ಬಳ್ಳಾರಿ : ಭಾರತದ ನೆರೆಯ ರಾಷ್ಟ್ರ ಬಾಂಗ್ಲಾದೇಶದಲ್ಲಿ ಉಲ್ಬಣಗೊಂಡಿರುವ ಅರಾಜಕ ಪರಿಸ್ಥಿತಿ ಹಾಗೂ ರಾಜಕೀಯ ಅಸ್ಥಿರತೆಯು ಬಳ್ಳಾರಿಯ ಜೀನ್ಸ್ ಉದ್ಯಮಕ್ಕೆ ವರದಾನವಾಗಿ ಪರಿಣಮಿಸಿದೆ.
ಬಾಂಗ್ಲಾದೇಶವು ಕೆಲವು ತಿಂಗಳುಗಳ ಹಿಂದಿನವರೆಗೆ ಅಂದರೆ ರಾಜಕೀಯ ಬಿಕ್ಕಟ್ಟು ಆರಂಭವಾಗುವವರೆಗೂ ವಿಶ್ವದ ಅತಿದೊಡ್ಡ ಜೀನ್ಸ್ ರಫ್ತುದಾರ ರಾಷ್ಟ್ರಗಳಲ್ಲಿ ಒಂದಾಗಿತ್ತು. ಭಾರತದಲ್ಲಿನ ಟಾಪ್ ಬ್ರ‍್ಯಾಂಡ್‌ಗಳು ಇತ್ತೀಚಿನವರೆಗೂ ಜೀನ್ಸ್ಗಾಗಿ ಬಾಂಗ್ಲಾದೇಶವನ್ನು ಅವಲಂಬಿಸಿದ್ದವು. ಆದರೆ, ಈಗ ಭಾರತದ ಜೀನ್ಸ್ ರಾಜಧಾನಿ ಎಂದು ಕರೆಯಲ್ಪಡುವ ಬಳ್ಳಾರಿಯಲ್ಲಿರುವ ಘಟಕಗಳೊಂದಿಗೆ ಟಾಪ್ ಬ್ರ‍್ಯಾಂಡ್‌ಗಳು ಸಂಪರ್ಕದಲ್ಲಿವೆ ಎಂದು ಉದ್ಯಮ ತಜ್ಞರು ಹೇಳಿದ್ದಾರೆ.
ಬಳ್ಳಾರಿ ಜೀನ್ಸ್ ಉತ್ಪನ್ನಗಳ ತಯಾರಕರ ಸಂಘದ ಅಧ್ಯಕ್ಷ ಎಸ್ ವಿನಾಯಕ ರಾವ್ ಮಾತನಾಡಿದರು (ETV Bharat) ಸಾಮಾನ್ಯವಾಗಿ ಬಳ್ಳಾರಿಯಲ್ಲಿ ತಯಾರಾಗುತ್ತಿದ್ದ ಜೀನ್ಸ್ ಉತ್ಪನ್ನಗಳನ್ನು ಮುಂಬೈ ಮತ್ತು ಸೂರತ್‌ನ ವ್ಯಾಪಾರಿಗಳು ಮತ್ತು ವಿತರಕರು ಖರೀದಿಸುತ್ತಾರೆ. ಆದರೆ, ಈಗ ಬದಲಾದ ಪರಿಸ್ಥಿತಿಯಲ್ಲಿ ಕೆಲವು ಅಂತಾರಾಷ್ಟ್ರೀಯ ಬ್ರ‍್ಯಾಂಡ್‌ಗಳು ಮತ್ತು ಭಾರತದ ಪ್ರಮುಖ ಜೀನ್ಸ್ ಬ್ರ‍್ಯಾಂಡ್‌ಗಳು ಕೂಡಾ ಬಳ್ಳಾರಿ ಜೀನ್ಸ್ನೆಡೆಗೆ ಒಲವು ತೋರುತ್ತಿವೆ.
