ಬೆಂಗಳೂರು:ಬಾಂಗ್ಲಾದೇಶದಿಂದ ಬಂದು 7 ವರ್ಷಗಳಿಂದ ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಆರೋಪಿಯನ್ನು ಕಾಡುಗೋಡಿ ಠಾಣೆ ವ್ಯಾಪ್ತಿಯಲ್ಲಿ ಬಂಧಿಸಲಾಗಿದೆ. ವಿದೇಶಿ ಪ್ರಜೆಗಳ ಪ್ರಾದೇಶಿಕ ನೋಂದಣಿ ಕೇಂದ್ರ (FRRO) ಹಾಗೂ ರಾಜ್ಯ ಆಂತರಿಕ ಭದ್ರತಾ ದಳದ ಅಧಿಕಾರಿಗಳ ಮಾಹಿತಿ ಆಧರಿಸಿ, ಕಾಡುಗೋಡಿ ಠಾಣೆ ಪೊಲೀಸರು ಬಾಂಗ್ಲಾದೇಶ ಮೂಲದ ಮಹಮ್ಮದ್ ರಂಜಾನ್ ಎಂಬಾತನನ್ನು ಬಂಧಿಸಿದ್ದಾರೆ.
ಬಾಂಗ್ಲಾದಲ್ಲಿ ತನ್ನ ಪತ್ನಿಯನ್ನು ತೊರೆದಿದ್ದ ಆರೋಪಿ, ವೈದ್ಯಕೀಯ ವೀಸಾ ಪಡೆದು ಭಾರತಕ್ಕೆ ಬಂದಿದ್ದ. ಬಳಿಕ ಭಾರತದಲ್ಲಿ ಇನ್ನೊಂದು ವಿವಾಹವಾಗಿ ಬೆಂಗಳೂರಿನಲ್ಲಿ ಕಸ ವಿಲೇವಾರಿ ಕೆಲಸ ಮಾಡಿಕೊಂಡು ವಾಸವಿದ್ದ. 2023ರಲ್ಲಿ ಪ್ರಕರಣವೊಂದರಲ್ಲಿ ಮಹದೇವಪುರ ಠಾಣೆ ಪೊಲೀಸರಿಂದ ಬಂಧಿತನಾಗಿದ್ದ ಆರೋಪಿ, ತಾನು ಪಶ್ಚಿಮ ಬಂಗಾಳದವನು ಎಂದು ಮಾಹಿತಿ ನೀಡಿ ಆಧಾರ್ ಕಾರ್ಡ್, ವೋಟರ್ ಐಡಿ ಹಾಗೂ ಚಾಲನಾ ಪರವಾನಗಿ ಸೇರಿದಂತೆ ಅಗತ್ಯ ದಾಖಲೆಗಳನ್ನು ನೀಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.