 ಕೋಟಿ ರೂ ಮೌಲ್ಯದ ಆಸ್ತಿ ಹೊಂದಿರುವುದಾಗಿ ಅಫಿಡವಿಟ್‌ನಲ್ಲಿ ಘೋಷಿಸಿಕೊಂಡಿದ್ದಾರೆ.
ಆನಂದಸ್ವಾಮಿ ಗಡ್ಡದೇವರಮಠ ಅವರ ಬಳಿ 50ಸಾವಿರ ರೂ ನಗದು, ಬ್ಯಾಂಕ್ ಮತ್ತು ಫೈನಾನ್ಸ್‌ಗಳಲ್ಲಿ
1.69 ಕೋಟಿ ರೂ ವಿಮೆ ಇದೆ. ಅಂಚೆ ಕಚೇರಿ ಇತ್ಯಾದಿಗಳಲ್ಲಿ 7.76 ಕೋಟಿ ರೂ ಠೇವಣಿ ಹೊಂದಿದ್ದಾರೆ. ವಿವಿಧ ಸಂಸ್ಥೆ, ಫರ್ಮ್ಸ್, ಟ್ರಸ್ಟ್‌ಗಳು ಹಾಗೂ ವೈಯಕ್ತಿಕ ಸಾಲವಾಗಿ 5.15 ಕೋಟಿ ರೂ ತೊಡಗಿಸಿದ್ದಾರೆ. ಒಂದು ಹೊಂಡಾ ಸಿಟಿ ಕಾರು, ಇನ್ನೋವಾ ಕ್ರಿಸ್ಟಾ, ಇನ್ನೋವಾ ಹೈಬ್ರಿಡ್ ಹಾಗೂ ಒಂದು ಬೈಕ್ ಸೇರಿದಂತೆ 50.54 ಲಕ್ಷ ರೂ ಮೌಲ್ಯದ ವಾಹನಗಳಿವೆ. 80 ಸಾವಿರ ಮೌಲ್ಯದ ಚಿನ್ನಾಭರಣವಿದೆ.
ಇವರ ಪತ್ನಿ 60 ಸಾವಿರ ರೂ ನಗದು ಸೇರಿದಂತೆ 6.80ಲಕ್ಷ ಚರಾಸ್ತಿ ಹೊಂದಿದ್ದಾರೆ. ಮೊದಲ ಪುತ್ರಿ 30.29 ಲಕ್ಷ, ಎರಡನೇ ಪುತ್ರಿ 10.28 ಲಕ್ಷ ಮತ್ತು ಮೂರನೇ ಪುತ್ರಿ 10.8 ಲಕ್ಷ ಹಾಗೂ ಪುತ್ರ 6.72 ಲಕ್ಷ ರೂ ಮೌಲ್ಯದ ಚರಾಸ್ತಿ ಹೊಂದಿದ್ದಾರೆ. ಪತ್ನಿ ಬಳಿ 49.72 ಲಕ್ಷ ಮೌಲ್ಯದ ಸ್ತಿರಾಸ್ತಿಯಿದೆ ಎಂದು ಆನಂದಸ್ವಾಮಿ ಗಡ್ಡದೇವರಮಠ ಘೋಷಿಸಿಕೊಂಡಿದ್ದಾರೆ.
ಇದನ್ನೂ ಓದಿ:ನಾ ಮಾಡಿದ ಅಭಿವೃದ್ಧಿಯೊಂದಿಗೆ ಮೋದಿ ಹೆಸರಲ್ಲಿ ಮತಯಾಚಿಸುತ್ತೇವೆ: ಬಸವರಾಜ ಬೊಮ್ಮಾಯಿ - Lok Sabha Election 2024