ಬಳ್ಳಾರಿ ನಗರ ಹಾಗೂ ಹೊರವಲಯದಲ್ಲಿ 500ಕ್ಕೂ ಹೆಚ್ಚು ಜೀನ್ಸ್ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, ಬಾಂಗ್ಲಾ ದೇಶದಲ್ಲಿನ ಅರಾಜಕ ಪರಿಸ್ಥಿತಿಯು ಇವುಗಳಿಗೆ ವರದಾನವಾಗಿದೆ ಎಂದು ಹೇಳಬಹುದು. ವ್ಯಾಪಾರಿ ತಜ್ಞರ ಅಂಕಿ - ಅಂಶಗಳ ಪ್ರಕಾರ, ಬಾಂಗ್ಲಾದೇಶದಲ್ಲಿ ರಾಜಕೀಯ ಅಶಾಂತಿಯು ಅಲ್ಲಿನ ಉದ್ಯಮದ ಮೇಲೆ ಪರಿಣಾಮ ಬೀರಿದ ನಂತರ, ಬಳ್ಳಾರಿಯ ಪ್ರತಿ ಜೀನ್ಸ್ ಘಟಕದಲ್ಲಿ ಈಗ ಶೇ. 30ರಷ್ಟು ಹೆಚ್ಚು ವ್ಯಾಪಾರವಾಗುತ್ತಿದೆ ಎಂದು ಅಂದಾಜಿಸಲಾಗಿದೆ. ಬಳ್ಳಾರಿಯಲ್ಲಿನ ಪ್ರತಿ ಘಟಕವು ಪ್ರತಿ ತಿಂಗಳು 5 ರಿಂದ 10 ಲಕ್ಷ ರೂಪಾಯಿಗಳವರೆಗೆ ಲಾಭ ಗಳಿಸುತ್ತಿದೆ ಎಂದಿದ್ದಾರೆ.
ಜೀನ್ಸ್ ಬಟ್ಟೆಗಳು (ETV Bharat) ಸರ್ಕಾರ ನಮಗೆ ನೆರವು ನೀಡಿದರೆ ನಾವು ಇನ್ನಷ್ಟು ಬೆಳೆಯಬಹುದು : ಬಳ್ಳಾರಿ ಜೀನ್ಸ್ ಉತ್ಪನ್ನಗಳ ತಯಾರಕರ ಸಂಘದ ಅಧ್ಯಕ್ಷ ಹಾಗೂ ಜೀನ್ಸ್ ಘಟಕಗಳ ಮಾಲೀಕರಾದ ಎಸ್. ವಿನಾಯಕ ರಾವ್ ಅವರು ಮಾತನಾಡಿ, ''ಬಾಂಗ್ಲಾ ದೇಶದ ಜೀನ್ಸ್ ಉದ್ಯಮ ರಫ್ತು ವಲಯದಲ್ಲಿ ಕುಸಿತ ಕಾಣುತ್ತಿರುವುದರಿಂದ ಬಳ್ಳಾರಿಯ ಜೀನ್ಸ್ ಉತ್ಪನ್ನಗಳಿಗೆ ಒಳ್ಳೆಯ ಅವಕಾಶವಿದೆ. ಭಾರತದಲ್ಲಿ ಎಲ್ಲೆಲ್ಲಿ ಗಾರ್ಮೆಂಟ್ಸ್ ಇವೆಯೋ ಅಲ್ಲೆಲ್ಲ ಅವಕಾಶ ಇದೆ. ಗುಜರಾತ್ನಲ್ಲಿ ಅಹಮ್ಮದಾಬಾದ್, ಮುಂಬೈ, ಕಲ್ಕತ್ತಾ, ದೆಹಲಿಯಲ್ಲಿಯೂ ಬೇಡಿಕೆ ಹೆಚ್ಚಿದೆ. ಇವಾಗ ಯುವಕರು ಬಂದರೆ ವ್ಯಾಪಾರ ಆಗುತ್ತೆ. ಈ ಸಮಯದಲ್ಲಿ ಸರ್ಕಾರ ನಮಗೆ ಸಪೋರ್ಟ್ ಮಾಡಿದರೆ ನಾವು ಬೆಳೆಯಬಹುದು'' ಎಂದರು.
