ಬೆಂಗಳೂರು:ಬಿ.ವೈ.ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಬಳಿಕ ಬಿಜೆಪಿಯ ಪ್ರಥಮ ರಾಜ್ಯ ಕಾರ್ಯಕಾರಿಣಿ ಸಭೆಯು ಜನವರಿ 27ರಂದು ನಗರದ ಮೈದಾನದಲ್ಲಿರುವ ಗಾಯತ್ರಿ ವಿಹಾರದಲ್ಲಿ ನಡೆಯಲಿದ್ದು, ಲೋಕಸಭಾ ಚುನಾವಣಾ ಸಿದ್ದತೆ ಕುರಿತು ಮಹತ್ವದ ಸಮಾಲೋಚನೆ ನಡೆಸಲಾಗುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಗೌಡ ತಿಳಿಸಿದರು.
ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕಾರಿಣಿ ಸಭೆಯಲ್ಲಿ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡು ಪಕ್ಷದ ಚಟುವಟಿಕೆ ಜೊತೆಗೆ ನಮ್ಮ ಮುಂದಿನ ಕಾರ್ಯಯೋಜನೆ ಕುರಿತು ಚರ್ಚೆ ನಡೆಯಲಿದೆ. ಶಾಸಕರು, ಸಂಸದರು, ಮಾಜಿ ಶಾಸಕರು, ಪರಾಜಿತ ಅಭ್ಯರ್ಥಿಗಳು ಸೇರಿದಂತೆ 900ಕ್ಕೂ ಹೆಚ್ಚು ಅಪೇಕ್ಷಿತರು ಈ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಹೇಳಿದರು.
ಆ ನಿಟ್ಟಿನಲ್ಲಿ ಬಿಜೆಪಿ ರಾಜ್ಯ ಘಟಕವು 10 ದಿನಗಳಿಂದ ಪೂರ್ವಭಾವಿ ಸಭೆ ನಡೆಸುತ್ತಿದೆ. ಬೆಂಗಳೂರಿನ 3 ಸಂಘಟನಾತ್ಮಕ ಜಿಲ್ಲೆಗಳ ಅಧ್ಯಕ್ಷ ಬೆಂಗಳೂರು ದಕ್ಷಿಣ ಜಿಲ್ಲಾಧ್ಯಕ್ಷ ಶಾಸಕ ಕೆ.ಸಿ. ರಾಮಮೂರ್ತಿ, ಮಾಜಿ ಉಪಮೇಯರ್, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಬೆಂಗಳೂರು ಕೇಂದ್ರ ಜಿಲ್ಲಾಧ್ಯಕ್ಷ ಸಪ್ತಗಿರಿ ಗೌಡ, ಪದಾಧಿಕಾರಿಗಳು, ಶಾಸಕರ ಮಾರ್ಗದರ್ಶನದಲ್ಲಿ ಯಶಸ್ಸಿಗೆ ಪೂರ್ವತಯಾರಿ ನಡೆದಿದೆ ಎಂದು ತಿಳಿಸಿದರು.
25ಕ್ಕೂ ಹೆಚ್ಚು ವೃತ್ತಗಳಲ್ಲಿ ಪ್ರಮುಖರಿಗೆ ಸ್ವಾಗತ ಕೋರುತ್ತಿದ್ದಾರೆ. ಅಪೇಕ್ಷಿತರಿಗೆ ವ್ಯವಸ್ಥಿತವಾಗಿ ವಾಹನ ವ್ಯವಸ್ಥೆ, ಕೊಠಡಿ ವ್ಯವಸ್ಥೆ ಸೇರಿ ಎಲ್ಲ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಆಯೋಜಿಸಿದ್ದಾರೆ. ರಾಜ್ಯ ಸರಕಾರದ ಧೋರಣೆ, ಹಿಂದೂ ವಿರೋಧಿ ನೀತಿ, ಅಭಿವೃದ್ಧಿ ಕುಂಠಿತವಾದುದನ್ನು ಚರ್ಚೆ ಮಾಡಲಾಗುವುದು. ಅನೇಕ ವಿಷಯಗಳನ್ನು ಚರ್ಚಿಸಿ ನಿರ್ಣಯ ಕೈಗೊಳ್ಳುವುದಾಗಿ ಇದೇ ವೇಳೆ ಅವರು ಸ್ಪಷ್ಟ ಪಡಿಸಿದರು.