ಬಾಗಲಕೋಟೆ:ಶಾಲೆಗೆ ತೆರಳಿ ವಿದ್ಯಾಭ್ಯಾಸ ಮಾಡದಿದ್ದರೂ ಗ್ರಾಮೀಣ ವ್ಯಕ್ತಿಯೊಬ್ಬರು ಜಾನಪದ ಕಲೆಯ ಮೂಲಕ ಸಾಧನೆ ಮಾಡಿದ್ದಾರೆ. ಸುಮಾರು ಸಾವಿರಕ್ಕೂ ಅಧಿಕ ತತ್ವಪದ, ದೇವಿಯ ಮೇಲಿನ ಪದ ಹಾಗೂ ಇತರ ವಿಷಯಗಳ ಮೇಲೆ ಪದಗಳನ್ನು ಹಾಡಿ, ಹಲವು ಪ್ರಶಸ್ತಿಗಳನ್ನು ಗಿಟ್ಟಿಸಿಕೊಂಡು, ಈಗ ಪ್ರಧಾನ ಮಂತ್ರಿ ನರೆಂದ್ರ ಮೋದಿ ಅವರ ಮನ ಕೀ ಬಾತ್ನಲ್ಲಿ ಪ್ರಶಂಸೆ ಪಡೆದುಕೊಳ್ಳುವ ಮೂಲಕ ಬಾಗಲಕೋಟೆ ವೆಂಕಟಪ್ಪ ಸುಗತೇಕರ ಗಮನ ಸೆಳೆದಿದ್ದಾರೆ.
ನವನನಗರದ ನಿವಾಸಿ ವೆಂಕಪ್ಪ ಸುಗತೇಕರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಮನ್ ಕೀ ಬಾತ್ ರೇಡಿಯೋ ಸರಣಿಯ 110ನೇ ಕಾರ್ಯಕ್ರಮದಲ್ಲಿ ಗುಣಗಾನ ಮಾಡಿದ್ದಾರೆ. ಕರ್ನಾಟಕದ ಬಾಗಲಕೋಟೆಯ ಜಾನಪದ ಗಾಯಕ ವೆಂಕಪ್ಪ ಅಂಬಾಜಿ ಸುಗತೇಕರ್ ಸಾಧನೆ ಕುರಿತು ಮೆಚ್ಚುಗೆ ಮಾತುಗಳನ್ನು ಆಡಿದ್ದಾರೆ. ಭಾರತದ ಸಂಸ್ಕೃತಿ, ಗಾಯನಗಳಿಗೆ ಲಕ್ಷಾಂತರ ಜನ ಕೊಡುಗೆ ನೀಡಿದ್ದಾರೆ. ಕರ್ನಾಟಕದ ಬಾಗಲಕೋಟೆ ನಿವಾಸಿಯಾದ ವೆಂಕಪ್ಪ ಅಂಬಾಜಿ ಸುಗತೇಕರ್ ಅವರು ಸಾವಿರಕ್ಕೂ ಅಧಿಕ ಜನಪದ (ಗೊಂದಲಿ) ಹಾಡುಗಳನ್ನು ಹಾಡಿ ಜನಪ್ರಿಯರಾಗಿದ್ದಾರೆ
ಹಾಗೆಯೇ, ಇವರು ಒಂದು ರೂಪಾಯಿಯನ್ನೂ ಪಡೆಯದೇ ಸಾವಿರಾರು ಜನರಿಗೆ ಜನಪದ ಹಾಡುಗಳನ್ನು ಹಾಡುವುದನ್ನು ಕಲಿಸಿದ್ದಾರೆ. ಇವರ ಸೇವೆ ಶ್ಲಾಘನೀಯವಾಗಿದೆ” ಎಂದು ಪ್ರಧಾನಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 81 ವರ್ಷದ ವೆಂಕಪ್ಪ ಸುಗತೇಕರ್ ಅವರು 150ಕ್ಕೂ ಹೆಚ್ಚು ಕಥೆ ಹೇಳುವ ಸಾವಿರಕ್ಕೂ ಅಧಿಕ ಗೊಂದಳಿ ಹಾಡು ಹಾಡಿದ್ದಾರೆ. ಕಳೆದ 71 ವರ್ಷದಿಂದ ಗೊಂದಲಿ ಪದಗಳ ಮೂಲಕ ಸಮಾಜಕ್ಕೆ ತಮ್ಮ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಸರಕಾರದಿಂದ 2022 ರಲ್ಲಿ ಗೊಂದಳಿ ಪದ ಸೇವೆಗೆ ಜನಪದ ವಿವಿಯಿಂದ ಗೌರವ ಡಾಕ್ಟರೇಟ್ ಕೂಡಾ ಪಡೆದಿದ್ದಾರೆ.