ಜೀನ್ಸ್ ಉತ್ಪನ್ನಗಳ ತಯಾರಿಕೆಯಲ್ಲಿ ತೊಡಗಿರುವ ಸಿಬ್ಬಂದಿ (ETV Bharat) ನಾವು ಜಾಗತಿಕವಾಗಿ ಪೈಪೋಟಿ ನೀಡಬಹುದು :''ಬಾಂಗ್ಲಾದೇಶದ ರಾಜಕೀಯ ಬೆಳವಣಿಗೆಯಿಂದಾಗಿ ಅಲ್ಲಿನ ಗಾರ್ಮೆಂಟ್ಸ್ ಉದ್ಯಮಕ್ಕೆ ಹೊಡೆತ ಬಿದ್ದಿದೆ. ಇದರಿಂದಾಗಿ ನಮ್ಮ ಬಳ್ಳಾರಿಯ ಜೀನ್ಸ್ ಉದ್ಯಮಕ್ಕೆ ಸ್ವಲ್ಪ ಅನುಕೂಲವಾಗುವ ವಾತಾವರಣ ಕಾಣುತ್ತಿದೆ. ಈಗ ಸ್ವಲ್ಪ, ಸ್ವಲ್ಪ ಆರ್ಡರ್ಗಳು ಬರುತ್ತಿವೆ. ನಾವು ಗುಣಮಟ್ಟದ ಉತ್ಪನ್ನಗಳನ್ನ ಕೊಟ್ಟರೆ ನಮಗೆ ಹೆಚ್ಚೆಚ್ಚು ಅವಕಾಶಗಳು ಸಿಗುತ್ತವೆ, ದೊಡ್ಡ ಕಂಪನಿಗಳು ನಮ್ಮತ್ತ ಬರಲಿವೆ. ಏಕೆಂದರೆ, ಮೊದಲಿನಿಂದಲೂ ಬಳ್ಳಾರಿ ಜೀನ್ಸ್ ಫೇಮಸ್ ಇದೆ. ಇತ್ತೀಚಿಗೆ ಗುಣಮಟ್ಟದಲ್ಲಿ ಕಡಿಮೆಯಾಗಿ ಸ್ವಲ್ಪ ಹಿಂದುಳಿದಿದ್ದೇವೆ. ಸರ್ಕಾರ ಸಹಾಯಧನ ನೀಡಿದರೆ ನಾವು ಜಾಗತಿಕವಾಗಿ ಪೈಪೋಟಿ ನೀಡಬಹುದು'' ಎಂದು ಜೀನ್ಸ್ ಡೈಯಿಂಗ್ ಘಟಕದ ಮಾಲೀಕರ ಸಂಘದ ಅಧ್ಯಕ್ಷ ಇಬ್ರಾಹಿಂ ಬಾಬು ಹೇಳಿದರು.
ಜೀನ್ಸ್ ಬಟ್ಟೆ ತಯಾರಿಕೆಯಲ್ಲಿ ತೊಡಗಿರುವುದು (ETV Bharat) ಬಳ್ಳಾರಿಯಲ್ಲಿ ಸುಮಾರು 500 ಜೀನ್ಸ್ ಬಟ್ಟೆಗಳ ತಯಾರಿಕಾ ಘಟಕಗಳಿವೆ. ನಿತ್ಯ 2 ಲಕ್ಷ ಜೀನ್ಸ್ ಉತ್ಪನ್ನಗಳು ತಯಾರಾಗುತ್ತವೆ. 30ಕ್ಕೂ ಹೆಚ್ಚು ಡೈಯಿಂಗ್ ಘಟಕಗಳು ಬಳ್ಳಾರಿ ಹೊರ ವಲಯದ ಮುಂಡರಗಿಯಲ್ಲಿವೆ. ಬಳ್ಳಾರಿ ಜೀನ್ಸ್ ಉದ್ಯಮಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಜೀನ್ಸ್ ಪಾರ್ಕ್ ಸ್ಥಾಪಿಸುವ ಆಶ್ವಾಸನೆ ನೀಡಿದೆ. ಆದರೆ, ಅದರ ಸಾಕಾರ ಯಾವಾಗ ಆಗುತ್ತದೆ ಎಂಬುದರ ಸ್ಪಷ್ಟತೆ ಯಾರಿಗೂ ಕಾಣುತ್ತಿಲ್ಲ. ಅನಿರೀಕ್ಷಿತವಾಗಿ ಸ್ಥಳೀಯ ಜೀನ್ಸ್ ಉದ್ಯಮಕ್ಕೆ ಲಭಿಸಿರುವ ಈ ಅವಕಾಶದ ಸದುಪಯೋಗವನ್ನು ಉದ್ಯಮ ಹಾಗೂ ರಾಜ್ಯ ಸರ್ಕಾರ ಪಡೆದುಕೊಳ್ಳಬೇಕಾಗಿದೆ. ಬಳ್ಳಾರಿ ಜೀನ್ಸ್ ಉದ್ಯಮವು ಜಾಗತಿಕ ಮಾರುಕಟ್ಟೆಯಲ್ಲಿ ಹೆಸರುಗಳಿಸುವಂತಾಗಲಿ ಎಂದು ಬಳ್ಳಾರಿ ಜೀನ್ಸ್ ಉತ್ಪಾದಕರು ಬಯಸುತ್ತಿದ್ದಾರೆ.
ಇದನ್ನೂ ಓದಿ :ಮುಂದಿನ ದಿನಗಳಲ್ಲಿ ಬೆಳಗಾವಿಗೆ ವಿಶೇಷ ಕೊಡುಗೆ ಘೋಷಣೆ: ಡಿಸಿಎಂ ಡಿ.ಕೆ.ಶಿವಕುಮಾರ್ - DCM D K SHIVAKUMAR